ಮಾನಸಿಕ ಅಸ್ವಸ್ಥನಿಗೆ ಥಳಿಸುತ್ತಾ ಸೆಲ್ಫಿ ತೆಗೆದರು!

Update: 2018-02-23 06:30 GMT

ಪಾಲಕ್ಕಾಡ್, ಫೆ.23: ಕಳ್ಳತನ ಆರೋಪದಲ್ಲಿ 27 ವರ್ಷದ ಆದಿವಾಸಿ ಯುವಕನೊಬ್ಬನನ್ನು ಗುಂಪೊಂದು ಥಳಿಸಿ ಕೊಂದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಗ್ರಾಮವೊಂದರಲ್ಲಿ  ನಡೆದಿದ್ದು, ಹಲ್ಲೆ ನಡೆಸುವ ವೇಳೆ ದುಷ್ಕರ್ಮಿಗಳು ಕೃತ್ಯದ ಸೆಲ್ಫಿ ತೆಗೆದಿದ್ದಾರೆ. 

ಪೊಲೀಸರು ಘಟನೆಯ ಬಗ್ಗೆ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿ ಹಲ್ಲೆಗೊಳಗಾದ ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ತೀವ್ರ ಗಾಯಗಳಿಂದಾಗಿ ಮೃತಪಟ್ಟಿದ್ದಾನೆ.

ಗ್ರಾಮದ ಪಕ್ಕದ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನೆನ್ನಲಾಗಿದ್ದು, ಸ್ಥಳೀಯ ಅಂಗಡಿಗಳಿಂದ ಸಾಮಾನುಗಳನ್ನು ಕದಿಯುತ್ತಿದ್ದನೆಂದು ಹೇಳಲಾಗಿದೆ. ಗುರುವಾರ ಕೆಲ ಸ್ಥಳೀಯರು ಆತನನ್ನು ಹಿಡಿದು ಕಟ್ಟಿ ಹಾಕಿ ಗಂಟೆಗಟ್ಟಲೆ ಆತನನ್ನು ಹಿಂಸಿಸಿದ್ದರು. ಅಮಾನವೀಯತೆಯ ಪರಮಾವಧಿಯೆಂಬಂತೆ ಈ ಸಂದರ್ಭ ಹಲವರು ಸೆಲ್ಫಿಗಳನ್ನೂ ಕ್ಲಿಕ್ಕಿಸಿದ್ದರು.

ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸುವಷ್ಟರ ಹೊತ್ತಿಗೆ ಸಂಜೆಯಾಗಿದ್ದು, ಅಷ್ಟೊತ್ತಿಗಾಗಲೇ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ. ಪೋಸ್ಟ್ ಮಾರ್ಟಂ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲ ವಾರಗಳ ಅವಧಿಯಲ್ಲಿ ಇದು ಕೇರಳದಲ್ಲಿ ನಡೆದ ಇಂತಹ ಮೂರನೇ ಘಟನೆಯಾಗಿದೆ. ಇತ್ತೀಚೆಗೆ ತೃತೀಯ ಲಿಂಗಿ ವ್ಯಕ್ತಿಯೊಬ್ಬನನ್ನು ತಿರುವನಂತಪುರದಲ್ಲಿ ಗುಂಪೊಂದು ವಿವಸ್ತ್ರಗೊಳಿಸಿ ಕಿರುಕುಳ ನೀಡಿತ್ತು,

ಜನವರಿ ತಿಂಗಳಲ್ಲಿ ಪಲ್ಲಿಪುರಂ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಮೂವರು ಮಹಿಳೆಯರು ಸಾರ್ವಜನಿಕರೆದುರೇ  ಹಲ್ಲೆ ನಡೆಸಿದ್ದರಲ್ಲದೆ ಆಕೆಯ ಪಾದದಡಿಗಳನ್ನು  ಬಿಸಿ  ಸೌಟಿನಿಂದ ಸುಟ್ಟಿದ್ದರು. ಈ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡಿದ ನಂತರ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News