ಪನೀರ್ ನ ಆರೋಗ್ಯಲಾಭಗಳು ಗೊತ್ತೇ.....?

Update: 2018-02-25 09:56 GMT

ಕಾಟೇಜ್ ಚೀಸ್ ಅಥವಾ ಪನೀರ್(ಗಿಣ್ಣು) ಹೆಚ್ಚಿನ ಎಲ್ಲರಿಗೂ ಇಷ್ಟವಾದ ಖಾದ್ಯವಾಗಿದೆ. ಹಲವಾರು ಅಡುಗೆಗಳಲ್ಲಿ ಅದನ್ನು ಬಳಸಲಾಗುತ್ತದೆ.

 ಹಾಲಿನಲ್ಲಿರುವ ಕೇಸಿಯ್ನ ಎಂಬ ಪ್ರೋಟಿನ್ ಮತ್ತು ವಿನೆಗರ್ ಅಥವಾ ಲಿಂಬೆರಸ ಅಥವಾ ದ್ರವವನ್ನು ಘನೀಕರಿಸುವ ಕೋಗ್ಯುಲೇಟ್‌ಗಳ ನಡುವಿನ ರಾಸಾಯನಿಕ ಕ್ರಿಯೆಯಿಂದ ಪನೀರ್ ರೂಪುಗೊಳ್ಳುತ್ತದೆ. ಪನೀರ್ ನಿಧಾನವಾಗಿ ಜೀರ್ಣಗೊಳ್ಳು ವುದರಿಂದ ದೇಹದಾರ್ಢ್ಯ ಪಟುಗಳು, ಅಥ್ಲೀಟ್‌ಗಳು ಮತ್ತು ವಿವಿಧ ಕ್ರೀಡಾಳುಗಳಿಗೆ ಈ ಪ್ರೋಟಿನ್ ಅತ್ಯಂತ ಲಾಭಕಾರಿಯಾಗಿದೆ. ವಿಟಾಮಿನ್ ಡಿ ಮತ್ತು ಎ, ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಷಿಯಂ, ರಂಜಕ, ಸೋಡಿಯಂ, ಸಿಲೆನಿಯಂ ಮತ್ತು ಸತುವು ಗಳಂತಹ ಹಲವಾರು ಪೋಷಕಾಂಶಗಳು ಪನೀರ್‌ನಲ್ಲಿವೆ. ಅದು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.

► ಸ್ತನ ಕ್ಯಾನ್ಸರ್‌ನ್ನು ತಡೆಯುತ್ತದೆ

ಪನೀರ್ ಸ್ತನ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ. ಅದರಲ್ಲಿರುವ ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

► ಹಲ್ಲು ಮತ್ತು ಮೂಳೆಗಳನ್ನು ಸದೃಢಗೊಳಿಸುತ್ತದೆ

ಪನೀರ್ ಸಮೃದ್ಧ ಕ್ಯಾಲ್ಸಿಯಂ ಹೊಂದಿರುವದರಿಂದ ನಮ್ಮ ಶರೀರಕ್ಕೆ ಪ್ರತಿನಿತ್ಯ ಅಗತ್ಯವಿರುವ ಈ ಪೋಷಕಾಂಶದ ಶೇ.8ರಷ್ಟನ್ನು ಒದಗಿಸುತ್ತದೆ. ಕ್ಯಾಲ್ಸಿಯಂ ಹಲ್ಲುಗಳು ಮತ್ತು ಮೂಳೆಗಳನ್ನು ಗಟ್ಟಿಯಾಗಿಸುವ ಜೊತೆಗೆ ನರಗಳ ಸುಗಮ ಕಾರ್ಯನಿರ್ವಹಣೆ ಮತ್ತು ಆರೋಗ್ಯಕರ ಹೃದಯ ಸ್ನಾಯುಗಳಿಗೂ ಪೂರಕವಾಗಿದೆ.

► ಹೇರಳ ಪ್ರೋಟಿನ್ ಹೊಂದಿದೆ

ಪನೀರ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಹೊಂದಿದೆ. ವಿಶೇಷವಾಗಿ ಆಕಳ ಹಾಲಿನಲ್ಲಿ ಪ್ರೋಟಿನ್ ಹೇರಳವಾಗಿದೆ. ಪ್ರತಿ 100 ಗ್ರಾಂ ಪನೀರ್‌ನಲ್ಲಿ 11 ಗ್ರಾಂ ಪ್ರೋಟಿನ್ ಇರುತ್ತದೆ ಮತ್ತು ಇದು ಮಾಂಸಾಹಾರವನ್ನು ಸೇವಿಸದವರಿಗೆ ಅತ್ಯುತ್ತಮ ಪ್ರೋಟಿನ್ ಮೂಲವಾಗಿದೆ.

► ಗರ್ಭಿಣಿಯರಿಗೆ ಒಳ್ಳೆಯದು

ವಿವಿಧ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವುದರಿಂದ ಪನೀರ್ ಗರ್ಭಿಣಿ ಮಹಿಳೆಯರಿಗಾಗಿ ಹೇಳಿ ಮಾಡಿಸಿದಂತಹ ಡೇರಿ ಉತ್ಪನ್ನವಾಗಿದೆ. ಅದು ಗರ್ಭಿಣಿಯರಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕವನ್ನೂ ಒದಗಿಸುತ್ತದೆ.

► ದೇಹದ ತೂಕ ಇಳಿಸಲು ಸಹಕಾರಿ

ಪನೀರ್‌ನಲ್ಲಿಯ ಅಧಿಕ ಪ್ರೋಟಿನ್‌ನಿಂದಾಗಿ ಬೇಗನೆ ಹಸಿವಾಗುವುದಿಲ್ಲ ಮತ್ತು ಆಗಾಗ್ಗೆ ಏನನ್ನಾದರೂ ತಿನ್ನುವ ಅಗತ್ಯವಿರುವುದಿಲ್ಲ. ಹೀಗಾಗಿ ಇದು ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸುವವರಿಗೆ ಸಹಕಾರಿಯಾಗಿದೆ. ಪನೀರ್ ಲಿನೋಲಿಕ್ ಆಮ್ಲವನ್ನೂ ಹೊಂದಿದ್ದು, ಅದು ಶರೀರದಲ್ಲಿಯ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

► ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳುತ್ತದೆ

 ಪನೀರ್‌ನಲ್ಲಿ ಹೇರಳವಾಗಿರುವ ಮ್ಯಾಗ್ನೀಷಿಯಂ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಇದರಿಂದ ಹೃದಯವು ಆರೋಗ್ಯಯುತವಾಗಿರುವ ಜೊತೆಗೆ ಶರೀರದ ರೋಗ ನಿರೋಧಕ ಶಕ್ತಿಯೂ ಉತ್ತಮಗೊಳ್ಳುತ್ತದೆ. ಅದರಲ್ಲಿಯ ಪ್ರೋಟಿನ್ ಸಕ್ಕರೆಯ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆಯ ಮಟ್ಟ ಏರಿಕೆಯಾಗುವುದನ್ನು ತಡೆಯುತ್ತದೆ.

► ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಅಜೀರ್ಣವಾಗುವುದನ್ನು ಪನೀರ್ ತಡೆಯುತ್ತದೆ. ಅದರಲ್ಲಿ ಗಣನೀಯ ಪ್ರಮಾಣದಲ್ಲಿ ರುವ ರಂಜಕವು ಪಚನ ಕ್ರಿಯೆಗೆ ಮತ್ತು ಮಲ ವಿಸರ್ಜನೆಗೆ ನೆರವಾಗುತ್ತದೆ. ಅದರಲ್ಲಿರುವ ಮ್ಯಾಗ್ನೀಷಿಯಂ ಮಲಬದ್ಧತೆಯನ್ನು ತಡೆಯುತ್ತದೆ.

► ಬಿ-ಕಾಂಪ್ಲೆಕ್ಸ್ ವಿಟಾಮಿನ್‌ಗಳ ಆಗರ

ಪನೀರ್‌ನಲ್ಲಿ ಬಿ-ಕಾಂಪ್ಲೆಕ್ಸ್ ವಿಟಾಮಿನ್‌ಗಳು ಹೇರಳವಾಗಿದ್ದು, ಶರೀರದ ವಿವಿಧ ಕಾರ್ಯಗಳಲ್ಲಿ ನೆರವಾಗುತ್ತವೆ. ವಿಟಾಮಿನ್ ಬಿ12, ಥಿಯಾಮೈನ್, ನಿಯಾಸಿನ್, ಫೊಲೇಟ್, ರಿಬೊಫ್ಲಾವಿನ್ ಮತ್ತು ಪೆಂಟೊಥೆನಿಕ್ ಆ್ಯಸಿಡ್ ಇವು ಬಿ-ಕಾಂಪ್ಲೆಕ್ಸ್ ವಿಟಾಮಿನ್‌ಗಳಲ್ಲಿ ಸೇರಿವೆ.

► ಹೃದಯದ ಆರೋಗ್ಯಕ್ಕೆ ಒಳ್ಳೆಯದು

 ಪನೀರ್‌ನಲ್ಲಿರುವ ಪೊಟ್ಯಾಷಿಯಂ ಶರೀರದಲ್ಲಿನ ದ್ರವಗಳ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದು ರಕ್ತದಲ್ಲಿಯ ಹೆಚ್ಚಿನ ಸೋಡಿಯಂ ಉಂಟು ಮಾಡುವ ಪರಿಣಾಮಗಳನ್ನು ತಗ್ಗಿಸುತ್ತದೆ ಮತ್ತು ರಕ್ತದೊತ್ತಡ ಹಾಗೂ ರಕ್ತನಾಳಗಳು ಸಂಕುಚಿತಗೊಳ್ಳುವುದನ್ನು ಕಡಿಮೆ ಮಾಡುತ್ತದೆ.

► ಫೊಲೇಟ್‌ನ ಸಮೃದ್ಧ ಮೂಲ

ಗರ್ಭಿಣಿಯರಿಗೆ ಅಗತ್ಯವಾಗಿರುವ ಬಿ-ಕಾಂಪ್ಲೆಕ್ಸ್ ವಿಟಾಮಿನ್ ಆಗಿರುವ ಫೊಲೇಟ್ ಪನೀರ್‌ನಲ್ಲಿದೆ. ಅದು ಭ್ರೂಣದ ಬೆಳವಣಿಗೆಗೆ ನೆರವಾಗುವ ಅಗತ್ಯ ವಿಟಾಮಿನ್ ಆಗಿರುವ ಜೊತೆಗೆ ಕೆಂಪು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News