ಒತ್ತೆಯ ಹಿಡಿದು

Update: 2018-02-23 18:53 GMT

ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ.

ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯ.

ವ್ರತಹೀನನನರಿದು ಬೆರೆದಡೆ

ಕಾದ ಕತ್ತಿಯಲಿ ಕೈ ಕಿವಿ ಮೂಗ ಕೊಯ್ವರಯ್ಯಿ.

ಒಲ್ಲೆನೊಲ್ಲೆ ಬಲ್ಲೆನಾಗಿ, ನಿಮ್ಮಾಣೆ ನಿರ್ಲಜ್ಜೇಶ್ವರಾ.

                                                      -ಸೂಳೆಸಂಕವ್ವೆ

ಸೂಳೆಸಂಕವ್ವೆಯ ಇದೊಂದೇ ವಚನ ಸಿಕ್ಕಿದೆ. ತನ್ನಲ್ಲಾದ ಪರಿವರ್ತನೆ ಕುರಿತು ಅವಳು ಹೇಳುವ ಕ್ರಮದಲ್ಲಿ ಪ್ರಾಮಾಣಿಕತೆ, ದಿಟ್ಟತನ, ದೃಢನಿರ್ಧಾರ, ಲಿಂಗಾಂಗ ಸಾಮರಸ್ಯ ಮತ್ತು ಸಾಮಾಜಿಕ ವ್ಯವಸ್ಥೆಯ ಕ್ರೌರ್ಯವಿದೆ.

ವೇಶ್ಯೆ ಎಂದರೆ ಹಣ ಪಡೆದು ತನ್ನ ದೇಹವನ್ನೇ ವಿಟರ ಕಾಮಕೇಳಿಗಾಗಿ ಅಡವು ಇಡುವವಳು. ವೇಶ್ಯೆಗೆ ತೆರುವ ಹಣಕ್ಕೆ ಒತ್ತೆ ಎನ್ನುತ್ತಾರೆ. ಪಣ್ಯ ಎಂದರೆ ವ್ಯಾಪಾರದ ವಸ್ತು. ವೇಶ್ಯೆಗೆ ದೇಹವೇ ವ್ಯಾಪಾರದ ವಸ್ತುವಾಗಿರುವುದರಿಂದ ಆಕೆ ಪಣ್ಯಾಂಗನೆ ಆಗುತ್ತಾಳೆ. ಇಂಥ ಪಣ್ಯಾಂಗನೆಯರನ್ನು ಪುಣ್ಯಾಂಗನೆಯರನ್ನಾಗಿ ಮಾಡುವುದು ಕೂಡ ವಚನ ಚಳವಳಿಯ ಉದ್ದೇಶಗಳಲ್ಲಿ ಒಂದಾಗಿತ್ತು. ಇಷ್ಟಲಿಂಗ ದೀಕ್ಷೆ ಎಂದರೆ ಪರಮಾತ್ಮನಿಗೆ ಶರಣಾಗುವುದು. ಹಾಗೆಂದರೆ ಸಂಪೂರ್ಣವಾಗಿ ಪರಿಶುದ್ಧವಾಗುವುದು. ಹೀಗೆ ಶರಣರ ಚಳವಳಿಯಲ್ಲಿ ಪಣ್ಯಾಂಗನೆಯರು ಲಿಂಗದೀಕ್ಷೆ ಪಡೆದು ಪರಿಶುದ್ಧರಾಗಿ ಪುಣ್ಯಾಂಗನೆಯರಾದರು.

ಈ ವಚನದಲ್ಲಿ ಸಂಕವ್ವೆ ಪರಮಾತ್ಮನನ್ನು ನಿರ್ಲಜ್ಜೇಶ್ವರ ಎಂದು ಕರೆದಿದ್ದಾಳೆ. ಈಗ ಅವಳು ನಿರ್ಲಜ್ಜೇಶ್ವರನ ಒತ್ತೆ ಹಿಡಿದಿದ್ದಾಳೆ. ಅಂದರೆ ಆತನ ವಸ್ತುವಾಗಿದ್ದಾಳೆ. ಆದ್ದರಿಂದ ಮತ್ತೊಬ್ಬನ ಒತ್ತೆಯ ಹಿಡಿಯುವುದಿಲ್ಲ ಎಂದು ತಿಳಿಸುತ್ತಾಳೆ. ಆ ಮೂಲಕ ವೇಶ್ಯಾವೃತ್ತಿಯನ್ನು ಬಿಟ್ಟು ಪರಿಶುದ್ಧಳಾಗಿ ಲಿಂಗಾಂಗ ಸಾಮರಸ್ಯವನ್ನು ಅನುಭಾವಿಸುತ್ತಿರುವುದಾಗಿ ಸೂಚಿಸುತ್ತಿದ್ದಾಳೆ. ತನ್ನ ಪರಿಶುದ್ಧತೆಯ ಬಗ್ಗೆ ನಿರ್ಲಜ್ಜೇಶ್ವರನಿಗೆ ಮನವರಿಕೆ ಮಾಡಿಕೊಡುತ್ತಿದ್ದಾಳೆ. ಇಷ್ಟಲಿಂಗಕ್ಕೆ ಶರಣಾಗತಳಾದ ನಂತರ ಮತ್ತೆ ಸೂಳೆಗಾರಿಕೆಗೆ ಮರಳಿದರೆ ಶರಣರ ದೃಷ್ಟಿಯಲ್ಲಿ ಕೀಳಾಗುತ್ತೇನೆ ಎಂಬ ಅರಿವು ಅವಳಿಗಿದೆ.

ಮತ್ತೆ ವ್ರತಹೀನರಾದ ವಿಟರನ್ನು ಬೆರೆತರೆ ಆಗುವ ಪರಿಣಾಮ ಕುರಿತು ಆಕೆ ಹೇಳುವ ಕ್ರಮ ವಿಶಿಷ್ಟವಾಗಿದೆ. ವಿವಿಧ ಅಪರಾಧಗಳಿಗೆ 'ಬತ್ತಲೆ ನಿಲ್ಲಿಸಿ ಕೊಲ್ಲುವುದು' ಮತ್ತು 'ಕಾದ ಕತ್ತಿಯಲ್ಲಿ ಕಿವಿ ಮೂಗು ಕೊಯ್ಯುವುದು' ಮುಂತಾದ ಕ್ರೂರ ಶಿಕ್ಷೆಗಳು ಆ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ರೂಢಿಗತವಾಗಿರುವಂಥವು. ಶರಣರ ಘನೋದ್ದೇಶಕ್ಕೆ ದ್ರೋಹ ಬಗೆಯುವುದೆಂದರೆ ಮಾನಸಿಕವಾಗಿ ಇಂಥ ಕ್ರೂರ ಶಿಕ್ಷೆಯನ್ನು ಅನುಭವಿಸುವಂಥದ್ದು ಎಂದು ಭಾವಿಸುವಷ್ಟು ಸೂಕ್ಷ್ಮಮತಿಯಾಗಿದ್ದಾಳೆ ಶರಣೆ ಸಂಕವ್ವೆ. ಇದೆಲ್ಲ ಗೊತ್ತಿರುವ ಕಾರಣ ಒಲ್ಲೆ ಒಲ್ಲೆ ಎಂದು ಪರಮಾತ್ಮನ ಆಣೆ ಮಾಡಿ ಹೇಳುತ್ತಾಳೆ. ಅರಿಯದೆ ಮಾಡುವ ತಪ್ಪಿಗೆ ಕ್ಷಮೆ ಇದೆ. ಆದರೆ ಅರಿತು ಮಾಡುವ ತಪ್ಪುಅಕ್ಷಮ್ಯ ಎಂದು ಸಾರುತ್ತಾಳೆ. ಸಂಕವ್ವೆ ಸೂಳೆಗಾರಿಕೆ ಬಿಟ್ಟಮೇಲೆ ಏಕಾಂಗಿಯಾಗಿ ಶಿವಧ್ಯಾನದಲ್ಲೇ ಇದ್ದು ವಚನ ಚಳವಳಿಯ ಭಾಗವಾಗಿದ್ದಳೆಂಬುದು ಈ ವಚನದಿಂದ ಸ್ಪಷ್ಟವಾಗುತ್ತದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News