ಐಸಿಸ್ ನಂಟು: ಟರ್ಕಿಯ 15 ಮಹಿಳೆಯರಿಗೆ ಇರಾಕ್ ನಲ್ಲಿ ಮರಣದಂಡನೆ

Update: 2018-02-25 16:57 GMT

ಬಾಗ್ದಾದ್,ಫೆ.25: ಐಸಿಸ್ ಭಯೋತ್ಪಾದಕ ಗುಂಪಿನೊಂದಿಗೆ ನಂಟು ಹೊಂದಿದ್ದಕ್ಕಾಗಿ ಇರಾಕ್ ನ್ಯಾಯಾಲಯವೊಂದು ಟರ್ಕಿ ಮೂಲದ 15 ಮಂದಿ ಮಹಿಳೆಯರಿಗೆ ಮರಣದಂಡನೆ ವಿಧಿಸಿದೆ.

  ಐಸಿಸ್ ಸದಸ್ಯೆಯೆಂದು ಆರೋಪಿಸಲಾದ ಇನ್ನೋರ್ವ ಮಹಿಳೆಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ. ಆರೋಪಿಗಳೆಲ್ಲರೂ ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆಂದು ನ್ಯಾಯಾಂಗದ ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಸ್ ಜೊತೆ ಸಂಬಂಧ ಹೊಂದಿದ ಆರೋಪದಲ್ಲಿ ಇರಾಕ್ ಪ್ರಸ್ತುತ ಕನಿಷ್ಠ 560 ಮಂದಿ ಮಹಿಳೆಯರನ್ನು, 600 ಮಂದಿ ಮಕ್ಕಳನ್ನು ಬಂಧನದಲ್ಲಿರಿಸಿದೆ. ಇವರೆಲ್ಲರನ್ನೂ ಐಸಿಸ್ ಉಗ್ರರ ಬಂಧುಗಳು ಅಥವಾ ಐಸಿಸ್ ಚಟುವಟಿಕೆಗಳಲ್ಲಿ ಶಾಮೀಲಾಗಿರುವವರು ಎಂಬುದಾಗಿ ಅದು ಗುರುತಿಸಿದೆ.

ಕಳೆದ ಜನವರಿಯಲ್ಲಿ ಐಸಿಸ್‌ಗೆ ವ್ಯೂಹಾತ್ಮಕವಾದ ಬೆಂಬಲ ನೀಡಿದ್ದಳೆಂಬ ಆರೋಪದಲ್ಲಿ ಜರ್ಮನ್ ಮೂಲದ ಮಹಿಳೆಯೊಬ್ಬಳಿಗೆ ಇರಾಕ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ವಾರದ ಆರಂಭದಲ್ಲಿ ಫ್ರೆಂಚ್ ಯುವತಿ ಮೆಲಿನಾ ಬೌಗೆದಿರ್‌ಗೆ ಇರಾಕ್ ಗಡಿಯನ್ನು ಆಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಏಳು ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಆಕೆ ಈಗಾಗಲೇ ಅಷ್ಟು ಅವಧಿಯ ಕಾರಾಗೃಹವಾಸವನ್ನು ಅನುಭವಿಸಿರುವುದರಿಂದ ಆಕೆಯ ಬಿಡುಗಡೆಗೆ ಆದೇಶಿಸಿತ್ತು.

 ಐಸಿಸ್ ಸದಸ್ಯತ್ವ ಹೊಂದಿದ್ದಾರೆಂಬ ಆರೋಪದಲ್ಲಿ ಇರಾಕ್‌ನಲ್ಲಿ ಸುಮಾರು 20 ಸಾವಿರ ಮಂದಿಯನ್ನು ಬಂಧನದಲ್ಲಿರಿಸಲಾಗಿದೆಯೆಂದು ತಜ್ಞರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News