ಕೇರಳದಲ್ಲಿ ಕಡಿಮೆ ಮತದಾನ: ಸಿಪಿಎಂ ಚುನಾವಣಾ ಯಂತ್ರವನ್ನು ಹೈಜಾಕ್ ಮಾಡಿತ್ತು ಎಂದ ಕಾಂಗ್ರೆಸ್

Update: 2024-04-27 12:02 GMT

ತಿರುವನಂತಪುರ: ಕೇರಳದ 20 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಶುಕ್ರವಾರ ನಡೆದಿದ್ದು, ರಾಜ್ಯದಲ್ಲಿಯ ಆಡಳಿತಾರೂಢ ಸಿಪಿಎಂ ಮತದಾನದ ಶೇಕಡಾವಾರು ಪ್ರಮಾಣವನ್ನು ತಗ್ಗಿಸಲು ಮತದಾರರಿಗೆ ಕಿರುಕುಳ ನೀಡಿತ್ತು ಮತ್ತು ಚುನಾವಣಾ ಯಂತ್ರವನ್ನು ಹೈಜಾಕ್ ಮಾಡಿತ್ತು ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

2019ರ ಚುನಾವಣೆಗೆ ಹೋಲಿಸಿದರೆ ಈ ವರ್ಷ ಮತದಾನದ ಪ್ರಮಾಣ ಕಡಿಮೆಯಾಗಲು ಚುನಾವಣಾ ಯಂತ್ರವನ್ನು ಸಿಪಿಎಂ ಹೈಜಾಕ್ ಮಾಡಿದ್ದು ಒಂದು ಕಾರಣವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಆರೋಪಿಸಿದರು.

ಶುಕ್ರವಾರ ರಾತ್ರಿ ಎಂಟು ಗಂಟೆಗೆ ಮತದಾನದ ಪ್ರಮಾಣ ಶೇ.70.72ರಷ್ಟಿದ್ದು, 2019ರ ಶೇ.77.84ಕ್ಕೆ ಹೋಲಿಸಿದರೆ ಗಮನಾರ್ಹ ಇಳಿಕೆಯಾಗಿದೆ.

ರಾಜ್ಯದ ಶೇ.3ರಿಂದ ಶೇ.5ರಷ್ಟು ಮತಗಟ್ಟೆಗಳಲ್ಲಿ ಇವಿಎಮ್‌ಗಳಲ್ಲಿ ತಾಂತ್ರಿಕ ದೋಷದಿಂದಾಗಿ ಮತದಾನ ಪ್ರಕ್ರಿಯೆ ತೀರ ವಿಳಂಬಗೊಂಡಿತ್ತು ಮತ್ತು ಇದರಿಂದ ಉರಿಬಿಸಿಲಿನಲ್ಲಿ ಮತದಾರರು ತೊಂದರೆ ಅನುಭವಿಸುವಂತಾಗಿತ್ತು ಎಂದು ಹೇಳಿದ ವೇಣುಗೋಪಾಲ, ಇಂತಹ ಶೇ.90ರಷ್ಟು ತಾಂತ್ರಿಕ ದೋಷಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಬಲವಾಗಿದ್ದ ಮತಗಟ್ಟೆಗಳಲ್ಲಿ ಸಂಭವಿಸಿದ್ದವು ಎಂದು ಆರೋಪಿಸಿದರು.

ಆಡಳಿತಾರೂಢ ಪಕ್ಷದ ಇಂತಹ ಆರೋಪಿತ ನಡೆಗಳ ಹೊರತಾಗಿಯೂ ಯುಡಿಎಫ್ ಪರ ಅಲೆ ಮತ್ತು ಆಡಳಿತ ವಿರೋಧಿ ಭಾವನೆಯಿರುವುದರಿಂದ ಎಲ್‌ಡಿಎಫ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಕೇರಳದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಹೇಳಿದ ವೇಣುಗೋಪಾಲ, ಕಾಂಗ್ರೆಸ್ ರಾಜ್ಯದಲ್ಲಿ ನಡೆದ ಮತದಾನ ಪ್ರಕ್ರಿಯೆಯನ್ನು ವಿಶ್ಲೇಷಿಸಲಿದೆ ಮತ್ತು ಫಲಿತಾಂಶದ ಆಧಾರದಲ್ಲಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News