ಹಿಂದೂಗಳು ಹೆಚ್ಚು ಮಕ್ಕಳು ಹೆರುವುದನ್ನು ನಿಲ್ಲಿಸದಿರಿ ಎಂದ ಬಿಜೆಪಿ ಶಾಸಕ!

Update: 2018-02-24 07:09 GMT

ಮುಝಫ್ಫರ ನಗರ, ಫೆ.24: ಜನಸಂಖ್ಯಾ ನಿಯಂತ್ರಣದ ಕಾನೂನು ಜಾರಿಯಾಗುವ ತನಕ ಹಿಂದೂಗಳು ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸಬಾರದು ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ವಿಕ್ರಮ್ ಸೈನಿ ವಿವಾದಕ್ಕೀಡಾಗಿದ್ದಾರೆ.

ವಿಪರ್ಯಾಸವೆಂದರೆ, ಮುಝಫ್ಫರ ನಗರ ಜಿಲ್ಲೆಯ ಖಟೌಲಿ ಕ್ಷೇತ್ರದ ಶಾಸಕರಾಗಿರುವ ಸೈನಿ, ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮವೊಂದನ್ನುದ್ದೇಶಿಸಿ ಮಾತನಾಡುತ್ತಿರುವಾಗ ಮೇಲಿನಂತೆ ಹೇಳಿದ್ದಾರೆ.

‘‘ನನ್ನ ಪತ್ನಿ ನಮಗೆ ಇಬ್ಬರು ಮಕ್ಕಳು ಸಾಕೆಂದು ಹೇಳಿದರೂ, ಜನಸಂಖ್ಯಾ ನಿಯಂತ್ರಣ ಕಾನೂನು ಬರುವ ತನಕ ಮಕ್ಕಳನ್ನು ಹೆರುವುದನ್ನು ಮುಂದುವರಿಸಬೇಕೆಂದು ನಾನು ಆಕೆಗೆ ತಿಳಿಸಿದ್ದೇನೆ’’ ಎಂದು ತಮ್ಮ ಭಾಷಣದಲ್ಲಿ ಹೇಳಿ ಸೈನಿ ಎಲ್ಲರ ಹುಬ್ಬೇರಿಸಿದ್ದಾರೆ.

ಹಿಂದೂಗಳು ಎರಡು ಮಕ್ಕಳ ನಿಯಮವನ್ನು ಒಪ್ಪಿಕೊಂಡಿದ್ದರೂ ಇತರರು ಒಪ್ಪಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.

‘‘ಕಾನೂನು ಎಲ್ಲರಿಗೂ ಸಮನಾಗಿರಬೇಕು. ನಮಗೆ ಇಬ್ಬರು ಮಕ್ಕಳಾದಾಗ, ಮೂರನೇ ಮಗು ಬೇಡ ಎಂದು ನನ್ನ ಪತ್ನಿ ಹೇಳಿದಳು. ಆದರೆ ನಮಗೆ ನಾಲ್ಕರಿಂದ ಐದು ಮಕ್ಕಳಾಗಬೇಕು ಎಂದು ನಾನು ಹೇಳಿದೆ’’ ಎಂದು ಸೈನಿ ವಿವರಿಸಿದ್ದಾರೆ.

ತಮ್ಮ ವಿವಾದಿತ ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ಸೈನಿ ಈ ಹಿಂದೊಮ್ಮೆ ‘‘ಹಿಂದೂಸ್ಥಾನವಿರುವುದು ಹಿಂದುಗಳಿಗಾಗಿ’’ ಎಂದು ಹೇಳಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕೆಂದು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News