ಮಾನವನ ಮಿದುಳಿನಲ್ಲಿ ಮಡಿಕೆಗಳು ಹೇಗೆ ರೂಪುಗೊಳ್ಳುತ್ತವೆ.....?

Update: 2018-02-25 08:49 GMT

ಮಾನವನ ಮಿದುಳಿನಲ್ಲಿ ಅಕ್ರೋಟಿನಲ್ಲಿರುವಂತೆ ಮಡಿಕೆಗಳಿರುತ್ತವೆ ಎನ್ನುವುದು ಸಾಮಾನ್ಯವಾಗಿ ಶಾಲೆಗೆ ಹೋದವರಿಗೆಲ್ಲ ಗೊತ್ತಿರುವ ವಿಷಯವೇ ಆಗಿದೆ. ಆದರೆ ಈ ಮಡಿಕೆಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವುದಕ್ಕೆ ನಿಖರವಾದ ವಿವರಣೆಗಳು ಲಭ್ಯವಿರಲಿಲ್ಲ. ಮಿದುಳು ಅಕ್ರೋಟಿನಲ್ಲಿರುವಂತೆ ಮಡಿಕೆಗಳನ್ನು ಏಕೆ ಹೊಂದಿರುತ್ತದೆ ಎನ್ನುವುದನ್ನು ವಿವರಿಸಲು ಇದೇ ಮೊದಲ ಬಾರಿಗೆ ಇಸ್ರೇಲ್‌ನ ಸಂಶೋಧಕರು ‘ಬ್ರೇನ್ ಆನ್ ಎ ಚಿಪ್’ ಅಥವಾ ಚಿಪ್‌ನಲ್ಲಿ ಮಿದುಳಿನ ಮಾದರಿಯೊಂದನ್ನು ಅಭಿವೃದ್ಧಿ ಗೊಳಿಸಿದ್ದಾರೆ. ಸಂಶೋಧಕರ ತಂಡವು ಪ್ರಯೋಗಶಾಲೆಯಲ್ಲಿ ಭ್ರೂಣದ ಆಕರ ಕೋಶಗಳಿಂದ ‘ಆರ್ಗನೈಡ್(ಅಂಗಾಂಗವನ್ನು ಹೋಲುವ ಅಂಗಾಂಶಗಳ ಸಮೂಹ)’ ಎಂದು ಕರೆಯಲಾಗುವ ಪುಟಾಣಿ ಮಿದುಳುಗಳನ್ನು ಸೃಷ್ಟಿಸಿ, ಅದರ ಬೆಳವಣಿಗೆಯನ್ನು ಶಿರಾಭಿಮುಖಿ ಅಕ್ಷಕ್ಕೆ ಸೀಮಿತಗೊಳಿಸಿತ್ತು. ಎರಡನೇ ವಾರದಲ್ಲಿ ಚಪ್ಪಟೆಯಾಗಿದ್ದ ಆರ್ಗನೈಡ್‌ಗಳ ಮೇಲೆ ಮಡಿಕೆಗಳು ಅಥವಾ ಸುಕ್ಕುಗಳು ಕಾಣಿಸಿಕೊಂಡಿದ್ದವು ಮತ್ತು ಮಿದುಳಿನ ಮಡಿಕೆಗಳಿಗೆ ಸ್ಪಷ್ಟ ವಿವರಣೆಯನ್ನು ನೀಡಿದ್ದವು. 

ಸಂಶೋಧನೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.....

 ಮಾನವ ಹುಟ್ಟುವಾಗ ಮಿದುಳು ಯಾವುದೇ ಸುಕ್ಕುಗಳು ಅಥವಾ ಮಡಿಕೆಗಳಿಲ್ಲದೆ ಸ್ವಚ್ಛವಾದ ಸ್ಲೇಟ್‌ನಂತಿದ್ದರೆ ಅದು ಶಾಪಗ್ರಸ್ತ ಜನ್ಮವೆಂದು ಹೇಳಬಹುದು. ನಾವು ಹುಟ್ಟುವಾಗ ನಮ್ಮ ಮಿದುಳು ಅದಾಗಲೇ ಅಕ್ರೋಟಿನಂತೆ ಸುಕ್ಕುಗಳನ್ನು ಅಥವಾ ಮಡಿಕೆಗಳನ್ನು ಹೊಂದಿರುತ್ತದೆ. ಈ ಸುಕ್ಕುಗಳಿಲ್ಲದೆ ಅಂದರೆ ಸ್ಮೂಥ್ ಬ್ರೇನ್ ಸಿಂಡ್ರೋಮ್(ಎಸ್‌ಬಿಎಸ್) ಅಥವಾ ನಯ ಮಿದುಳು ರೋಗಲಕ್ಷಣದೊಂದಿಗೆ ಜನಿಸುವ ಮಕ್ಕಳು ತೀವ್ರ ಬೆಳವಣಿಗೆ ಕೊರತೆಗಳಿಂದ ನರಳುತ್ತಾರೆ ಮತ್ತು ಅವರ ಆಯಸ್ಸು ಕೂಡ ಕಡಿಮೆಯಾಗಿರುತ್ತದೆ. ಈ ರೋಗಲಕ್ಷಣಕ್ಕೆ ಕಾರಣವಾಗುವ ವಂಶವಾಹಿಯು ಮಾನವನ ಮಿದುಳಿನಲ್ಲಿ ಮಡಿಕೆಗಳನ್ನುಂಟು ಮಾಡುವ ಭೌತಿಕ ಬಲಗಳ ಕುರಿತು ಸಂಶೋಧನೆ ನಡೆಸಲು ಇಸ್ರೇಲ್‌ನ ವೀಝ್‌ಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಂಶೋಧಕರಿಗೆ ನೆರವಾಗಿದೆ. ಮಡಿಕೆಗಳುಂಟಾಗುವ ಪ್ರಕ್ರಿಯೆಯ ಹಿಂದಿರುವ ಭೌತಿಕ ಮತ್ತು ಜೈವಿಕ ವ್ಯವಸ್ಥೆಗಳ ಜಾಡು ಹಿಡಿಯಲು ಸಾಧ್ಯವಾಗಿಸಿದ, ಮಾನವ ಕೋಶಗಳಿಂದ ಚಿಪ್‌ಗಳ ಮೇಲೆ ಪುಟಾಣಿ ಮಿದುಳುಗಳನ್ನು ಬೆಳೆಸಲು ತಾವು ಅಭಿವೃದ್ಧಿಗೊಳಿಸಿದ ವಿಧಾನವನ್ನು ‘ನೇಚರ್ ಫಿಝಿಕ್ಸ್’ನಲ್ಲಿ ಪ್ರಕಟಗೊಂಡಿರುವ ತಮ್ಮ ಸಂಶೋಧನಾ ವರದಿಯಲ್ಲಿ ಸಂಶೋಧಕರು ಪ್ರಕಟಿಸಿದ್ದಾರೆ.

ಭ್ರೂಣಗಳ ಆಕರ ಕೋಶಗಳಿಂದ ‘ಆರ್ಗನೈಡ್’ಗಳೆಂದು ಕರೆಯಲಾಗುವ ಪುಟಾಣಿ ಮಿದುಳುಗಳನ್ನು ಬೆಳೆಯಬಹುದು ಎನ್ನುವುದನ್ನು ಕಳೆದ ದಶಕದಲ್ಲಿ ಜಪಾನಿನ ಪ್ರೊ.ಯೋಷಿಕಿ ಸಸಾಯ್ ಮತ್ತು ಆಸ್ಟ್ರಿಯಾದ ಪ್ರೊ.ಜರ್ಗನ್ ನೋಬ್ಲಿಚ್ ಅವರು ಮೊದಲ ಬಾರಿಗೆ ಅನ್ವೇಷಿಸಿದ್ದರು.

ತನ್ನ ಲ್ಯಾಬ್‌ನಲ್ಲಿಯ ಸಹೋದ್ಯೋಗಿಗಳು ಮತ್ತು ಇತರರು ಆರ್ಗನೈಡ್‌ಗಳನ್ನು ಬೆಳೆಸುವ ಪರಿಕಲ್ಪನೆಯನ್ನು ಒಪ್ಪಿಕೊಂಡಿದ್ದರು. ಆದರೆ ಡಾ.ಇಯಾಲ್ ಕರ್ಝಬ್ರನ್ ಅವರು ತಮ್ಮ ಉತ್ಸಾಹಕ್ಕೆ ತಣ್ಣೀರನ್ನೆರಚಿದ್ದರು ಎಂದು ವೀಝ್‌ಮನ್‌ನ ಮಾಲೆಕ್ಯುಲರ್ ಜೆನೆಟಿಕ್ಸ್ ವಿಭಾಗದ ಪ್ರೊ.ಒರ್ಲಿ ರೀನರ್ ವರದಿಯಲ್ಲಿ ಹೇಳಿಕೊಂಡಿದ್ದಾರೆ.

ಅವರು ಆಕರ ಕೋಶಗಳಿಂದ ಪಡೆದುಕೊಂಡಿದ್ದ ಆರ್ಗನೈಡ್‌ಗಳು ಸಮಾನ ಗಾತ್ರದ್ದಾಗಿರಲಿಲ್ಲ, ಅವುಗಳಲ್ಲಿ ರಕ್ತನಾಳಗಳಿರಲಿಲ್ಲ, ಅವುಗಳ ಒಳಭಾಗಗಳು ಪೋಷಕಾಂಶಗಳ ಸ್ಥಿರವಾದ ಪೂರೈಕೆಯಿಲ್ಲದೆ ಸಾಯಲು ಆರಂಭಿಸಿದ್ದವು. ಅಲ್ಲದೆ ಅಂಗಾಂಶದ ದಪ್ಪವು ಆಪ್ಟಿಕಲ್ ಇಮೇಜಿಂಗ್(ದ್ಯುತಿ ಚಿತ್ರಣ) ಮತ್ತು ಮೈಕ್ರೋಸ್ಕೋಪ್ ಟ್ರಾಕಿಂಗ್(ಸೂಕ್ಷ್ಮದರ್ಶಕದ ಮೂಲಕ ವೀಕ್ಷಣೆ)ಗೆ ತೊಡಕನ್ನುಂಟು ಮಾಡುತ್ತಿತ್ತು. ಹೀಗಾಗಿ ಕರ್ಝಬ್ರನ್ ಅವರು ಆರ್ಗನೈಡ್‌ಗಳನ್ನು ಬೆಳೆಸಲು, ಅವುಗಳ ಬೆಳವಣಿಗೆ ಪ್ರಕ್ರಿಯೆಯನ್ನು ನಿಜಾವಧಿಯಲ್ಲಿ ಅನುಸರಿಸಲು ಸಾಧ್ಯವಾಗುವ ಹೊಸ ವಿಧಾನವನ್ನು ಅಭಿವೃದ್ಧಿಗೊಳಿಸಿದ್ದರು. ಅವರು ಆರ್ಗನೈಡ್‌ಗಳ ಬೆಳವಣಿಗೆಯನ್ನು ಶಿರಾಭಿಮುಖಿ ಅಕ್ಷಕ್ಕೆ ಸೀಮಿತಗೊಳಿಸಿದ್ದರು ಮತ್ತು ಇದರಿಂದ ಅವರಿಗೆ ಒಳಗೆ ಟೊಳ್ಳಾಗಿ ಹೂರಣವನ್ನು ಹೊಂದಿರುವ ಬ್ರೆಡ್‌ನ ಆಕಾರದಲ್ಲಿಯ ದುಂಡನೆಯ ಹಾಗು ಮಧ್ಯದಲ್ಲಿ ತೆಳ್ಳಗಿರುವ ಆರ್ಗನೈಡ್ ಪಡೆಯಲು ಸಾಧ್ಯವಾಗಿತ್ತು. ಅದರ ಈ ಆಕಾರದಿಂದಾಗಿ ಸಂಶೋಧಕರಿಗೆ ತೆಳ್ಳನೆಯ ಅಂಗಾಂಶ ಬೆಳೆಯುತ್ತಿದ್ದಂತೆ ಅದರ ಚಿತ್ರವನ್ನು ಸೆರೆ ಹಿಡಿಯಲು ಮತ್ತು ಎಲ್ಲ ಜೀವಕೋಶಗಳಿಗೆ ಪೋಷಕಾಂಶಗಳನ್ನು ಪೂರೈಸಲು ಸಾಧ್ಯವಾಗಿತ್ತು. ಪುಟಾಣಿ ಮಿದುಳಿನ ಬೆಳವಣಿಗೆಯ ಎರಡನೇ ವಾರದಲ್ಲಿ ಅದರ ಮೇಲೆ ಮಡಿಕೆಗಳು ಕಾಣಿಸಿಕೊಳ್ಳ ತೊಡಗಿದ್ದವು ಮತ್ತು ಆಳವಾಗತೊಡಗಿದ್ದವು. ಕರ್ಝಬ್ರನ್‌ರ ನೂತನ ವಿಧಾನದಿಂದಾಗಿ ಇದೇ ಮೊದಲ ಬಾರಿಗೆ ಆರ್ಗನೈಡ್‌ಗಳಲ್ಲಿ ಮಡಿಕೆಯನ್ನು ವೀಕ್ಷಿಸಲು ಸಾಧ್ಯವಾಗಿತ್ತು.

ಇದೊಂದು ಉತ್ತಮ ಸಾಧನೆಯಾಗಿದ್ದರೂ ಆರ್ಗನೈಡ್‌ಗಳಲ್ಲಿಯ ಮಡಿಕೆಗಳು ಬೆಳೆಯುತ್ತಿರುವ ಮಿದುಳಿನಲ್ಲಿಯ ಮಡಿಕೆಗಳನ್ನು ನಿಜಕ್ಕೂ ಪ್ರತಿಬಿಂಬಿಸುತ್ತವೆಯೇ ಎನ್ನುವುದು ಸಂಶೋಧಕರ ತಂಡಕ್ಕೆ ಮನದಟ್ಟಾಗಿರಲಿಲ್ಲ. ಹೀಗಾಗಿ ತಂಡವು ಎಸ್‌ಬಿಎಸ್ ಹೊಂದಿರುವ ಶಿಶುಗಳಲ್ಲಿಯ ವಂಶವಾಹಿಯೊಂದಿಗೆ ಹೊಸ ಆರ್ಗನೈಡ್‌ಗಳನ್ನು ಅಭಿವೃದ್ಧಿಗೊಳಿಸಿತ್ತು. ರೀನರ್ ಅವರು 1993ರಷ್ಟು ಹಿಂದೆಯೇ ಈ ವಂಶವಾಹಿಯನ್ನು ಗುರುತಿಸಿದ್ದರು ಹಾಗೂ ಮಿದುಳಿನ ಬೆಳವಣಿಗೆಯಲ್ಲಿ ಮತ್ತು 30,000 ಜನನಗಳಲ್ಲಿ ಒಂದು ಪ್ರಕರಣದಲ್ಲಿ ಎಸ್‌ಬಿಎಸ್ ಉಂಟು ಮಾಡುವಲ್ಲಿ ಅದರ ಪಾತ್ರದ ಕುರಿತು ಅಧ್ಯಯನ ನಡೆಸಿದ್ದರು.

ರೂಪಾಂತರಿತ ವಂಶವಾಹಿಯನ್ನು ಹೊಂದಿದ್ದ ವಂಶವಾಹಿಗಳು ಮತ್ತು ಇತರ ಆರ್ಗನೈಡ್‌ಗಳ ಬೆಳವಣಿಗೆಯ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಆದರೆ ವಂಶವಾಹಿ ಹೊಂದಿದ್ದ ಆರ್ಗನೈಡ್‌ಗಳಲ್ಲಿ ಕೆಲವು ಮಡಿಕೆಗಳು ಉಂಟಾಗಿದ್ದವು ಮತ್ತು ಅವು ತಂಡವು ಮೊದಲು ಬೆಳೆಸಿದ್ದ ಆರ್ಗನೈಡ್‌ಗಳ ಮಡಿಕೆಗಳಿಗಿಂತ ಭಿನ್ನವಾಗಿದ್ದವು. ಜೀವಕೋಶಗಳ ಭೌತಿಕ ಗುಣಗಳಲ್ಲಿಯ ವ್ಯತ್ಯಾಸಗಳು ಈ ಭಿನ್ನತೆಗೆ ಕಾರಣವಾಗಿವೆ ಎಂಬ ತರ್ಕವನ್ನು ಆಧಾರವಾಗಿಟ್ಟುಕೊಂಡು ತಂಡವು ಅಧ್ಯಯನವನ್ನು ಮುಂದುವರಿಸಿತ್ತು.

ಆರ್ಗನೈಡ್‌ಗಳನ್ನು ಬೆಳೆಸುವ ತಮ್ಮ ವಿಧಾನವನ್ನು ಇನ್ನಷ್ಟು ಪರಿಷ್ಕರಿಸುವ ಮೂಲಕ ಮಿದುಳಿನ ಬೆಳವಣಿಗೆಗೆ ಸಂಬಂಧಿಸಿದ ಮೈಕ್ರೋಸಿಫಾಲಿ, ಎಪಿಲೆಪ್ಸಿ ಮತ್ತು ಸ್ಕ್ರಿರೆಫ್ರೇನಿಯಾದಂತಹ ಇತರ ವೈಕಲ್ಯಗಳ ಬಗ್ಗೆಯೂ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಸಂಶೋಧಕರು ಹೊಂದಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News