ನಿಮ್ಮ ಪಿಎಫ್ ಹಣ ಶೀಘ್ರ ಮರುಪಾವತಿಯಾಗಬೇಕೇ?: ಹಾಗಿದ್ದರೆ ಈ ಕೆಲಸವನ್ನು ಮೊದಲು ಮಾಡಿ

Update: 2018-02-28 11:49 GMT

ನೌಕರರು ಭವಿಷ್ಯನಿಧಿಯಲ್ಲಿ ತೊಡಗಿಸಿರುವ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನು ಸುಗಮವಾಗಿಸಲು ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯು ಆಗಾಗ್ಗೆ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಇತ್ತೀಚಿಗೆ ಅದು ತನ್ನ ಸದಸ್ಯರು ಸರಕಾರದ ಉಮಂಗ್ ಆ್ಯಪ್ ಬಳಸಿ ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್)ಯನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲು ಸೌಲಭ್ಯವನ್ನು ಒದಗಿಸಿದೆ.

ಸದಸ್ಯರು ತಮ್ಮ ಯುಎಎನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡುವುದನ್ನು ಇಪಿಎಫ್‌ಒ ಇನ್ನೂ ಕಡ್ಡಾಯಗೊಳಿಸಿಲ್ಲವಾದರೂ ಹಾಗೆ ಮಾಡುವುದರಿಂದ ಭವಿಷ್ಯನಿಧಿ ಯಲ್ಲಿನ ಸದಸ್ಯರ ಹೂಡಿಕೆಯ ಮರುಪಾವತಿ ಪ್ರಕ್ರಿಯೆ ಸುಗಮವಾಗುತ್ತದೆ. ಯುಎಎನ್ ಅನ್ನು ಎಲ್ಲ ಭವಿಷ್ಯನಿಧಿ ಸದಸ್ಯರಿಗೆ ಕಡ್ಡಾಯಗೊಳಿಸಲಾಗಿದ್ದು, ಅದು ಪಿಎಫ್ ಖಾತೆಯ ನಿರ್ವಹಣೆಯಲ್ಲಿ ನೆರವಾಗುವ ಜೊತೆಗೆ ಪಿಎಫ್ ಹಣದ ವರ್ಗಾವಣೆ ಮತ್ತು ಹಿಂದೆಗೆಕೆಯುವಿಕೆಯನ್ನು ಸುಲಭವಾಗಿಸಿದೆ.

ನೆನಪಿಡಿ, ಹೆಚ್ಚಿನ ಪ್ರಕರಣಗಳಲ್ಲಿ ಉದ್ಯೋಗದಾತರೇ ಯುಎಎನ್ ಅನ್ನು ಒದಗಿಸುತ್ತಾರೆ ಮತ್ತು ಉದ್ಯೋಗಿಯು ತನ್ನ ಕೆವೈಸಿ ದಾಖಲೆಗಳನ್ನು ಉದ್ಯೋಗದಾತರಿಗೆ ಸಲ್ಲಿಸಿ ಯುಎಎನ್ ಅನ್ನು ಕ್ರಿಯಾಶೀಲಗೊಳಿಸಿಕೊಳ್ಳಬೇಕಾಗುತ್ತದೆ,ಅಷ್ಟೇ. ಅದು ಒಂದು ಬಾರಿ ನೀಡಲಾಗುವ ಕಾಯಂ ಸಂಖ್ಯೆಯಾಗಿದ್ದು, ಉದ್ಯೋಗಿಯ ವೃತ್ತಿಜೀವನದುದ್ದಕ್ಕೂ ಅದು ಬದಲಾಗುವುದಿಲ್ಲ.

ಯುಎಎನ್‌ನ್ನು ಆಧಾರ್‌ನೊಂದಿಗೆ ಜೋಡಿಸಲು ಮೂರು ವಿಧಾನಗಳಿವೆ. ಇದಕ್ಕಾಗಿ ನಿಮ್ಮ ಯುಎಎನ್ ಸಕ್ರಿಯವಾಗಿರಬೇಕು. ಈ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ...

1)ಉಮಂಗ್ ಆ್ಯಪ್ ಬಳಕೆ

ಉಮಂಗ್ ಆ್ಯಪ್ ಇಪಿಎಫ್‌ಒ ಸೇವೆಗಳು ಸೇರಿದಂತೆ ಹಲವಾರು ಸರಕಾರಿ ಸೇವೆಗಳ(ಕೇಂದ್ರ,ರಾಜ್ಯ ಮತ್ತು ಪ್ರಾದೇಶಿಕ) ಏಕೀಕೃತ ಪ್ಲಾಟ್‌ಫಾರ್ಮ್ ಆಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಯುಎಎನ್ ಅನ್ನು ದಾಖಲಿಸಿದರೆ ನಿಮ್ಮ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ) ಬರುತ್ತದೆ. ಒಟಿಪಿ ದೃಢೀಕರಣದ ಬಳಿಕ ನಿಮ್ಮ ಆಧಾರ್ ವಿವರಗಳನ್ನು ಒದಗಿಸಿದರೆ ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮತ್ತು ಇ-ಮೇಲ್ ಐಡಿಗೆ ಇನ್ನೊಂದು ಒಟಿಪಿಯನ್ನು ಕಳುಹಿಸಲಾಗುತ್ತದೆ. ಒಟಿಪಿ ದೃಢೀಕರಣದ ಬಳಿಕ ಯುಎಎನ್ ಮತ್ತು ಆಧಾರ್ ವಿವರಗಳು ತಾಳೆಯಾದರೆ ಯುಎಎನ್ ಆಧಾರ್ ನೊಂದಿಗೆ ಜೋಡಣೆಗೊಳ್ಳುತ್ತದೆ.

2) ಇಪಿಎಫ್‌ಒದ ಇ-ಕೆವೈಸಿ ಪೋರ್ಟಲ್‌ನಲ್ಲಿ ಬಯೊಮೆಟ್ರಿಕ್ ಮಾಹಿತಿಗಳ ಬಳಕೆ

ಈ ವಿಧಾನವನ್ನು ಬಳಸಿ ಯುಎಎನ್ ಮತ್ತು ಆಧಾರ್ ಜೋಡಣೆಗೊಳಿಸಲು ನೀವು ಆಧಾರ್ ದೃಢೀಕರಣಕ್ಕಾಗಿ ನೋಂದಾಯಿತ ಬಯೊಮೆಟ್ರಿಕ್ ಸಾಧನವನ್ನು ಹೊಂದಿರಬೇಕಾಗುತ್ತದೆ.

https://iwu.epfindia.gov.in/eKYC/ ಗೆ ಭೇಟಿ ನೀಡಿ ‘ಫಾರ್ ಇಪಿಎಫ್‌ಒ ಮೆಂಬರ್ಸ್’ ನಡಿಯಿರುವ ‘ಲಿಂಕ್ ಯುಎಎನ್ ಆಧಾರ್’ ಕೊಂಡಿಯ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಯುಎಎನ್ ಅನ್ನು ದಾಖಲಿಸಿದರೆ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ದೃಢೀಕರಣದ ಬಳಿಕ ನಿಮ್ಮ ಆಧಾರ್ ವಿವರಗಳನ್ನು ಒದಗಿಸಿ. ಆಧಾರ್ ದೃಢೀಕರಣ ವಿಧಾನ(ಬಯೊಮೆಟ್ರಿಕ್ ಬಳಸಿ)ವನ್ನು ಆಯ್ಕೆ ಮಾಡಿಕೊಳ್ಳಿ. ನೋಂದಾಯಿತ ಸಾಧನವನ್ನು ಬಳಸಿದಾಗ ಅದು ಬಯೊಮೆಟ್ರಿಕ್‌ಗಳ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ. ಪರಿಶೀಲನೆಯ ಬಳಿಕ ಯುಎಎನ್ ಮತ್ತು ಆಧಾರ್ ವಿವರಗಳು ಹೋಲಿಕೆಯಾದರೆ ಅವೆರಡೂ ಪರಸ್ಪರ ಜೋಡಣೆ ಗೊಳ್ಳುತ್ತವೆ.

3) ಇಪಿಎಫ್‌ಒದ ಇ-ಕೆವೈಸಿ ಪೋರ್ಟಲ್‌ನಲ್ಲಿ ಒಟಿಪಿ ದೃಢೀಕರಣದ ಬಳಕೆ

https://iwu.epfindia.gov.in/eKYC/ ಗೆ ಭೇಟಿ ನೀಡಿ ‘ಫಾರ್ ಇಪಿಎಫ್‌ಒ ಮೆಂಬರ್ಸ್’ ನಡಿಯಿರುವ ‘ಲಿಂಕ್ ಯುಎಎನ್ ಆಧಾರ್’ ಕೊಂಡಿಯ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಯುಎಎನ್ ಅನ್ನು ದಾಖಲಿಸಿದರೆ ಯುಎಎನ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಒಟಿಪಿ ದೃಢೀಕರಣದ ಬಳಿಕ ನಿಮ್ಮ ಆಧಾರ್ ವಿವರಗಳನ್ನು ಒದಗಿಸಿ. ಈಗ ಆಧಾರ್ ದೃಢೀಕರಣ ವಿಧಾನ (ಮೊಬೈಲ್/ಇ-ಮೇಲ್ ಆಧಾರಿತ ಒಟಿಪಿ ಬಳಸಿ)ವನ್ನು ಆಯ್ಕೆ ಮಾಡಿಕೊಳ್ಳಿ. ಇಷ್ಟಾದ ಬಳಿಕ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್‌ಗೆ ಇನ್ನೊಂದು ಒಟಿಪಿ ಬರುತ್ತದೆ. ಪರಿಶೀಲನೆ ಬಳಿಕ ಆಧಾರ್ ಮತ್ತು ಯುಎಎನ್ ವಿವರಗಳು ತಾಳೆಯಾದರೆ ಅವೆರಡೂ ಪರಸ್ಪರ ಜೋಡಣೆಗೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News