ಗಡಿಯಲ್ಲಿ ವಾಸಿಸುತ್ತಿದ್ದ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾ ಶಿಬಿರಗಳಿಗೆ

Update: 2018-02-28 17:53 GMT

ಡಾಕಾ, ಫೆ. 28: ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ ಗಡಿಯಲ್ಲಿರುವ ಸಣ್ಣ ಭೂಪ್ರದೇಶದಲ್ಲಿ ವಾಸಿಸುತ್ತಿರುವ ಸಾವಿರಾರು ರೊಹಿಂಗ್ಯಾ ನಿರಾಶ್ರಿತರಿಗೆ ಮ್ಯಾನ್ಮಾರ್‌ನಲ್ಲಿ ಪುನರ್ವಸತಿ ಕಲ್ಪಿಸುವ ಬಗ್ಗೆ ಚರ್ಚಿಸಲು ಉಭಯ ದೇಶಗಳು ಸಭೆ ನಡೆಸಿದ ಬಳಿಕ, ನಿರಾಶ್ರಿತರು ಅಲ್ಲಿಂದ ಪರಾರಿಯಾಗಿದ್ದಾರೆ.

ಮ್ಯಾನ್ಮಾರ್ ಗಡಿಬೇಲಿಯ ಹೊರಗೆ, ತೊರೆಯೊಂದರ ಮ್ಯಾನ್ಮಾರ್ ಬದಿಯಲ್ಲಿ, ಅಂದರೆ ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುತ್ತಿರುವ ಸುಮಾರು 5,300 ನಿರಾಶ್ರಿತರನ್ನು, ಅವರ ರಕ್ಷಣೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಬಲವಂತವಾಗಿ ವಾಪಸ್ ಕಳುಹಿಸಲಾಗುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಕಳೆದ ವರ್ಷದ ಆಗಸ್ಟ್ 25ರಂದು ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಹಿಂಸಾಚಾರ ಸ್ಫೋಟಿಸಿದ ಬಳಿಕ, ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವುದನ್ನು ಸ್ಮರಿಸಬಹುದಾಗಿದೆ.

ರಖೈನ್ ರಾಜ್ಯದಲ್ಲಿ ಸೇನೆಯು ರೊಹಿಂಗ್ಯಾ ಮುಸ್ಲಿಮರನ್ನು ಕೊಲ್ಲುತ್ತಿದೆ, ಅವರ ಮೇಲೆ ಅತ್ಯಾಚಾರ ಮಾಡುತ್ತಿದೆ ಹಾಗೂ ಅವರ ಮನೆಗಳಿಗೆ ಬೆಂಕಿ ಕೊಡುತ್ತಿದೆ ಎಂದು ಹೇಳಿರುವ ವಿಶ್ವಸಂಸ್ಥೆ, ಅಲ್ಲಿ ಜನಾಂಗೀಯ ನಿರ್ಮೂಲನ ನಡೆಯುತ್ತಿದೆ ಎಂದು ಆರೋಪಿಸಿದೆ.

ನಿರಾಶ್ರಿತರ ಪಲಾಯನ

ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಗಡಿಯಲ್ಲಿ ಯಾರಿಗೂ ಸೇರದ ಜಾಗದಲ್ಲಿ ವಾಸಿಸುತ್ತಿದ್ದವರ ಪೈಕಿ ಅರ್ಧದಷ್ಟು ಮಂದಿ ಒಂದೇ ವಾರದ ಅವಧಿಯಲ್ಲಿ ಬಾಂಗ್ಲಾದೇಶವನ್ನು ಪ್ರವೇಶಿಸಿ ಅಲ್ಲಿನ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಬಾಂಗ್ಲಾದೇಶ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘‘ಅವರು ಭೀತಿಯಿಂದಾಗಿ ಆ ಸ್ಥಳವನ್ನು ತೊರೆಯುತ್ತಿದ್ದಾರೆ. ಈಗ ಯಾರಿಗೂ ಸೇರದ ಜಾಗದಲ್ಲಿ 2,500-3000 ಮಂದಿಯಿದ್ದಾರೆ. ಅವರ ಪೈಕಿ ಕೆಲವರೊಂದಿಗೆ ಮಾತನಾಡಿ, ಹಿಂದಕ್ಕೆ ಹೋಗುವಂತೆ ಸೂಚಿಸಿದೆವು. ಹಾಗೆ ಹೋಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ’’ ಎಂದರು.

ಉಭಯ ದೇಶಗಳ ಅಧಿಕಾರಿಗಳು ಫೆಬ್ರವರಿ 20ರಂದು ಭೇಟಿಯಾಗಿದ್ದರು ಹಾಗೂ ನಿರಾಶ್ರಿತರು ವಾಸಿಸುವ ಸ್ಥಳಗಳಿಗೂ ಭೇಟಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News