ಮಾಲ್ದೀವ್ಸ್: ಅಂತಾರಾಷ್ಟ್ರೀಯ ವಕೀಲರ ಬಂಧನ, ಗಡಿಪಾರು

Update: 2018-02-28 17:41 GMT

ಕೊಲಂಬೊ, ಫೆ. 28: ಮಾಲ್ದೀವ್ಸ್‌ನಲ್ಲಿ ಹೇರಲಾಗಿರುವ ತುರ್ತು ಪರಿಸ್ಥಿತಿಯ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಲು ಅಲ್ಲಿಗೆ ತೆರಳಿದ್ದ ಅಂತಾರಾಷ್ಟ್ರೀಯ ವಕೀಲರ ಗುಂಪೊಂದನ್ನು ಅಲ್ಲಿನ ಪೊಲೀಸರು ಬಂಧಿಸಿ ಗಡಿಪಾರು ಮಾಡಿದ್ದಾರೆ ಎಂದು ಅವರ ಸಂಘಟನೆ ‘ಲಾ ಏಶ್ಯ’ ಹೇಳಿದೆ.

ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಎರಡು ದಿನಗಳ ಬಳಿಕ, ಅಲ್ಲಿನ ಸರಕಾರ ನೀಡಿರುವ ಆಹ್ವಾನದಂತೆ ನಾಲ್ವರು ಸದಸ್ಯರನ್ನು ಅಲ್ಲಿಗೆ ಕಳುಹಿಸಿರುವುದಾಗಿ ಪ್ರಾದೇಶಿಕ ವಕೀಲರ ಸಂಘಟನೆ ಲಾ ಏಶ್ಯ ಹೇಳಿದೆ.

ನಾಲ್ವರು ವಕೀಲರು ರವಿವಾರ ಮಾಲೆ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಂದಾಗ ಬಂಧಿಸಲಾಯಿತು ಹಾಗೂ ಬಳಿಕ ಅಲ್ಲಿಂದಲೇ ಅವರನ್ನು ಗಡಿಪಾರುಗೊಳಿಸಲಾಯಿತು ಎಂದು ‘ಲಾ ಏಶ್ಯ’ ತಿಳಿಸಿದೆ.

‘‘ಇಂಥ ಕೃತ್ಯದ ಮೂಲಕ, ಯಾವುದೇ ವ್ಯಕ್ತಿಗಳ ಪ್ರಾಯೋಜಕತ್ವ ಹೊಂದಿರದ ಸತ್ಯ ಶೋಧಕ ತಂಡವೊಂದರ ಸ್ವತಂತ್ರ ಹಾಗೂ ತಾರತಮ್ಯರಹಿತ ವಿಶ್ಲೇಷಣೆಯ ಲಾಭ ಹೊಂದುವ ಅವಕಾಶದಿಂದ ಮಾಲ್ದೀವ್ಸ್ ಸರಕಾರ ವಂಚಿತವಾಗಿದೆ’’ ಎಂದಿದೆ.

ತುರ್ತು ಪರಿಸ್ಥಿತಿಯಡಿಯಲ್ಲಿ ಮಾಲ್ದೀವ್ಸ್‌ನ ಪರಿಸ್ಥಿತಿಯನ್ನು ಅಂದಾಜಿಸಲು ಹಾಗೂ ಮಾಲೆಯಲ್ಲಿನ ಸುರಕ್ಷತೆ ಮತ್ತು ಭದ್ರತೆಗೆ ಸಾಕ್ಷಿಯಾಗಲು ಪ್ರತಿನಿಧಿಗಳನ್ನು ಕಳುಹಿಸಲು ಮಾಲ್ದೀವ್ಸ್ ಸರಕಾರ ಅಂತಾರಾಷ್ಟ್ರೀಯ ಸಂಘಟನೆಗಳಿಗೆ ಆಹ್ವಾನ ಕಳುಹಿಸಿರುವುದನ್ನು ಸ್ಮರಿಸಬಹುದಾಗಿದೆ.

ಜೈಲಿನಲ್ಲಿರುವ ಪ್ರತಿಪಕ್ಷಗಳ 9 ನಾಯಕರನ್ನು ಬಿಡುಗಡೆ ಮಾಡುವಂತೆ ಹಾಗೂ ಅಮಾನತುಗೊಂಡಿರುವ 12 ಸಂಸದರ ಸದಸ್ಯತ್ವ ಮರಳಿಸುವಂತೆ ಮಾಲ್ದೀವ್ಸ್ ಸುಪ್ರೀಂ ಕೋರ್ಟ್ ಈ ತಿಂಗಳ ಆದಿ ಭಾಗದಲ್ಲಿ ಸರಕಾರಕ್ಕೆ ಆದೇಶ ನೀಡಿದಂದಿನಿಂದ ಮಾಲ್ದೀವ್ಸ್‌ನಲ್ಲಿ ಅನಿಶ್ಚಿತತೆ ನೆಲೆಸಿದೆ.

ತೀರ್ಪನ್ನು ಪಾಲಿಸಲು ನಿರಾಕರಿಸಿದ ಅಧ್ಯಕ್ಷ ಯಮೀನ್ ಫೆಬ್ರವರಿ 5ರಂದು 15 ದಿನಗಳ ಕಾಲ ತುರ್ತು ಪರಿಸ್ಥಿತಿ ವಿಧಿಸಿದರು. ಬಳಿಕ, ಅದನ್ನು ಇನ್ನೂ ತಿಂಗಳಿಗೆ ವಿಸ್ತರಿಸಲಾಯಿತು.

ಆರೋಗ್ಯ ಸಚಿವೆ ರಾಜೀನಾಮೆ: ಬೆಂಬಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ

ಮಾಲ್ದೀವ್ಸ್ ಆರೋಗ್ಯ ಸಚಿವೆ ದುನ್ಯಾ ವೌಮೂನ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಬೆನ್ನಿಗೇ, ದೇಶವನ್ನು ರಾಜಕೀಯ ಬಿಕ್ಕಟ್ಟಿನಿಂದ ಪಾರು ಮಾಡಲು ದೇಶದ ಜನತೆಗೆ ಬೆಂಬಲ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಅಧ್ಯಕ್ಷ ಅಬ್ದುಲ್ಲಾ ಯಮೀನ್‌ರ ಸೊಸೆಯಾಗಿರುವ ದುನ್ಯಾ, ಮಾಜಿ ಅಧ್ಯಕ್ಷ ವೌಮೂನ್ ಅಬ್ದುಲ್ ಗಯೂಮ್‌ರ ಮಗಳಾಗಿದ್ದಾರೆ. ತನ್ನ ತಂದೆಯ ಬಂಧನದ ಬಳಿಕ ದುನ್ಯಾ ಭಾರೀ ಒತ್ತಡದಲ್ಲಿ ಸಿಲುಕಿದ್ದರು ಎನ್ನಲಾಗಿದೆ.

ತುರ್ತು ಪರಿಸ್ಥಿತಿ ಹೇರಿದ ಬೆನ್ನಿಗೇ ಪೊಲೀಸರು 3 ದಶಕಗಳ ಕಾಲ ದೇಶವನ್ನು ಆಳಿದ ವೌಮೂನ್ ಮತ್ತು ಅವರ ಸಹೋದರ ಅಹ್ಮದ್ ಫಾರಿಸ್ ವೌಮೂನ್‌ರನ್ನು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News