ನೀರವ್ ಮೋದಿ ನಾಪತ್ತೆಯಾಗಿಲ್ಲ, ವ್ಯವಹಾರದ ನಿಮಿತ್ತ ವಿದೇಶದಲ್ಲಿದ್ದಾರೆ: ವಕೀಲರ ಹೇಳಿಕೆ

Update: 2018-02-21 17:34 GMT

ಮುಂಬೈ, ಫೆ.21: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ಉದ್ಯಮಿ ನೀರವ್ ಮೋದಿ ತಲೆಮರೆಸಿಕೊಂಡಿದ್ದಾರೆ ಎಂಬ ವರದಿಗಳನ್ನು ಅವರ ವಕೀಲರು ನಿರಾಕರಿಸಿದ್ದು, ನೀರವ್ ಮೋದಿ ವ್ಯವಹಾರದ ಪ್ರಯುಕ್ತ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಕೀಲ ವಿಜಯ್ ಅಗರ್‌ವಾಲ್, ನೀರವ್ ಮೋದಿ ತಲೆಮರೆಸಿಕೊಂಡಿದ್ದಾರೆ ಎಂಬುದು ನಿಮ್ಮ ಗ್ರಹಿಕೆಯಾಗಿದೆ. ಅವರ ವ್ಯವಹಾರ ಜಾಗತಿಕ ಮಟ್ಟದಲ್ಲಿ ವಿಸ್ತರಿಸಿದ್ದು ವ್ಯವಹಾರದ ಪ್ರಯುಕ್ತ ಅವರು ಭಾರತದಿಂದ ಹೊರಗೆ ಹೋಗಿದ್ದಾರೆ. ಅಲ್ಲದೆ ಅವರ ಕುಟುಂಬ ಸದಸ್ಯರೂ (ಇವರಲ್ಲಿ ಹೆಚ್ಚಿನವರು ವಿದೇಶದ ಪ್ರಜೆಗಳು)ಹೆಚ್ಚಾಗಿ ವಿದೇಶದಲ್ಲೇ ನೆಲೆಸಿರುತ್ತಾರೆ. ಈಗ ಮೋದಿಯವರ ಪಾಸ್‌ಪೋರ್ಟನ್ನು ರದ್ದುಗೊಳಿಸಲಾಗಿದೆ.

5,000 ಕೋಟಿ ರೂ.ಗಳಷ್ಟು ಮೊತ್ತದ ಆಸ್ತಿಯನ್ನು ಭಾರತದಲ್ಲಿ ಬಿಟ್ಟು ಮೋದಿ ಯಾಕೆ ಪರಾರಿಯಾಗಬೇಕು ಎಂದು ಅಗರ್‌ವಾಲ್ ಪ್ರಶ್ನಿಸಿದರು.

ಎಲ್ಲಾ ವ್ಯವಹಾರ ಪಿಎನ್‌ಬಿ ಬ್ಯಾಂಕಿಗೆ ಗೊತ್ತಿದ್ದೇ ನಡೆದಿದೆ ಮತ್ತು ಬ್ಯಾಂಕ್‌ಗೆ ಕೋಟ್ಯಾಂತರ ರೂಪಾಯಿ ಕಮಿಷನ್ ದೊರೆತಿದೆ. ಹೀಗಿದ್ದೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಾಣಿಜ್ಯ ವಹಿವಾಟನ್ನು ‘ವಂಚನೆ’ ಎಂದು ಬಿಂಬಿಸಿದೆ ಎಂದವರು ಟೀಕಿಸಿದರು. ನೀರವ್ ಮೋದಿಯವರ ಸಂಸ್ಥೆಗಳನ್ನು ಮುಚ್ಚಲಾಗಿದೆ. ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈಗ ಎಲ್ಲವೂ ಅಸ್ಪಷ್ಟವಾಗಿದೆ. ಸಿಬಿಐ ಆರೋಪಪಟ್ಟಿ ದಾಖಲಿಸಿದ ಬಳಿಕ ಮುಂದಿನ ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ಅಗರ್‌ವಾಲ್ ಹೇಳಿದರು.

ಈ ಪ್ರಕರಣದಲ್ಲಿ ಹಗರಣದ ಮೊತ್ತ 280 ಕೋಟಿ ರೂ. ಇದು 5,000 ಕೋಟಿ ರೂ.ಗೆ ಏರಲೂಬಹುದು ಎಂದು ಸ್ವತಃ ಸಿಬಿಐ ಹೇಳಿಕೆ ನೀಡಿದೆ. ಆದರೆ 11,400 ಕೋಟಿ ರೂ. ವಂಚನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಮಾಧ್ಯಮಗಳಿಗೆ ಎಲ್ಲಿಂದ ಈ ಅಂಕಿಅಂಶಗಳು ದೊರಕಿದೆ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News