ಇಲ್ಲಿ ಎಲ್ಲವೂ ಆಕಸ್ಮಿಕ !

Update: 2018-02-25 14:36 GMT

ಭಾರತೀಯ ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಧಿಕ ಹಣವನ್ನು ಪಂಗನಾಮ ಹಾಕಿರುವ ಮಾಜಿ ಮದ್ಯದ ದೊರೆ ವಿಜಯ ಮಲ್ಯ ಅವರು ದಿಲ್ಲಿಯಿಂದ ನಾಪತ್ತೆಯಾಗುವ ಒಂದು ದಿನ ಮೊದಲು ಆಕಸ್ಮಿಕವಾಗಿ ಸಂಸತ್ತಿನಲ್ಲಿ ವಿತ್ತಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತನಾಡುತ್ತಿದ್ದುದು ಕಂಡುಬಂದಿತ್ತು.

ಐಪಿಎಲ್ ಹಗರಣದ ರೂವಾರಿ ಲಲಿತ್ ಮೋದಿ ಅವರು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಪುತ್ರನ ಹೋಟೆಲ್ ಉದ್ಯಮದಲ್ಲಿ ಆಕಸ್ಮಿಕವಾಗಿ ಕೋಟ್ಯಂತರ ರೂ.ಗಳನ್ನು ತೊಡಗಿಸಿದ್ದರು.

ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್ ಶಾ ಅವರು 2014, ಜೂ.25ರಂದು ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಮುಂಬೈನ ವಿಶೇಷ ಸಿಬಿಐ ನ್ಯಾಯಾಧೀಶ ಉತ್ಪತ್ ಅವರೆದುರು ಹಾಜರಾಗಬೇಕಿತ್ತು. ಆದರೆ ಆಕಸ್ಮಿಕವಾಗಿ ಜೂ.24ರಂದೇ ನ್ಯಾ.ಉತ್ಪತ್ ಅವರು ‘ತನ್ನ ಕೋರಿಕೆಯ ಮೇರೆಗೆ’ ಪುಣೆಗೆ ವರ್ಗಾವಣೆಗೊಂಡಿದ್ದರು.

ನ್ಯಾ.ಉತ್ಪತ್ ಬಳಿಕ ವಿಶೇಷ ಸಿಬಿಐ ನ್ಯಾಯಾಧೀಶರಾಗಿದ್ದ ನ್ಯಾ.ಲೋಯಾ ಅವರು ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ತನ್ನ ಆದೇಶವನ್ನು ಪ್ರಕಟಿಸಲು ಸಿದ್ಧರಾಗಿದ್ದಾಗಲೇ ಆಕಸ್ಮಿಕವಾಗಿ ನಾಗ್ಪುರಕ್ಕೆ ತೆರಳಿದ್ದವರು ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ನಸುಕಿನ ನಾಲ್ಕು ಗಂಟೆಗೆ ಹೃದಯಾಘಾತ ಸಂಭವಿಸಿದ್ದು, 90 ನಿಮಿಷಗಳ ಬಳಿಕ ಅವರು ಉಳಿದುಕೊಂಡಿದ್ದ ಹಾಸ್ಟೆಲ್‌ನಿಂದ ಕೇವಲ ಐದು ನಿಮಿಷಗಳ ದೂರದಲ್ಲಿದ್ದ ಮೂಳೆತಜ್ಞರ ಆಸ್ಪತ್ರೆಗೆ ಸ್ಥಳೀಯ ನ್ಯಾಯಾಧೀಶರು ಅವರನ್ನು ಸಾಗಿಸಿದ್ದರು. ಅದೇ ಹಾಸ್ಟೆಲ್‌ನಿಂದ ಕೇವಲ ಏಳು ನಿಮಿಷಗಳ ದೂರದಲ್ಲಿ ಹೃದ್ರೋಗ ಆಸ್ಪತ್ರೆಯಿತ್ತಾದರೂ ನ್ಯಾ.ಲೋಯಾರನ್ನು ಆಕಸ್ಮಿಕವಾಗಿ ಮೂಳೆತಜ್ಞರ ಆಸ್ಪತ್ರೆಗೆ ಸಾಗಿಸಲಾಗಿತ್ತು!

ಆಕಸ್ಮಿಕವಾಗಿಯೇ ನ್ಯಾ.ಲೋಯಾ ಅವರ ಮೊಬೈಲ್ ಪೋನ್ ಅದು ಹೇಗೋ ನಾಗ್ಪುರದಿಂದ ತನ್ನಿಂತಾನೇ ಲಾತೂರಿಗೆ ಪ್ರಯಾಣಿಸಿ ಈಶ್ವರ ಬಹೇಟಿ ಎಂಬಾತನ ಕೈಗೆ ಸೇರಿತ್ತು ಮತ್ತು ಅದರಲ್ಲಿಯ ಎಲ್ಲ ಮಾಹಿತಿಗಳು ಅಳಿಸಿಹೋಗಿದ್ದವು.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 11,400 ಕೋ.ರೂ.ಗಳ ವಂಚನೆಯ ಸುದ್ದಿ ಭಾರತದಲ್ಲಿ ಸ್ಫೋಟಗೊಂಡಾಗ ವಂಚಕ ವಜ್ರವ್ಯಾಪಾರಿ ನೀರವ್ ಮೋದಿ, ಆತನ ಪತ್ನಿ ಆ್ಯಮಿ, ಇಬ್ಬರು ಮಕ್ಕಳು, ಸೋದರ ನಿಶಾಲ್, ಸೋದರ ಮಾವ ಮೆಹುಲ್ ಚೋಕ್ಸಿ ಅವರೆಲ್ಲ ಆಕಸ್ಮಿಕವಾಗಿ ವಿದೇಶದಲ್ಲಿದ್ದರು.

ಪನಾಮಾ ದಾಖಲೆಗಳಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹೆಸರಿಸಲ್ಪಟ್ಟಿದ್ದಾಗ ಆಕಸ್ಮಿಕವಾಗಿ ಅವರ ಪತ್ನಿ, ನಟಿ ಕಾಜಲ್ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕಾಣಿಸಿಕೊಂಡಿದ್ದರು. 

ಇದೇ ಆಕಸ್ಮಿಕತೆ ನಟ ಅಮಿತಾಬ್ ಬಚ್ಚನ್ ಅವರ ವಿಷಯದಲ್ಲಿಯೂ ಕಂಡು ಬಂದಿತ್ತು. ಅವರ ಹೆಸರೂ ಪನಾಮಾ ದಾಖಲೆಗಳಲ್ಲಿದ್ದು, ಅದರ ಬೆನ್ನಿಗೇ ಅವರೂ ಪ್ರಧಾನಿ ಜೊತೆ ಕಂಡುಬಂದಿದ್ದರು.

ಅಚ್ಚರಿಯ ಆಕಸ್ಮಿಕ ಘಟನೆಯಲ್ಲಿ 2ಜಿ ಹಗರಣ ಪ್ರಕರಣದ ತೀರ್ಪು ಹೊರಬೀಳುವ ಕೆಲವು ದಿನಗಳಿಗೆ ಮುನ್ನ ಪ್ರಧಾನಿ ಮೋದಿ ಅವರು ಡಿಎಂಕೆಯ ವರಿಷ್ಠ ಎಂ.ಕರುಣಾನಿಧಿ ಮತ್ತು ಆರೋಪಿ ಕನಿಮೋಳಿ ಜೊತೆಯಲ್ಲಿ ಕಂಡು ಬಂದಿದ್ದರು.

ಆಕಸ್ಮಿಕವಾಗಿ  ನೋಟು ನಿಷೇಧವನ್ನು ಪ್ರಕಟಿಸಿದ ಮರುದಿನವೇ ವೃತ್ತಪತ್ರಿಕೆಗಳಲ್ಲಿ ಪೇಟಿಎಮ್‌ನ ಪೂರ್ಣಪುಟದ ಜಾಹೀರಾತಿನಲ್ಲಿ ಮೋದಿ ರಾರಾಜಿಸಿದ್ದರು.

ಸದ್ಯದ ಇಂತಹುದೇ ಇನ್ನೊಂದು ಆಕಸ್ಮಿಕ ಘಟನೆಯಲ್ಲಿ ಪನಾಮಾ ದಾಖಲೆಗಳಲ್ಲಿ ಹೆಸರಿಸಲ್ಪಟ್ಟಿದ್ದ ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಅವರು ನ್ಯಾ.ಲೋಯಾ ಅವರ ಸಾವಿನ ಕುರಿತು ತನಿಖೆಯನ್ನು ಬಯಸಿರುವ ಖಾಸಗಿ ಅರ್ಜಿದಾರರ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರದ ಪರ ವಾದಿಸುತ್ತಿದ್ದಾರೆ. ಕಾಕತಾಳೀಯವಾಗಿ ಅವರು ಹಿಂದೆ ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಮಿತ್ ಶಾ ಪರ ವಾದಿಸಿದ್ದರು.

ನಟ ಸಲ್ಮಾನ್ ಖಾನ್ ಅವರು ಆಕಸ್ಮಿಕವಾಗಿ ಬಿಯಿಂಗ್ ಹ್ಯೂಮನ್ ಟಿ-ಶರ್ಟ್ ಧರಿಸಿ ಮೋದಿಯವರೊಂದಿಗೆ ಗಾಳಿಪಟವನ್ನು ಹಾರಿಸುತ್ತಿದ್ದುದು ಕಂಡು ಬಂದಿತ್ತು. ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಲ್ಮಾನ್ ದೋಷಿಯೆಂದು ನ್ಯಾಯಾಲಯವು ಘೋಷಿಸಿದ ಎರಡೇ ಗಂಟೆಗಳಲ್ಲಿ ಕಾಕತಾಳೀಯವಾಗಿ ಅದೇ ಹರೀಶ ಸಾಳ್ವೆ ಅವರು ಸಲ್ಮಾನ್‌ಗೆ ಜಾಮೀನು ದೊರಕಿಸಿಕೊಂಡಿದ್ದರು.


ಆಕಸ್ಮಿಕವಾಗಿ ನ್ಯಾ.ಲೋಯಾ ಅವರು ವಿಶ್ವಾಸವಿರಿಸಿದ್ದ ಮೂವರು ವ್ಯಕ್ತಿಗಳು ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ಅಪಘಾತದ ಸಮಯ ತಪ್ಪಾಗಿದ್ದರಿಂದ ಓರ್ವ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದ.

ಅಬ್ಬಾ , ಎಷ್ಟೊಂದು ಆಕಸ್ಮಿಕಗಳಲ್ಲವೇ ? 

Full View

Writer - ವಿನೋದ್ ಚಂದ್

contributor

Editor - ವಿನೋದ್ ಚಂದ್

contributor

Similar News