ದಕ್ಷಿಣ ಆಫ್ರಿಕದಲ್ಲಿ ಭಾರತ ಯಶಸ್ವಿ ಪ್ರದರ್ಶನ

Update: 2018-02-26 18:38 GMT

ಹೊಸದಿಲ್ಲಿ, ಫೆ.26: ವಿರಾಟ್ ಕೊಹ್ಲಿಯ ಉತ್ಕೃಷ್ಟ ಬ್ಯಾಟಿಂಗ್, ಟೆಸ್ಟ್ ಕ್ರಿಕೆಟ್‌ನಲ್ಲಿ ಮುಹಮ್ಮದ್ ಶಮಿ ಹಾಗೂ ಜಸ್‌ಪ್ರಿತ್ ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ದಕ್ಷಿಣ ಆಫ್ರಿಕದ ಯಶಸ್ವಿ ಪ್ರವಾಸದಲ್ಲಿ ಭಾರತದ ಧನಾತ್ಮಕ ಅಂಶವಾಗಿ ಪರಿಣಮಿಸಿದೆ. ಹಲವು ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡ ಉಪಖಂಡದ ಹೊರಗೆ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದೆ. ಮೂರು ಪ್ರಕಾರದ ಕ್ರಿಕೆಟ್ ಸರಣಿಗಳ ಪೈಕಿ ಎರಡರಲ್ಲಿ ಜಯ ಸಾಧಿಸಿದೆ. ಏಳು ವಾರಗಳ ಕಾಲ ನಡೆದ ದಕ್ಷಿಣ ಆಫ್ರಿಕ ಕ್ರಿಕೆಟ್ ಪ್ರವಾಸದುದ್ದಕ್ಕೂ ನಾಯಕ ಕೊಹ್ಲಿ ಶ್ಲಾಘನಾರ್ಹ ಪ್ರದರ್ಶನ ನೀಡಿದ್ದಾರೆ.

3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಟ್ಟು 60 ವಿಕೆಟ್‌ಗಳ ಪೈಕಿ 47 ವಿಕೆಟ್‌ಗಳನ್ನು ಮುಹಮ್ಮದ್ ಶಮಿ(3 ಪಂದ್ಯ,15 ವಿಕೆಟ್), ಜಸ್‌ಪ್ರಿತ್ ಬುಮ್ರಾ(3 ಪಂದ್ಯ,14 ವಿಕೆಟ್), ಭುವನೇಶ್ವರ ಕುಮಾರ್(2 ಪಂದ್ಯ,10 ವಿಕೆಟ್) ಹಾಗೂ ಇಶಾಂತ್ ಶರ್ಮ(2 ಪಂದ್ಯ,8 ವಿಕೆಟ್) ಪಡೆದಿದ್ದಾರೆ. ಸೆಂಚೂರಿಯನ್‌ನಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಸೋತಿದ್ದರೂ ಬುಮ್ರಾ ಓರ್ವ ಸಮರ್ಥ ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರತ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಒಟ್ಟು 286 ರನ್ ಗಳಿಸಿದ ನಾಯಕ ಕೊಹ್ಲಿ ತಂಡದ ಮರ್ಯಾದೆ ಕಾಪಾಡಿದರು.

ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಬದಲಿಗೆ ರೋಹಿತ್ ಶರ್ಮಗೆ ಅವಕಾಶ ನೀಡಿದ್ದ ಕೊಹ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ರೋಹಿತ್ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದ್ದರು. ‘ಕಿಂಗ್ ಕೊಹ್ಲಿ’ ಆರು ಏಕದಿನ ಕ್ರಿಕೆಟ್‌ನಲ್ಲಿ 3 ಶತಕಗಳನ್ನು ಸಿಡಿಸಿ ಮತ್ತೊಮ್ಮೆ ತಂಡಕ್ಕೆ ಆಸರೆಯಾಗಿದ್ದರು. ಏಕದಿನ ಸರಣಿಯಲ್ಲಿ ಒಟ್ಟು 558 ರನ್ ಗಳಿಸಿದ ಕೊಹ್ಲಿ ತನ್ನ ತಂಡ ಸರಣಿಯನ್ನು 5-1 ಅಂತರದಿಂದ ಗೆದ್ದುಕೊಳ್ಳಲು ನೆರವಾಗಿದ್ದರು. ಎಫ್‌ಡು ಪ್ಲೆಸಿಸ್ ಹಾಗೂ ಎಬಿ ವಿಲಿಯರ್ಸ್ ಅನುಪಸ್ಥಿತಿ ಭಾರತಕ್ಕೆ ವರವಾಗಿ ಪರಿಣಮಿಸಿದರೂ ಪ್ರತಿ ಪಂದ್ಯದಲ್ಲೂ ಭಾರತದ ಪ್ರದರ್ಶನ ಗಮನಾರ್ಹವಾಗಿತ್ತು. ಏಕದಿನ ಸರಣಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಕೊಹ್ಲಿ ಪಡೆ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ‘ಎ’ ಪ್ಲಾನ್ ಸಿದ್ಧಪಡಿಸಿಕೊಂಡಿದೆ.

 ಇಬ್ಬರು ಯುವ ಸ್ಪಿನ್ನರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಏಕದಿನ ಸರಣಿಯಲ್ಲಿ ಒಟ್ಟು 33 ವಿಕೆಟ್ ಉಡಾಯಿಸಿದ್ದರು. ಭುವನೇಶ್ವರ,ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಅವರಿದ್ದ ಬೌಲಿಂಗ್ ದಾಳಿ ಸಮರ್ಥವಾಗಿತ್ತು.

ಎಂ.ಎಸ್. ಧೋನಿ 2019ರ ವಿಶ್ವಕಪ್‌ನಲ್ಲಿ ಆಡುತ್ತಾರೋ,ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಶಿಖರ್ ಧವನ್, ರೋಹಿತ್ ಹಾಗೂ ಕೊಹ್ಲಿ 1, 2 ಹಾಗೂ 3ನೇ ಕ್ರಮಾಂಕದಲ್ಲಿ ಆಡುವುದು ದೃಢಪಟ್ಟಿದೆ. ಆದರೆ, 4 ಹಾಗೂ 5ನೇ ಕ್ರಮಾಂಕದಲ್ಲಿ ಐವರು ಸ್ಪರ್ಧಿಗಳಿದ್ದಾರೆ.

ಆಸ್ಟ್ರೇಲಿಯದಲ್ಲಿ ನಡೆದಿದ್ದ 2015ರ ವಿಶ್ವಕಪ್‌ನಲ್ಲಿ 4ನೇ ಕ್ರಮಾಂಕದಲ್ಲಿ ಯಶಸ್ಸು ಸಾಧಿಸಿದ್ದ ಅಜಿಂಕ್ಯ ರಹಾನೆ ಮತ್ತೆ ಅವಕಾಶ ಪಡೆಯುವ ಸಾಧ್ಯತೆಯಿದೆ. ಮನೀಷ್ ಪಾಂಡೆ ತನಗೆ ಲಭಿಸಿದ ಸೀಮಿತ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕೇದಾರ್ ಜಾಧವ್ ಆಲ್‌ರೌಂಡ್ ಪ್ರದರ್ಶನ ನೀಡಬಲ್ಲರು. ಶ್ರೇಯಸ್ ಅಯ್ಯರ್ ನೈಜ ಸ್ಟ್ರೋಕ್‌ಪ್ಲೇಯರ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಹಿರಿಯ ಆಟಗಾರ ಸುರೇಶ್ ರೈನಾ 3 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ರನ್ ಗಳಿಸಲು ಪ್ರಯತ್ನ ನಡೆಸಿದ್ದಾರೆ. ಕೊನೆಯ ಟ್ವೆಂಟಿ-20 ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News