ಮಧುಮೇಹಿಗಳಲ್ಲಿ ನರಗಳ ನೋವಿಗೆ ಮನೆಮದ್ದುಗಳು ಇಲ್ಲಿವೆ.....

Update: 2018-02-27 10:38 GMT

ಮಧುಮೇಹವು ಇಂದು ವಿಶ್ವದಲ್ಲಿ ಅತ್ಯಂತ ಹೆಚ್ಚು ಪ್ರಚಲಿತವಾಗಿದ್ದು, ಮಧುಮೇಹಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದೊಂದು ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು ನಿಯಂತ್ರಿಸದಿದ್ದರೆ ರಕ್ತದಲ್ಲಿ ಸಕ್ಕರೆಯ ಮಟ್ಟವು ಏರಿಕೆಯಾಗಿ ಶರೀರದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತದೆ ಮತ್ತು ಮಧುಮೇಹಿ ನರರೋಗಕ್ಕೆ ಕಾರಣವಾಗಬಹುದು.

ಬಾಹ್ಯ ನರರೋಗವೆಂದೂ ಕರೆಯಲಾಗುವ ಮಧುಮೇಹಿ ನರರೋಗವು ಮಧುಮೇಹದಿಂದ ನರಕ್ಕೆ ಹಾನಿಯಾದಾಗ ಕಾಣಿಸಿಕೊಳ್ಳುತ್ತದೆ. ರಕ್ತದಲ್ಲಿಯ ಸಕ್ಕರೆ ಮಟ್ಟವು ತುಂಬ ಹೆಚ್ಚಾದಾಗ ನರಗಳಿಗೆ ಹಾನಿಯುಂಟಾಗುತ್ತದೆ. ಪರಿಣಾಮವಾಗಿ ಕೈಕಾಲು, ಪಾದ ಮತ್ತು ಬೆರಳುಗಳಲ್ಲಿ ಮರಗಟ್ಟುವಿಕೆ ಮತ್ತು ಜುಮುಗುಟ್ಟುವಿಕೆಯ ಜೊತೆಗೆ ನೋವಿನ ಅನುಭವವಾಗುತ್ತದೆ. ಹೀಗಾಗಿ ರಕ್ತದಲ್ಲಿಯ ಗ್ಲುಕೋಸ್ ಮಟ್ಟದ ಮೇಲೆ ನಿಗಾ ಇರಿಸುವುದು ಮುಖ್ಯವಾಗಿದೆ. ಮಧುಮೇಹಿಗಳಲ್ಲಿ ನರಗಳ ನೋವನ್ನು ಶಮನಗೊಳಿಸಲು ಪರಿಣಾಮಕಾರಿಯಾದ ಕೆಲವು ಮನೆಮದ್ದುಗಳ ಕುರಿತು ಮಾಹಿತಿಯಿಲ್ಲಿದೆ.

► ಬಿಸಿನೀರಿನ ಸ್ನಾನ

ಬಿಸಿನೀರಿನ ಸ್ನಾನ ಮಧುಮೇಹಿ ನರರೋಗಕ್ಕೆ ಅತ್ಯಂತ ಸುಲಭದ ಮನೆಮದ್ದಾಗಿದೆ. ನೀರಿನ ಬಿಸಿಯಿಂದಾಗಿ ರಕ್ತಸಂಚಾರವು ಉತ್ತಮಗೊಳ್ಳುತ್ತದೆ ಮತ್ತು ನೋವು ಬೇಗ ಶಮನಗೊಳ್ಳುತ್ತದೆ. ಪ್ರತಿದಿನ ಕನಿಷ್ಠ 20 ನಿಮಿಷಗಳ ಬಿಸಿನೀರಿನ ಸ್ನಾನ ಪರಿಣಾಮ ಕಾರಿಯಾಗಿರುತ್ತದೆ. ಬೇಕಾದರೆ ಬಿಸಿನೀರಿಗೆ ಒಂದು ಕಪ್ ಎಪ್ಸಮ್ ಸಾಲ್ಟ್‌ನ್ನು ಸೇರಿಸಿಕೊಳ್ಳಬಹುದು.

► ಶುಂಠಿ ಚಹಾ

ಶುಂಠಿಯು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದ್ದು, ಮಧುಮೇಹಿ ನರರೋಗದ ನೋವಿನಿಂದ ಪಾರಾಗಲು ನೆರವಾಗುತ್ತದೆ. ಶುಂಠಿ ಚಹಾ ಕುಡಿಯುವುದ ರಿಂದ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದಾಗಿದೆ. ಒಂದು ಕಪ್ ನೀರನ್ನು ಕುದಿಸಿ ಅದಕ್ಕೆ ಎರಡು ತುಂಡು ಶುಂಠಿ ಮತ್ತು ಒಂದು ಚಮಚ ಶುಂಠಿ ಹುಡಿಯನ್ನು ಸೇರಿಸಿ. 5-10 ನಿಮಿಷ ಹಾಗೆಯೇ ಇಟ್ಟು ಬಳಿಕ ಸೇವಿಸಿ. ಪ್ರತಿನಿತ್ಯ ಈ ಚಹಾ ಸೇವಿಸಿ.

► ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮವು ಮಧುಮೇಹಿ ನರರೋಗಕ್ಕೆ ಅತ್ಯುತ್ತಮ ಚಿಕಿತ್ಸೆಗಳ ಲ್ಲೊಂದಾಗಿದೆ. ಅದು ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ. ತನ್ಮೂಲಕ ಮಧುಮೇಹವನ್ನು ನಿಯಂತ್ರಿಸುತ್ತದೆ. ಪ್ರತಿನಿತ್ಯ ಬಿರುಸಾದ ನಡಿಗೆ ಅಥವಾ 20 ನಿಮಿಷಗಳ ಕಾಲ ಈಜುವಿಕೆ ಶರೀರಕ್ಕೆ ಅಗತ್ಯ ವ್ಯಾಯಾಮವನ್ನು ಒದಗಿಸುತ್ತದೆ.

► ಮಸಾಜ್

  ಮಧುಮೇಹಿ ನರಗಳ ನೋವಿಗೆ ಮಸಾಜ್ ಇನ್ನೊಂದು ಉತ್ತಮ ಚಿಕಿತ್ಸೆಯಾಗಿದೆ. ಅದು ನರಗಳಲ್ಲಿ ರಕ್ತಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಸ್ನಾಯುಗಳನ್ನು ಬಲಗೊಳಿಸುತ್ತದೆ. ಪೀಡಿತ ಭಾಗದಲ್ಲಿ ಕೆಲವು ಹನಿಗಳಷ್ಟು ಸಾಸಿವೆ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಲೇಪಿಸಿ, 10-15 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ಬೆಚ್ಚಗಿನ ಟವೆಲ್‌ನಿಂದ ಒರೆಸಿ. ದಿನಕ್ಕೆ ಹಲವಾರು ಬಾರಿ ಹೀಗೆ ಮಾಡುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

► ಎಸೆನ್ಶಿಯಲ್ ಆಯಿಲ್

ಗಿಡಮೂಲಿಕೆಗಳ ಸಾರಗಳನ್ನೊಳಗೊಂಡ ಎಸೆನ್ಶಿಯಲ್ ಆಯಿಲ್‌ಗಳು ನೋವನ್ನು ಮತ್ತು ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಮಧುಮೇಹಿ ನರರೋಗದ ಚಿಕಿತ್ಸೆಗಾಗಿ ಪೆಪ್ಪರ್‌ಮಿಂಟ್, ಲ್ಯಾವೆಂಡರ್ ಅಥವಾ ಫ್ರಾಂಕಿನ್ಸೆನ್ಸ್ ಎಸೆನ್ಶಿಯಲ್ ಆಯಿಲ್‌ನ್ನು ಬಳಸಬಹುದು. ತೈಲದ ಕೆಲವು ಹನಿಗಳನ್ನು ನೋವಿರುವ ಭಾಗದಲ್ಲಿ ಲೇಪಿಸಿ ಮಸಾಜ್ ಮಾಡುವುದು ಒಳ್ಳೆಯ ಪರಿಣಾಮವನ್ನು ನೀಡುತ್ತದೆ.

► ದಾಲ್ಚಿನ್ನಿ

ದಾಲ್ಚಿನ್ನಿಯು ಉತ್ಕರ್ಷಣ ನಿರೋಧಕ, ಸೂಕ್ಷ್ಮಜೀವಿ ನಿರೋಧಕ, ಮಧುಮೇಹ ನಿರೋಧಕ ಮತ್ತು ಶರೀರದ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದ್ದು, ಇವು ಮಧುಮೇಹ ನರರೋಗದ ಚಿಕಿತ್ಸೆಯಲ್ಲಿ ನೆರವಾಗುತ್ತವೆ. ನೋವಿರುವ ಭಾಗದಲ್ಲಿ ದಾಲ್ಚಿನ್ನಿ ತೈಲದಿಂದ ಮಸಾಜ್ ಮಾಡಿ. ದಾಲ್ಚಿನ್ನಿ ಚಹಾ ಕುಡಿಯುವ ಜೊತೆಗೆ ಅಡುಗೆಯಲ್ಲಿ ದಾಲ್ಚಿನ್ನಿ ಬಳಕೆಯು ನೋವನ್ನು ಶಮನಗೊಳಿಸಲು ನೆರವಾಗುತ್ತದೆ.

► ಇವನಿಂಗ್ ಪ್ರಿಮ್‌ರೋಸ್ ತೈಲ

ಇವನಿಂಗ್ ಪ್ರಿಮ್‌ರೋಸ್ ಅಥವಾ ಬಸಂತಿ ಗುಲಾಬಿ ತೈಲವು ಉರಿಯೂತ ನಿವಾರಕ ಗುಣವನ್ನು ಹೊಂದಿದ್ದು, ನರಗಳ ಮರಗಟ್ಟುವಿಕೆ, ಜುಮುಗುಡುವಿಕೆ ಮತ್ತು ಉರಿಯನ್ನು ತಗ್ಗಿಸುತ್ತದೆ. ಪೀಡಿತ ಭಾಗಕ್ಕೆ ಒಂದು ಚಮಚ ಈ ತೈಲವನ್ನು ಲೇಪಿಸುವುದು ಉತ್ತಮ ಪರಿಣಾಮವವನ್ನು ನೀಡುತ್ತದೆ. ಇದರ ಜೊತೆಗೆ ಈ ತೈಲದ ಕ್ಯಾಪ್ಸೂಲ್ ಅನ್ನೂ ಸೇವಿಸಬಹುದಾಗಿದೆ.

► ವಿಟಾಮಿನ್ ಸಿ

ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸಲು, ನರಗಳ ನೋವನ್ನು ತಗ್ಗಿಸಲು ಮತ್ತು ನರಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸಲು ವಿಟಾಮಿನ್ ಸಿ ನೆರವಾಗುತ್ತದೆ. ಅದು ನೋವನ್ನು ತ್ವರಿತವಾಗಿ ಉಪಶಮನಗೊಳಿಸುತ್ತದೆ. ಕಿತ್ತಳೆ, ಲಿಂಬೆ, ಅನಾನಸ್, ಟೊಮೆಟೊ, ಪಾಲಕ್, ಸ್ಟ್ರಾಬೆರಿ ಇತ್ಯಾದಿಗಳನ್ನು ಸೇವಿಸುವ ಮೂಲಕ ಅಗತ್ಯ ವಿಟಾಮಿನ್ ಸಿ ಪಡೆಯಬಹುದಾಗಿದೆ.

► ಕೆಪಸೈಸಿನ್ ಕ್ರೀಂ

ಕ್ಯಾಪ್ಸಿಕಮ್‌ಗಳ ಮೂಲಕ ಪಡೆಯಲಾಗುವ ರಾಸಾಯನಿಕ ಕೆಪಸೈಸಿನ್ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ. ಅದು ನರಗಳ ನೋವನ್ನು ತಗ್ಗಿಸಲು ನೆರವಾಗುತ್ತದೆ. ಈ ಕ್ರೀಮ್‌ನ್ನು ಪೀಡಿತ ಭಾಗದಲ್ಲಿ ದಿನಕ್ಕೆ 2-3 ಬಾರಿ ಲೇಪಿಸಿ.

► ವಿಟಾಮಿನ್ ಬಿ6

ವಿಟಾಮಿನ್ ಬಿ6 ನರಗಳ ಮರಗಟ್ಟುವಿಕೆ ಮತ್ತು ಜುಮುಗುಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನರಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸುತ್ತದೆ. ವಿಟಾಮಿನ್ ಬಿ6 ಸಮೃದ್ಧ ಆಹಾರಗಳ ಸೇವನೆಯು ಮಧುಮೇಹಿ ನರರೋಗದ ವಿರುದ್ಧ ಪರಿಣಾಮ ಕಾರಿಯಾಗುತ್ತದೆ. ಬಾಳೇಹಣ್ಣು,ಪೀನಟ್ ಬಟರ್, ಟೊಮೆಟೊ ರಸ, ಸೋಯಾಬೀನ್, ಅಕ್ರೋಟ್ ಇತ್ಯಾದಿಗಳನ್ನು ಸೇವಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News