ಬಂಡುಕೋರರ ವಿರುದ್ಧ ದಾಳಿ ಮುಂದುವರಿಕೆ: ಇರಾನ್
Update: 2018-02-26 23:05 IST
ಬೈರೂತ್, ಫೆ. 26: ಸಿರಿಯದ ರಾಜಧಾನಿ ಡಮಾಸ್ಕಸ್ ಸಮೀಪದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶದ ಮೇಲೆ ಅಧ್ಯಕ್ಷ ಬಶರ್ ಅಲ್-ಅಸದ್ ಪರ ಪಡೆಗಳು ದಾಳಿ ನಡೆಸುವುದನ್ನು ಮುಂದುವರಿಸುತ್ತವೆ ಎಂದು ಇರಾನ್ ಘೋಷಿಸಿದೆ.
ಸಿರಿಯದಾದ್ಯಂತ 30 ದಿನಗಳ ಯುದ್ಧವಿರಾಮವನ್ನು ಘೋಷಿಸುವ ವಿಶ್ವಸಂಸ್ಥೆಯ ನಿರ್ಣಯವನ್ನು ಉಲ್ಲಂಘಿಸಿ ಈ ಪ್ರದೇಶದಲ್ಲಿ ಭೂಕಾಳಗ ನಡೆಯುತ್ತಿದೆ.
ಅದೇ ವೇಳೆ, ಸಿರಿಯದ ಉತ್ತರ ಭಾಗದಲ್ಲಿ ಕುರ್ದ್ ಬಂಡುಕೋರರ ವಿರುದ್ಧ ತಾನು ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ ಎಂದು ಟರ್ಕಿ ಹೇಳಿದೆ.
ಸಂಘರ್ಷಪೀಡಿತ ಪ್ರದೇಶಗಳ ಜನರಿಗೆ ನೆರವು ಸಾಮಗ್ರಿಗಳನ್ನು ಪೂರೈಸುವುದಕ್ಕಾಗಿ ಯುದ್ಧವಿರಾಮ ಜಾರಿಗೊಳಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ.
ಈ ನಡುವೆ, ಘೌಟ ಪ್ರದೇಶದಲ್ಲಿ ಸಿರಿಯ ನಡೆಸುತ್ತಿರುವ ವಾಯು ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ರವಿವಾರ 527ಕ್ಕೇರಿದೆ.