ಮಧುಮೇಹಿಗಳೇ, ಈ ಪರೀಕ್ಷೆ ಮಾಡಿಸಿಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಉತ್ತಮ

Update: 2018-02-28 10:16 GMT

ಭಾರತವು ವಿಶ್ವದ ‘ಮಧುಮೇಹ ರಾಜಧಾನಿ’ ಎಂದೇ ಕುಖ್ಯಾತವಾಗಿದೆ. ಭಾರತದ ಜನಸಂಖ್ಯೆಯ ಶೇ.7.8ರಷ್ಟು ಜನರು ಮಧುಮೇಹದಿಂದ ನರಳುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯು ತಿಳಿಸಿದೆ.

ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳು ಇತರರಂತೆ ಸಾಮಾನ್ಯ ಜೀವನವನ್ನು ಸಾಗಿಸಬಹುದಾಗಿದೆ. ಸಕ್ಕರೆಯ ಮಟ್ಟವನ್ನು ಆಗಾಗ್ಗೆ ತಪಾಸಣೆ ಮಾಡಿಸುವ ಮಧುಮೇಹಿಗಳಲ್ಲಿ ಹೆಚ್ಚಿನ ಸುಧಾರಣೆ ಕಂಡುಬರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುರಗಾಂವ್‌ನ ಹೆಲ್ದಿಯನ್ಸ್ ಆರೋಗ್ಯ ಸಂಸ್ಥೆಯ ಅಧ್ಯಯನದಂತೆ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್)ದಲ್ಲಿ 25 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ ಶೇ.39ರಷ್ಟು ಜನರು ಮಧುಮೇಹ ಪೀಡಿತರಾಗಿದ್ದಾರೆ. ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಸಹಜವಾಗಿ ನಿಯಂತ್ರಿಸಲು ಶರೀರಕ್ಕೆ ಸಾಧ್ಯವಾಗದಿದ್ದಾಗ ಮಧುಮೇಹವು ಕಾಣಿಸಿಕೊ ಳ್ಳುತ್ತದೆ. ರಕ್ತದಲ್ಲಿನ ಸಕ್ಕರೆಯ ಮೇಲೆ ಸರಿಯಾದ ನಿಗಾ ಇರಿಸುವುದರಿಂದ ಮಧುಮೇಹ ಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ ಎಂದು ಅಧ್ಯಯನವು ಹೇಳಿದೆ. ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟದ ತಪಾಸಣೆಯು ಸೂಕ್ತ ಕ್ರಮವನ್ನು ಕೈಗೊಳ್ಳಲು ರೋಗಿಗೆ ಮಾನಸಿಕ ಪ್ರಚೋದನೆ ನೀಡುತ್ತದೆ ಎನ್ನುತ್ತಾರೆ ಹೆಲ್ದಿಯನ್ಸ್‌ನ ಡಾ.ವಾಲಿಯಾ ಮುರ್ಷಿದಾ ಹುಡಾ.

ಸಕ್ಕರೆ ಪರೀಕ್ಷೆಯು ನೆನಪಿನೋಲೆಯಿದ್ದಂತೆ. ಅದು ತನ್ನ ಆರೋಗ್ಯವನ್ನು ಸುಧಾರಿಸಿಕೊಳ್ಳಲು ರೋಗಿಗೆ ಎಚ್ಚರಿಕೆ ನೀಡುವುದರೊಂದಿಗೆ ಆತನನ್ನು ಪ್ರೇರೇಪಿಸುತ್ತದೆ. ಜೀವನಶೈಲಿಯಲ್ಲಿ ಬದಲಾವಣೆಗಳು ಮತ್ತು ಸೂಕ್ತ ಆಹಾರ ಸೇವನೆಯಿಂದ ಮಧುಮೇಹವನ್ನು ಹಿಮ್ಮೆಟ್ಟಿಸಬಹುದಾಗಿದೆ ಎನ್ನುವುದು ಹುಡಾ ಅವರ ಅಭಿಪ್ರಾಯ.

ಸಂಶೋಧಕರ ತಂಡವು 2017ರಲ್ಲಿ ದಿಲ್ಲಿ ಮತ್ತು ಎನ್‌ಸಿಆರ್‌ನಾದ್ಯಂತ ನಡೆಸಲಾಗಿದ್ದ ಐದು ಲಕ್ಷಕ್ಕೂ ಅಧಿಕ ಸಕ್ಕರೆ ಪರೀಕ್ಷೆಗಳು ಮತ್ತು 80,000 ಗ್ಲೈಸೇಟೆಡ್ ಹಿಮೊಗ್ಲೋಬಿನ್ (ಎಚ್‌ಬಿಎ1ಸಿ) ಪರೀಕ್ಷೆಗಳನ್ನು ವಿಶ್ಲೇಷಣೆಗೊಳಪಡಿಸಿತ್ತು. ತಂಡದ ವರದಿಯಂತೆ ವರ್ಷಕ್ಕೆ ಎರಡು ಬಾರಿ ಸಕ್ಕರೆ ಪರೀಕ್ಷೆ ಮಾಡಿಸಿಕೊಂಡವರ ಪೈಕಿ ಕೇವಲ ಶೇ.7ರಷ್ಟು ಜನರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿತ್ತು. ಆದರೆ ಪ್ರತಿ ಎರಡು ತಿಂಗಳಿಗೊಮ್ಮೆ ಸಕ್ಕರೆ ಪರೀಕ್ಷೆ ಮಾಡಿಸಿಕೊಂಡವರ ಪೈಕಿ ಶೇ.41ರಷ್ಟು ಜನರ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗಿದ್ದು, ಅವರ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ನಿಯಂತ್ರಣದಲ್ಲಿತ್ತು.

ಆಗಾಗ್ಗೆ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವವರು ತಮ್ಮ ಕಾಯಿಲೆ ಮತ್ತು ಅದರ ಸಂಕೀರ್ಣತೆಗಳ ಬಗ್ಗೆ ಹೆಚ್ಚಿನ ಜಾಗ್ರತಿ ಹೊಂದಿರುತ್ತಾರೆ. ಆಗಾಗ್ಗೆ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳುವವರು ಸೂಕ್ತ ಆಹಾರ ಸೇವನೆಯೊಂದಿಗೆ ವೈದ್ಯರೊಂದಿಗೆ ಸಮಾಲೋಚಿಸಿ ಅವರು ಸೂಚಿಸಿದ ಔಷಧಿಗಳನ್ನು ಸೇವಿಸುವುದರಿಂದ ಅವರಿಗೆ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಸಂಶೋಧನಾ ತಂಡದ ಸದಸ್ಯರಾಗಿದ್ದ ದಿಲ್ಲಿಯ ಆಕಾಶ ಹೆಲ್ತಕೇರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ವಿಕ್ರಮಜೀತ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News