ಇನ್ನು ಅಪರಾಧ ಎಸಗದಿದ್ದರೂ ತಿಹಾರ್ ಜೈಲುವಾಸದ 'ಅನುಭವ' ಪಡೆಯಬಹುದು !

Update: 2018-03-01 04:30 GMT

ಹೊಸದಿಲ್ಲಿ, ಮಾ.1: ದೇಶದ ಅತಿದೊಡ್ಡ ಜೈಲು ಎನಿಸಿದ ತಿಹಾರ್ ಜೈಲಿನ ಒಳಗಿನ ಬದುಕು ಹೇಗಿರುತ್ತದೆ ಎಂಬ ಕುತೂಹಲಕ್ಕೆ ಇಷ್ಟರಲ್ಲೇ ಉತ್ತರ ಸಿಗಲಿದೆ. ಇನ್ನು ಮುಂದೆ ಆಸಕ್ತರು ಜೈಲಿನ ಅನುಭವವನ್ನು ಸ್ವತಃ ಪಡೆಯುವ ವಿಶಿಷ್ಟ ಯೋಜನೆ ಜೈಲು ಪ್ರವಾಸೋದ್ಯಮದ ಅಂಗವಾಗಿ ರೂಪುಗೊಂಡಿದೆ.

ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಮತ್ತು ನೀರಜ್ ಭಾವನಾ, ಡಾನ್ ಆಗಿ ಬಳಿಕ ರಾಜಕೀಯಕ್ಕೆ ಬಂದ ಶಹಾಬುದ್ದೀನ್‌ನಂಥ ಹಲವು ಕುಖ್ಯಾತರಿಗೆ ’ಆಶ್ರಯ’ ನೀಡಿರುವ ಜೈಲು ಮುಂದಿನ ಕೆಲ ತಿಂಗಳಲ್ಲಿ ಅತಿಥಿಗಳಿಗೆ ಮುಕ್ತವಾಗಲಿದೆ.

ಈ ಕುರಿತ ಸಮಗ್ರ ಯೋಜನೆ ಸಿದ್ಧವಾಗಿದ್ದು, ಚಾಲನೆ ನೀಡುವ ದಿನಾಂಕ ಮತ್ತು ವೆಚ್ಚದ ವಿವರಗಳನ್ನು ಇಷ್ಟರಲ್ಲೇ ಅಂತಿಮಪಡಿಸಲಾಗುವುದು. 'ಫೀಲ್ ಲೈಕ್ ಜೈಲ್' ಎಂಬ ವಿಶಿಷ್ಟ ಯೋಜನೆ ಇದಾಗಿದ್ದು, ಈ ಅನುಭವ ಪಡೆಯಲು ಸಂದರ್ಶಕರು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಇವರಿಗೆ ಜೈಲು ಬಟ್ಟೆಯ ಒಂದು ಸೆಟ್ ನೀಡಿ, ಜೈಲಿನಲ್ಲಿರುವ ಇತರ ಕೈದಿಗಳ ಜತೆಗೆ ಕೆಲಸ ಮಾಡಲು ಅವಕಾಶ ನೀಡಲಾಗುತ್ತದೆ. ತೋಟಗಾರಿಕೆ, ಬಡಗಿ ಕೆಲಸವನ್ನೂ ಅತಿಥಿಗಳು ಕೈದಿಗಳ ಜತೆ ಸೇರಿ ಮಾಡಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಯೋಜನೆಯ ವಿವರ ನೀಡಿದ್ದಾರೆ.

ಕೈದಿಗಳೇ ತಯಾರಿಸಿದ ಆಹಾರವನ್ನು ಅತಿಥಿಗಳಿಗೆ ನೀಡಲಾಗುವುದು. ಸಂದರ್ಶಕರು ಮೊಬೈಲ್ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಒಯ್ಯುವಂತಿಲ್ಲ. ಜತೆಗೆ 400 ಎಕರೆ ವಿಶಾಲವಾದ ಜೈಲು ಸಂಕೀರ್ಣದಲ್ಲಿ ಭದ್ರತಾ ಕಾರಣಕ್ಕಾಗಿ ಕೈದಿಗಳ ಜತೆ ಸಂವಾದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ತೆಲಂಗಾಣ ಸರ್ಕಾರ ಈಗಾಗಲೇ ಇಂಥದ್ದೇ ಯೋಜನೆಯನ್ನು ಹೆರಿಟೇಜ್ ಜೈಲು ಹೆಸರಿನಲ್ಲಿ ಆರಂಭಿಸಿದೆ. 220 ವರ್ಷ ಹಳೆಯ ಜೈಲನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಿ, ಸಂದರ್ಶಕರಿಗೆ ಮುಕ್ತಗೊಳಿಸಿದೆ. ದಿನಕ್ಕೆ 500 ರೂಪಾಯಿ ಶುಲ್ಕ ವಿಧಿಸಿ ಈ ಸೌಲಭ್ಯವನ್ನು ಕಲ್ಪಿಸಿದೆ.

15,300 ಕೈದಿಗಳಿರುವ ಈ ಜೈಲು ಪಶ್ಚಿಮ ದಿಲ್ಲಿಯಲ್ಲಿದ್ದು, ದೇಶದಲ್ಲೇ ಅತ್ಯಂತ ದಟ್ಟಣೆಯ ಜೈಲು ಎನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News