×
Ad

ಮಧು ಮನೆಗೆ ಪಿಣರಾಯಿ ವಿಜಯನ್ ಭೇಟಿ

Update: 2018-03-02 20:57 IST

ಅಟ್ಟಪ್ಪಾಡಿ, ಮಾ.2: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆದಿವಾಸಿ ಜನರಿಗೆ ಸಾಕಷ್ಟು ಆಹಾರ, ಕುಡಿಯುವ ನೀರು ಹಾಗೂ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಆದಿವಾಸಿ ಜನರಿರುವ ಪ್ರದೇಶದಲ್ಲಿ ಸಮುದಾಯ ಅಡುಗೆ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದ್ದು ಇದಕ್ಕೆ 10 ಕೋಟಿ ರೂ. ತೆಗೆದಿರಿಸಲಾಗುವುದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಆದಿವಾಸಿ ಜನರಿಗೆ ಸೌಲಭ್ಯಗಳನ್ನು ಒದಗಿಸುವ ಕುರಿತು ಅಧಿಕಾರಿಗಳ ಜತೆ ಸಭೆ ನಡೆಸಿದ ಮುಖ್ಯಮಂತ್ರಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆದಿವಾಸಿ ಜನರಿಗೆ ಸಾಕಷ್ಟು ಆಹಾರ, ಕುಡಿಯುವ ನೀರು ಹಾಗೂ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕ್ರಮ ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ಬುಡಕಟ್ಟು, ಆದಿವಾಸಿ ಸಮುದಾಯದವರಿಗೆ ವರ್ಷದಲ್ಲಿ ಕನಿಷ್ಟ 200 ದಿನ ಉದ್ಯೋಗ ದೊರೆಯುವಂತೆ ಮಾಡಲು ಸರಕಾರ ನಿರ್ಧರಿಸಿದೆ. ಆದಿವಾಸಿ ಜನರು ಮದ್ಯಪಾನದ ಅಭ್ಯಾಸಕ್ಕೆ ಅಂಟಿಕೊಂಡಿರುವ ಕಾರಣ, ಈ ಪ್ರದೇಶಗಳಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲದೆ ಮದ್ಯಮುಕ್ತ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದರು. ವಿಶೇಷ ಚೇತನರ ಗಣತಿ ಕಾರ್ಯದ ಜೊತೆಗೆ ಮಾನಸಿಕ ಅಸ್ವಸ್ಥರ ಆರೈಕೆ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.

     ಆಹಾರ ಕದ್ದು ತಿಂದ ಆರೋಪದಲ್ಲಿ ಕಳೆದ ತಿಂಗಳು ಗುಂಪೊಂದು ನಡೆಸಿದ್ದ ಹಲ್ಲೆಯಿಂದ ಮೃತಪಟ್ಟಿದ್ದ ಆದಿವಾಸಿ ಯುವಕನ ಮನೆಗೆ ಪಿಣರಾಯಿ ವಿಜಯನ್ ಭೇಟಿ ನೀಡಿ, ಮೃತ ಯುವಕನ ತಾಯಿ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಮಧುವಿನ ಮನೆಗೆ ಭೇಟಿ ನೀಡಿ ಆತನ ತಾಯ, ಸೋದರಿ ಹಾಗೂ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದೇವೆ. ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದೆ. ಆಪಾದಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ದುರುದ್ದೇಶಪೂರಿತ ಸುದ್ದಿ ಪ್ರಸಾರ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರೂ ಭೇಟಿಯ ಸಂದರ್ಭ ಮುಖ್ಯಮಂತ್ರಿಯ ಜತೆಗಿದ್ದರು.

  ಮಾನಸಿಕ ಅಸ್ವಸ್ಥನಾಗಿರುವ ಮಧು ಎಂಬಾತನ ಮೇಲೆ ಹಲ್ಲೆ ನಡೆಸಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 16 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News