ಪಿಎನ್‌ಬಿ ವಂಚನೆ: ವಿತ್ತ ಸಚಿವ ಜೇಟ್ಲಿ ಜವಾಬ್ದಾರಿ ಹೊರಲಿ; ಯಶವಂತ್ ಸಿನ್ಹಾ
ಹೊಸದಿಲ್ಲಿ, ಫೆ.21: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ, ಈ ಹಗರಣವು ವ್ಯವಸ್ಥೆಯ ವೈಫಲ್ಯದ ಫಲವಾಗಿದೆ. ಹಾಗಾಗಿ ವಿತ್ತ ಸಚಿವರು ಈ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ತಮ್ಮ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿತ್ತ ಸಚಿವರು ವೈಯಕ್ತಿಕವಾಗಿ ತಮ್ಮ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳ ದೈನಂದಿನ ಕಾರ್ಯಗಳ ಮೇಲೆ ನಿಗಾಯಿಡಲು ಸಾಧ್ಯವಿಲ್ಲ. ಆದರೆ ನಮ್ಮ ಸಂಸದೀಯ ವ್ಯವಸ್ಥೆಯಲ್ಲಿ ಅಂತಿಮ ಜವಾಬ್ದಾರಿಯು ಆ ಸಚಿವಾಲಯವನ್ನು ನಿಬಾಯಿಸುತ್ತಿರುವ ಸಚಿವರದ್ದೇ ಆಗಿರುತ್ತದೆ. ಪಿಎನ್‌ಬಿ ಪ್ರಕರಣದಲ್ಲಿ ಇರುವ ಗೊಂದಲಗಳನ್ನು ದೂರ ಮಾಡಲು ಸರಕಾರವು ತನ್ನ ಬಳಿಯಿರುವ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಸಿನ್ಹಾ ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆಗ್ರಹಿಸಿದ್ದಾರೆ. ಹಗರಣಕ್ಕೆ ಸಂಬಂಧಿಸಿ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿರುವ ಸರಕಾರ ಮತ್ತು ವಿಪಕ್ಷದ ವಿರುದ್ಧ ಹರಿಹಾಯ್ದಿರುವ ಸಿನ್ಹಾ, ಇದೊಂದು ಗಂಭೀರ ವಿಷಯವಾಗಿದೆ, ವಿತ್ತ ಸಚಿವರು ಈ ಹಗರಣದಲ್ಲಿ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಅವರು ಈ ವಂಚನೆಯ ಜವಾಬ್ದಾರಿಯನ್ನು ಹೊರಬೇಕು ಎಂದು ತಿಳಿಸಿದ್ದಾರೆ.
1992ರಲ್ಲಿ ಹರ್ಷದ್ ಮೆಹ್ತಾ ಹಗರಣದಲ್ಲಿ ವಿತ್ತ ಸಚಿವರಾಗಿದ್ದ ಡಾ. ಮನ್‌ಮೋಹನ್ ಸಿಂಗ್ ಅವರನ್ನು ಜವಾಬ್ದಾರರನ್ನಾಗಿಸಲಾಗಿತ್ತು. ಇದೇ ರೀತಿ ಕೇತನ್ ಪಾರೆಕ್ ಹಗರಣ ನಡೆದಾಗ ವಿತ್ತ ಸಚಿವನಾಗಿದ್ದ ನಾನು ವಿಚಾರಣೆ ಎದುರಿಸಬೇಕಾಗಿ ಬಂದಿತ್ತು. ಈಗ ಪಿಎನ್‌ಬಿ ಹಗರಣದಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಜವಾಬ್ದಾರಿ ಹೊತ್ತು ವಿಚಾರಣೆ ಎದುರಿಸಬೇಕು ಎಂದು ಸಿನ್ಹಾ ಆಗ್ರಹಿಸಿದ್ದಾರೆ.
ಯಶವಂತ್ ಸಿನ್ಹಾ ಹಿಂದಿನಿಂದಲೂ ಕೇಂದ್ರ ಸರಕಾರದ ಆರ್ಥಿಕ ನೀತಿಯನ್ನು ಟೀಕಿಸುತ್ತಲೇ ಬಂದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಬಹುತೇಕ ನಾಶವಾಗಿದೆ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.