ಡಾರ್ಜಿಲಿಂಗ್‌ನಿಂದ ಸೇನೆ ಹಿಂದೆಗೆಯಲು ಸುಪ್ರೀಂ ಕೋರ್ಟ್ ಅನುಮತಿ
ಹೊಸದಿಲ್ಲಿ, ಫೆ. 21: ಹಿಂಸಾಚಾರ ಪೀಡಿತ ಪಶ್ಚಿಮಬಂಗಾಳದ ಡಾರ್ಜಿಲಿಂಗ್ ಪ್ರದೇಶದಲ್ಲಿ ಉಳಿದಿರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ನಾಲ್ಕು ಕಂಪೆನಿಗಳನ್ನು ಮಾರ್ಚ್ 8ರ ಬಳಿಕ ಹಿಂದೆ ತೆಗೆಯಲು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಅನುಮತಿ ನೀಡಿದೆ. ಸಿಎಪಿಎಫ್ ನಿಯೋಜನೆ ಕೇಂದ್ರ ಸರಕಾರದ ಆಡಳಿತದ ವ್ಯಾಪ್ತಿಗೆ ಬರುತ್ತದೆ ಹಾಗೂ ಡಾರ್ಜಿಲಿಂಗ್ ಪ್ರದೇಶದಿಂದ ಉಳಿದ ಸಿಎಪಿಎಫ್ ಕಂಪೆನಿಗಳನ್ನು ಹಿಂದೆ ತೆಗೆಯಲು ಅನುಮತಿ ನೀಡುವಂತೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ನ್ಯಾಯಪೀಠ ಅಂಗೀಕರಿಸಿತು.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಳದೇ ಇರುವುದರಿಂದ ಡಾರ್ಜಿಲಿಂಗ್‌ನಿಂದ ಸಿಎಪಿಎಫ್ ಕಂಪೆನಿಗಳನ್ನು ಹಿಂದೆ ತೆಗೆಯುವುದನ್ನು ರದ್ದುಗೊಳಿಸಿ ಕೋಲ್ಕತಾ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಡಾರ್ಜಿಲಿಂಗ್ ಹಾಗೂ ಕಾಲಿಪೋಂಗ್‌ನಲ್ಲಿ ಸಿಎಪಿಎಫ್‌ನ 8 ಕಂಪೆನಿಗಳಲ್ಲಿ 4 ಕಂಪೆನಿಗಳನ್ನು ಹಿಂದೆ ತೆಗೆಯುಲು ಕೇಂದ್ರ ಸರಕಾರಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.