ಖ್ಯಾತ ನಟಿ, ಬಹುಭಾಷಾ ಕಲಾವಿದೆ ಶ್ರೀದೇವಿ ಇನ್ನಿಲ್ಲ

Update: 2018-02-25 05:10 GMT

ದುಬೈ, ಫೆ. 25: ಖ್ಯಾತ ನಟಿ, ಬಹು ಭಾಷಾ ಕಲಾವಿದೆ ಶ್ರೀದೇವಿ ಶನಿವಾರ ತಡರಾತ್ರಿ ದುಬೈಯಲ್ಲಿ ಹೃದಯ ಸ್ತಂಭನದಿಂದಾಗಿ ಹಠಾತ್ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಹಿಂದಿ ಚಿತ್ರರಂಗದ ಪ್ರಪ್ರಥಮ ಮಹಿಳಾ ಸೂಪರ್ ಸ್ಟಾರ್ ಎಂದೇ ಖ್ಯಾತರಾಗದ್ದ ಶ್ರೀದೇವಿ ತಮ್ಮ ಸೋದರಳಿಯ, ನಟ ಮೋಹಿತ್ ಮಾರ್ವ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. 

ಅವರ ಜೊತೆ ಪತಿ, ನಿರ್ಮಾಪಕ ಬೋನಿ ಕಪೂರ್ ಹಾಗು ಕಿರಿಯ ಪುತ್ರಿ ಖುಷಿ ಇದ್ದರು. ಬೋನಿ ಕಪೂರ್ ಹಾಗು ಶ್ರೀದೇವಿ ಅವರ ಹಿರಿಯ ಪುತ್ರಿ ಜಾಹ್ನವಿ ಈ ಸಂದರ್ಭ ಅವರ ಜೊತೆ ತೆರಳಿರಲಿಲ್ಲ. ಶ್ರೀದೇವಿ ಅವರ ಹಠಾತ್ ನಿಧನದ ಸುದ್ದಿ ಬಾಲಿವುಡ್ ಹಾಗು ಅಪಾರ ಅಭಿಮಾನಿಗಳನ್ನು ದಂಗು ಬಡಿಸಿದೆ. 

ತಮ್ಮ ನಾಲ್ಕನೇ ವರ್ಷದಲ್ಲಿ ಚಿತ್ರರಂಗ ಪ್ರವೇಶಿಸಿದ ಶ್ರೀದೇವಿ ತಮಿಳು, ಮಲೆಯಾಳಂ, ತೆಲುಗು, ಹಿಂದಿ ಹಾಗು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಭಾರೀ ಖ್ಯಾತಿ ಪಡೆದವರು. 2013ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಶಾರುಕ್ ಖಾನ್ ಹೊಸ ಚಿತ್ರ ಝೀರೊದಲ್ಲಿ ಅತಿಥಿ ಪಾತ್ರವೊಂದರಲ್ಲಿ ಅವರು ಇತ್ತೀಚೆಗೆ ನಟಿಸಿದ್ದರು. ಆ ಚಿತ್ರ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.

"ತಡರಾತ್ರಿ ಈ ಆಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಇದು ಹೃದಯವಿದ್ರಾವಕ. ಶ್ರೀದೇವಿ ಭಾರತದ ಸಹೃದಯಿ, ನಂಬಲಸಾಧ್ಯ ಪ್ರತಿಭೆಯ ಕಲಾವಿದೆ ಹಾಗೂ ಸುಂದರ ಮಹಿಳೆ. ಇಷ್ಟು ಬೇಗ ಕಣ್ಮರೆಯಾದರು" ಎಂದು ಗಾಯಕ ಅದ್ನಾನ್ ಸಮಿ ನುಡಿನಮನ ಸಲ್ಲಿಸಿದ್ದಾರೆ.

ನಾಲ್ಕನೇ ವಯಸ್ಸಿನಲ್ಲೇ ನಟನಾಕ್ಷೇತ್ರಕ್ಕೆ ಬಂದ ಶ್ರೀದೇವಿ, ಚಾಂದನಿಯಂಥ ಹತ್ತು ಹಲವು ಸೂಪರ್‌ ಹಿಟ್ ಚಿತ್ರಗಳ ಮೂಲಕ ಚಿತ್ರ ರಸಿಕರ ಮನ ಸೂರೆಗೊಂಡಿದ್ದಾರೆ. 1997ರಲ್ಲಿ ವಿವಾಹವಾದ ಬಳಿಕ 15 ವರ್ಷಗಳ ಸುಧೀರ್ಘ ಕಾಲ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದರು. 2012ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಮರುಪ್ರವೇಶ ಮಾಡಿದ್ದರು. ಎರಡು ದಶಕಗಳ ಬಳಿಕ ತಮಿಳು ಚಿತ್ರರಂಗಕ್ಕೆ ವಾಪಸ್ಸಾದ ಶ್ರೀದೇವಿ, ಖಳನಾಯಕಿ ರಾಣಿಯಾಗಿ ಪುಲಿ ಚಿತ್ರದಲ್ಲಿ ಅದ್ಭುತ ನಟನೆ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಇತ್ತೀಚಿನ ಟ್ವೀಟ್ ಒಂದರಲ್ಲಿ ಶ್ರೀದೇವಿ ತಮ್ಮನ್ನು "ನಟಿ--ಪತ್ನಿ-ತಾಯಿ ಮತ್ತೆ ನಟಿ" ಎಂದು ಬಣ್ಣಿಸಿಕೊಂಡಿದ್ದರು.

ಕಳೆದ ವರ್ಷ ನವಾಝುದ್ದೀನ್ ಸಿದ್ದಿಕಿ ಮತ್ತು ಅಕ್ಷಯ ಖನ್ನಾ ಜತೆಗೆ ಮಾಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಶಾರೂಖ್ ಖಾನ್ ಅವರ ಝೀರೊ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳಲು ಶೂಟಿಂಗ್ ನಡೆದಿತ್ತು. 1978ರಲ್ಲಿ ಸೋಲ್ವಾ ಸಾವನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ತಮಿಳು, ಮಲೆಯಾಳಂ, ತೆಲುಗು, ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಮೇರು ನಟಿ ಪದ್ಮಶ್ರೀ ಪ್ರಶಸ್ತಿಗೆ 2013ರಲ್ಲಿ ಭಾಜನರಾಗಿದ್ದರು. 

ಮವ್ವಾಲಿ (1983), ತೋಹ್ಫಾ (1984), ಮಿಸ್ಟರ್ ಇಂಡಿಯಾ (1987), ಚಾಂದನಿ (1989), ಬಾಕ್ಸ್ ಆಫೀಸ್‌ನಲ್ಲಿ ಅಗ್ರ ಗಳಿಕೆ ಚಿತ್ರಗಳೆನಿಸಿಕೊಂಡಿದ್ದವು. ಸದ್ಮಾ (1983), ಚಾಲ್‌ಬಾರ್ (1989), ಲಹ್ಮೆ (1991), ಗುಮ್ರಹ್ (1993) ವಿಮರ್ಶಕರ ಮೆಚ್ಚುಗೆ ಪಡೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News