ಕಡಿಮೆಯಾದ ಭಾರತೀಯ ವಿದ್ಯಾರ್ಥಿಗಳ ಅಮೆರಿಕ ಮೋಹ

Update: 2018-02-26 04:07 GMT

ಬೆಂಗಳೂರು, ಫೆ.26: ಪದವಿ ಹಂತದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಅಮೆರಿಕದಲ್ಲಿ ಸೇರ್ಪಡೆಯಾಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 2017ರಲ್ಲಿ ಶೇಕಡ 21ರಷ್ಟು ಕಡಿಮೆಯಾಗಿದೆ. ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಮಾಹಿತಿ ಆಧರಿಸಿ ನ್ಯಾಷನಲ್ ಫೌಂಡೇಷನ್ ಫಾರ್ ಅಮೆರಿಕನ್ ಪಾಲಿಸಿ ಸಂಸ್ಥೆ ನಡೆಸಿದ ಅಧ್ಯಯನದಿಂದ ಈ ಅಂಕಿ ಅಂಶ ಬಹಿರಂಗವಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ, 2017ರಲ್ಲಿ ಅಮೆರಿಕದಲ್ಲಿ ಪ್ರವೇಶ ಪಡೆಯುತ್ತಿದ್ದ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಸಂಖ್ಯೆ ಶೇಕಡ 4ರಷ್ಟು ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಪದವಿಗೆ ಆಗಮಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದು ಎಂದು ಎನ್‌ಎಫ್‌ಎಪಿ ಹೇಳಿದೆ.

ಅಮೆರಿಕದ ವಿಶ್ವವಿದ್ಯಾನಿಲಯಗಳಲ್ಲಿ ವಿಜ್ಞಾನ ಪದವಿ ಮತ್ತು ಎಂಜಿನಿಯರಿಂಗ್ ಪದವಿ ಪಡೆಯುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿಗಳು ಅಮೆರಿಕದ ಬಹುತೇಕ ಕಂಪೆನಿಗಳಿಗೆ ಪ್ರತಿಭಾ ಮೂಲವಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಸರ್ಕಾರದ ಕಠಿಣ ವೀಸಾ ನೀತಿ ಮತ್ತು ಉದ್ಯೋಗ ನೀತಿಗಳು ವಿದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸುವುದಕ್ಕೆ ಮತ್ತು ನೇಮಕ ಮಾಡಿಕೊಳ್ಳುವುದಕ್ಕೆ ತಡೆಯಾಗಿ ಪರಿಣಮಿಸಿವೆ ಎಂದು ವರದಿ ಹೇಳಿದೆ. ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರದ ನೋಟು ರದ್ದತಿ ನಿರ್ಧಾರದಿಂದಾಗಿ ನಗದು ಕೊರತೆ ತಲೆದೋರಿರುವುದು ಕೂಡಾ ಭಾರತೀಯ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಆದರೆ ಇದೇ ಪ್ರಮುಖ ಕಾರಣವಾಗಿರುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಪದವಿ ಪೂರ್ವ ಕೋರ್ಸ್‌ಗಳಿಗೆ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 740ರಷ್ಟು ಹೆಚ್ಚಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಅಮೆರಿಕದಲ್ಲಿ ಸುಮಾರು 2,06,708 ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಂದಾಜು ಮಾಡಿದೆ. ಪದವಿ ಪೂರ್ಣಗೊಂಡ ಬಳಿಕ ವಿದೇಶಿ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗಾವಕಾಶವನ್ನು ಟ್ರಂಪ್ ಸರ್ಕಾರ ಸೀಮಿತಗೊಳಿಸಿರುವುದು ಕೂಡಾ ಇದಕ್ಕೆ ಕಾರಣ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News