ತ್ರಿಪುರಾ: ಮುಖ್ಯಮಂತ್ರಿ ರೇಸ್ ನಲ್ಲಿ ಆರೆಸ್ಸೆಸ್ ಹಿನ್ನೆಲೆಯ ಬಿಪ್ಲಬ್ ಕುಮಾರ್

Update: 2018-03-03 09:02 GMT

ಹೊಸದಿಲ್ಲಿ, ಮಾ.3: ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಆಡಳಿತಕ್ಕೆ ಅಂತ್ಯ ಹಾಡಲು ಸಫಲವಾಗಿರುವ ಬಿಜೆಪಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ 48 ವರ್ಷದ ಬಿಪ್ಲಬ್ ಕುಮಾರ್ ದೇಬ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಹಾಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಬಿಪ್ಲಬ್ ಅವರು ಅಗರ್ತಲಾದ ಬನಮಲಿಪುರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಸಿಪಿಎಂ ಎದುರಾಳಿಗಿಂತ ಮುಂದಿದ್ದಾರೆ.

ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಆಡಳಿತಕ್ಕೆ ಹಾಗೂ ಕಳೆದ 20 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ಅವರ ಸರಕಾರಕ್ಕೆ ಅಂತ್ಯ ಹಾಡುವಲ್ಲಿ ಬಿಜೆಪಿ ಸಫಲವಾಗಿದೆ.

''ಬಿಪ್ಲಬ್ ಅವರು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಗಳಲ್ಲಿ ಪ್ರಮುಖರಾಗಿದ್ದಾರೆ, ನಮ್ಮ ಚುನಾವಣಾ ಪೂರ್ವ ಸಮೀಕ್ಷೆಗಳು ಅವರು ಸರ್ಕಾರ್ ಅವರಿಗಿಂತಲೂ ಹೆಚ್ಚು ಜನಪ್ರಿಯರಾಗಿದ್ದಾರೆಂದು ತಿಳಿಸುತ್ತವೆ'' ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ತ್ರಿಪುರಾದಲ್ಲಿ ಸಿಪಿಎಂ ಆಡಳಿತಕ್ಕೆ ಅಂತ್ಯ ಹಾಡಲು ಅವರು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಆರೆಸ್ಸೆಸ್ ಹಿನ್ನೆಲೆಯವರಾದ ಅವರು ಕಳಂಕರಹಿತ ವ್ಯಕ್ತಿತ್ವದವರು, ಎಂದು ಇನ್ನೊಬ್ಬ ಪಕ್ಷ ನಾಯಕ ವಿವರಿಸುತ್ತಾರೆ.

ಹಿಂದೆ ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಅವರು 15 ವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ರಾಜಧಾನಿ ದಿಲ್ಲಿಗೆ ಆಗಮಿಸಿದ್ದಾಗ ಅಲ್ಲಿ ಜಿಮ್ ಶಿಕ್ಷಕರಾಗಿಯೂ ಕಾರ್ಯನಿರ್ವಹಿಸಿದ್ದರು.

ತ್ರಿಪುರಾದ ಬಿಜೆಪಿ ಉಸ್ತುವಾರಿ ಸುನಿಲ್ ದಿಯೋಧರ್ ಅವರು ದೇಬ್ ಅವರನ್ನು ರಾಜಕೀಯವಾಗಿ ಪಕ್ವಗೊಳಿಸಿದ್ದರೆ ಹಿರಿಯ ನಾಯಕ ಕೆ.ಎನ್.ಗೋವಿಂದಾಚಾರ್ಯ ಸಂಘದಲ್ಲಿ ಅವರಿಗೆ ಮಾರ್ಗದರ್ಶಿಯಾಗಿದ್ದರು.

ಮಧ್ಯ ಪ್ರದೇಶದ ಸತ್ನಾದ ಬಿಜೆಪಿ ಸಂಸದ ಗಣೇಶ್ ಸಿಂಗ್ ಅವರ ಸಹಾಯಕನಾಗಿದ್ದ ದೇಬ್ 2016ರಲ್ಲಿ ತ್ರಿಪುರಾಕ್ಕೆ ತೆರಳಿದ್ದು, ನಂತರ ಅಲ್ಲಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಪತ್ನಿ ಎಸ್‌ಬಿಐ ನ ಪಾರ್ಲಿಮೆಂಟ್ ಹೌಸ್ ಶಾಖೆಯಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಅವರನ್ನು ತ್ರಿಪುರಾದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಚುನಾವಣೆಗಿಂತ ಮುಂಚಿತವಾಗಿಯೇ ಘೋಷಿಸುವ ಉದ್ದೇಶವಿತ್ತಾದರೂ ಪಕ್ಷದ ಅಧ್ಯಕ್ಷ ಅಮಿತ್ ಶಾ ಅದಕ್ಕೆ ಅವಕಾಶ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News