ಗಡಿಯಲ್ಲಿ ಮ್ಯಾನ್ಮಾರ್ ಸೇನೆ ಜಮಾವಣೆ: ಬಾಂಗ್ಲಾದಿಂದ ಪ್ರತಿಭಟನೆ

Update: 2018-03-02 17:19 GMT

ಢಾಕಾ, ಮಾ. 2: ಗಡಿ ಸಮೀಪ ಮ್ಯಾನ್ಮಾರ್ ಸೇನೆ ಜಮಾವಣೆಗೊಳ್ಳುತ್ತಿರುವುದನ್ನು ಪ್ರತಿಭಟಿಸುವುದಕ್ಕಾಗಿ ಬಾಂಗ್ಲಾದೇಶ ಗುರುವಾರ ಮ್ಯಾನ್ಮಾರ್ ರಾಯಭಾರಿಯನ್ನು ಕರೆಸಿಕೊಂಡಿತು ಎಂದು ಬಾಂಗ್ಲಾದೇಶ ವಿದೇಶ ಸಚಿವಾಲಯ ತಿಳಿಸಿದೆ.

 ಗಡಿಯ ತುಸು ಮ್ಯಾನ್ಮಾರ್ ಭಾಗದಲ್ಲಿ ಸಾವಿರಾರು ರೊಹಿಂಗ್ಯಾ ಮುಸ್ಲಿಮರು ಆಶ್ರಯ ಪಡೆಯುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಗುರುವಾರ 200ಕ್ಕಿಂತಲೂ ಅಧಿಕ ಸಶಸ್ತ್ರ ಮ್ಯಾನ್ಮಾರ್ ಸೈನಿಕರು ಮತ್ತು ಪೊಲೀಸರು ಗಡಿ ಬೇಲಿ ಸ್ಥಳಕ್ಕೆ ಬಂದು ಮೋರ್ಟರ್ ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ತಿರುಗಾಡುತ್ತಿದ್ದಾರೆ ಎಂದು ಬಾಂಗ್ಲಾದೇಶ ಸೇನೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸ್ಥಳದಿಂದ ತೆರಳುವಂತೆ ಸೈನಿಕರು ಧ್ವನಿವರ್ಧಕಗಳನ್ನು ಬಳಸಿ ತಮಗೆ ಸೂಚಿಸಿದ್ದಾರೆ ಎಂದು ಗಡಿಯಲ್ಲಿ ವಾಸಿಸುತ್ತಿರುವ ಸುಮಾರು 950 ರೊಹಿಂಗ್ಯಾ ಕುಟುಂಬಗಳ ಸಮುದಾಯ ನಾಯಕ ದಿಲ್ ಮುಹಮ್ಮದ್ ಹೇಳಿದ್ದಾರೆ.

ರೊಹಿಂಗ್ಯಾರನ್ನು ಬಾಂಗ್ಲಾ ಒಳಗೆ ತಳ್ಳುವ ಪ್ರಯತ್ನ

ಗಡಿಯಲ್ಲಿರುವವರನ್ನು ಹೆದರಿಸುವುದಕ್ಕಾಗಿಯೋ ಎಂಬಂತೆ ಗುರುವಾರ ಸಂಜೆ ಮ್ಯಾನ್ಮಾರ್ ಸೈನಿಕರು ಒಂದು ಸುತ್ತು ಗುಂಡು ಹಾರಿಸಿದರು, ಆದರೆ, ಯಾರೂ ಗಾಯಗೊಂಡಿಲ್ಲ ಎಂದು ಬಾಂಗ್ಲಾದೇಶದ ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.

‘‘ಬಾಂಗ್ಲಾದೇಶದೊಂದಿಗಿನ ಶೂನ್ಯ ರೇಖೆಗೆ ರೊಹಿಂಗ್ಯಾ ನಿರಾಶ್ರಿತರನ್ನು ತಳ್ಳುವ ಪ್ರಯತ್ನವನ್ನು ಮ್ಯಾನ್ಮಾರ್ ಸೈನಿಕರು ಮಾಡುತ್ತಿದ್ದಾರೆ ಎಂಬಂತೆ ಕಂಡುಬರುತ್ತಿದೆ’’ ಎಂದು ಮೇಜರ್ ಇಕ್ಬಾಲ್ ಅಹ್ಮದ್ ಹೇಳಿದರು.

ಉಗ್ರರ ಒಳ ನುಸುಳುವಿಕೆ ತಡೆಯಲು: ಮ್ಯಾನ್ಮಾರ್ ಸಮರ್ಥನೆ

ಗಡಿಯಲ್ಲಿ ಸೇನಾ ಜಮಾವಣೆಯನ್ನು ಸಮರ್ಥಿಸಿರುವ ಮ್ಯಾನ್ಮಾರ್, ಭಯೋತ್ಪಾದಕರ ಬೆದರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದೆ.

ರೊಹಿಂಗ್ಯಾ ಬಂಡುಕೋರರ ಚಲನವಲನಗಳ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮ್ಯಾನ್ಮಾರ್ ಸರಕಾರದ ವಕ್ತಾರ ಝಾವ್ ಹಟಯ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News