ಎಸ್‌ಎಸ್‌ಸಿ ಅಭ್ಯರ್ಥಿಗಳನ್ನು ಭೇಟಿಯಾದ ಅಣ್ಣಾ ಹಜಾರೆ
ಹೊಸದಿಲ್ಲಿ, ಮಾ. 4: ಭ್ರಷ್ಟಾಚಾರ ವಿರೋಧಿ ಚಳವಳಿಯ ನಾಯಕ ಅಣ್ಣಾ ಹಜಾರೆ ಸಂಯುಕ್ತ ಪದವಿ ಮಟ್ಟದ ಪರೀಕ್ಷೆಯ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಸ್ಟಾಫ್ ಸೆಲಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಆಕಾಂಕ್ಷಿಗಳನ್ನು ರವಿವಾರ ಭೇಟಿಯಾದರು. ಈ ವಿಷಯದ ಕುರಿತು ಸಿಬಿಐ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಅಹಿಂಸಾ ಪಥದಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಹಝಾರೆ ಪ್ರತಿಭಟನಕಾರರಿಗೆ ಸೂಚಿಸಿದರು ಹಾಗೂ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿದರು. ಅನ್ಯಾಯ ಹಾಗೂ ಕಿರುಕುಳ ವಿರೋಧಿಸಿರುವ ಅವರು ಅಹಿಂಸಾ ಪಥದಲ್ಲಿ ಸಾಗುವುದು ತುಂಬಾ ಮುಖ್ಯವಾದುದು. ಇದು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸುತ್ತದೆ ಎಂದರು.
ಸರಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಕಾಯಲಿದ್ದೇವೆ. ಅನಂತರ ಏನು ಮಾಡಬೇಕು ಎಂಬುದನ್ನು ಪರಿಶೀಲಿಸಲಿದ್ದೇವೆ. ಈ ನಡುವೆ ಹಿಂಸೆಯ ದಾರಿ ಹಿಡಿಯದಂತೆ ನಾನು ನಿಮ್ಮೆಲ್ಲರನ್ನು ಆಗ್ರಹಿಸುತ್ತೇನೆ ಎಂದರು. ಸಾಮೂಹಿಕ ನಕಲು ಮಾಡಲಾಗಿದೆ ಎಂದು ಆರೋಪಿಸಿ ಅಸಂಖ್ಯಾತ ವಿದ್ಯಾರ್ಥಿಗಳು ಫೆಬ್ರವರಿ 27ರಿಂದ ಹೊಸದಿಲ್ಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದ ಫೆಬ್ರವರಿ 21ರಂದು ನಡೆಯಬೇಕಿದ್ದ ಪರೀಕ್ಷೆ ವಿಳಂಬವಾಯಿತು ಎಂದು ಫೆಬ್ರವರಿ 24ರಂದು ಎಸ್‌ಎಸ್‌ಸಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿದೆ. ಈ ಪರೀಕ್ಷೆಯನ್ನು ಮತ್ತೆ ಮಾರ್ಚ್ 9ರಂದು ಮರು ಆಯೋಜಿಸಲಾಗಿದೆ.