ಅನಿರೀಕ್ಷಿತವಲ್ಲದ ತ್ರಿಪುರಾ ಫಲಿತಾಂಶ

Update: 2018-03-05 04:04 GMT

ಈಶಾನ್ಯ ರಾಜ್ಯಗಳ ಫಲಿತಾಂಶಗಳು ಹೊರ ಬಿದ್ದಿವೆ. ಮೇಘಾಲಯ ಅತಂತ್ರವಾಗಿದೆ. ಕಾಂಗ್ರೆಸ್ ಸರಕಾರ ರಚಿಸಲು ಆಸಕ್ತಿ ತೋರಿಸಿದೆ. ನಾಗಾಲ್ಯಾಂಡ್‌ನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರ ಹೂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ತ್ರಿಪುರಾದಲ್ಲಿ ಬಿಜೆಪಿ ಮಿತ್ರ ಪಕ್ಷ ಗೆದ್ದಿದೆ. ವಿಪರ್ಯಾಸವೆಂದರೆ ಈಶಾನ್ಯ ರಾಜ್ಯಗಳ ಗೆಲುವನ್ನು ಬಿಜೆಪಿ ತನ್ನ ಬಗಲಿಗೆ ಹಾಕಿಕೊಳ್ಳಲು ಯತ್ನಿಸುತ್ತಿದೆ. ಈಶಾನ್ಯ ಭಾಗದಲ್ಲಿ ಒಟ್ಟು ಬಿಜೆಪಿ ಅಭ್ಯರ್ಥಿಗಳು ಗೆದ್ದ ಸ್ಥಾನಗಳೆಷ್ಟು ಎನ್ನುವುದು ಲೆಕ್ಕ ಹಾಕಿದಾಗ ಇದು ಸ್ಥಳೀಯ ರಾಜಕೀಯ ತಿಕ್ಕಾಟಗಳ ನಡುವಿನಿಂದ ಹೊರಹೊಮ್ಮಿದ ಫಲಿತಾಂಶ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ತ್ರಿಪುರಾದಲ್ಲಿ ಬಿಜೆಪಿ ಸಾಧನೆಯನ್ನು ಯಾವ ರೀತಿಯಲ್ಲೂ ಅಲ್ಲಗಳೆಯುವಂತಿಲ್ಲ. 2013ರಲ್ಲಿ ಒಂದೇ ಒಂದು ಸ್ಥಾನವನ್ನೂ ಹೊಂದಿರದ ಬಿಜೆಪಿ 2018ರಲ್ಲಿ 42 ಸ್ಥಾನಗಳನ್ನು ತನ್ನದಾಗಿಸುತ್ತದೆ ಎಂದರೆ ಅದನ್ನು ನಿರ್ಲಕ್ಷಿಸಲು ಸಾಧ್ಯವೆ?.

ಮಾಣಿಕ್ ಸರ್ಕಾರ್ ನೇತೃತ್ವದ ಸರಕಾರಕ್ಕಾದ ಸೋಲು ಎಡಪಂಥೀಯರನ್ನು ಮತ್ತು ಕೆಲವು ಪ್ರಗತಿಪರ ವರ್ಗವನ್ನು ತೀರಾ ನಿರಾಶೆಗೆ ತಳ್ಳಿದೆ. ಈ ನಿರಾಶೆಗೆ ಮುಖ್ಯ ಕಾರಣ ತ್ರಿಪುರಾದಲ್ಲಿ ಎಡ ಪಕ್ಷ ಸೋಲು ಕಂಡಿತು ಎನ್ನುವುದಲ್ಲ. ಬದಲಿಗೆ, ದೇಶಾದ್ಯಂತ ನರೇಂದ್ರ ಮೋದಿ ಸರಕಾರ ಜನವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಹೊತ್ತಿನಲ್ಲಿ, ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್‌ರಂತಹ ಸಜ್ಜನ ನಾಯಕನ ಸೋಲು ದೇಶವನ್ನು ಇನ್ನಷ್ಟು ಅಪಾಯದೆಡೆಗೆ ಕೊಂಡೊಯ್ಯಬಹುದು ಎನ್ನುವ ಕಾರಣಕ್ಕಾಗಿ ಸುಮಾರು 25 ವರ್ಷಗಳ ಕಾಲ ಎಡಪಂಥೀಯರ ಆಳ್ವಿಕೆಯಲ್ಲಿ ತ್ರಿಪುರಾದ ಮತದಾರರು ಅತಿ ಹೆಚ್ಚು ಸುಶಿಕ್ಷಿತ ಮತದಾರರಾಗಿ ಮಾರ್ಪಾಡಾಗಿರಬಹುದು ಎಂದು ದೇಶ ಭಾವಿಸಿತ್ತು. ತ್ರಿಪುರಾ ಸರಕಾರದ ಆಡಳಿತ ಯಶಸ್ವಿಯಾಗಿದೆಯೋ ಇಲ್ಲವೋ, ಆದರೆ ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ ನೇತೃತ್ವದ ಸರಕಾರಕ್ಕೆ ಪರ್ಯಾಯವಾಗಿ ಆಯ್ಕೆ ಮಾಡಬಹುದಾದ ಪಕ್ಷವಾಗಿ ಬಿಜೆಪಿ ಗುರುತಿಸಿಕೊಂಡಿಲ್ಲ. ಹೀಗಿರುವಾಗ ಅನಿರೀಕ್ಷಿತವಾಗಿ ತ್ರಿಪುರಾದ ಜನರು ಬಿಜೆಪಿಯನ್ನು ಗೆಲ್ಲಿಸಿರುವುದು ಮೋದಿಯ ಬೆನ್ನಿಗಿರುವ ಕಾರ್ಪೊರೇಟ್ ವಲಯಗಳನ್ನು ಇನ್ನಷ್ಟು ಕ್ರೂರಿಗಳನ್ನಾಗಿ ಪರಿವರ್ತಿಸಬಹುದು. ಹಾಗೆಯೇ ಈಗಾಗಲೇ ಬೇರೆ ಬೇರೆ ಸಾಮಾಜಿಕ ಕಾರಣಗಳಿಂದ ಬೆಂಕಿ ಕುಲುಮೆಯಾಗಿರುವ ಈಶಾನ್ಯ ಭಾರತದಲ್ಲಿ ಸಂಘಪರಿವಾರವೂ ವಿಜೃಂಭಿಸತೊಡಗಿದರೆ ಇನ್ನಷ್ಟು ಅಪಾಯಗಳಿಗೆ ದೇಶ ಮುಖಾಮುಖಿಯಾಗಬೇಕಾಗಬಹುದು. ಇದು ದೇಶದ ಪ್ರಜ್ಞಾವಂತರ ಆತಂಕವಾಗಿದೆ.

ಆದರೆ ಇದಕ್ಕಾಗಿ ಎಡಪಕ್ಷಗಳ ಕೆಲವು ನಾಯಕರು ಮತದಾರರನ್ನು ಸಾರಸಗಟಾಗಿ ದೂಷಿಸುವುದು ಸೋಲನ್ನು ಸ್ವೀಕರಿಸುವ ಕ್ರಮ ಅಲ್ಲವೇ ಅಲ್ಲ. ಎಡಪಂಥೀಯ ಸರಕಾರವನ್ನು ಸೋಲಿಸಿರುವ ಇದೇ ಮತದಾರರು ಎಡರಂಗಕ್ಕೆ ಸುಮಾರು 25 ವರ್ಷಗಳ ಕಾಲ ಆಳುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಆ ನಾಯಕರು ಮರೆಯಬಾರದು. ಸಾಧಾರಣವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಂದು ಪಕ್ಷಕ್ಕೆ 25 ವರ್ಷ ಆಳ್ವಿಕೆಗೆ ಅವಕಾಶ ನೀಡುವುದು ಬಹುದೊಡ್ಡ ಕೊಡುಗೆ. ಇದೇ ಸಂದರ್ಭದಲ್ಲಿ ಒಂದು ಪಕ್ಷದಿಂದ 25 ವರ್ಷ ಆಳಿಸಿ ಕೊಂಡ ಜನರು ಬದಲಾವಣೆಗಳನ್ನು ಬಯಸುವುದು ಸಹಜ. ಇರುವ ಸರಕಾರ ಒಳ್ಳ್ಳೆಯ ಆಳ್ವಿಕೆಯನ್ನೇ ನೀಡಿದ್ದರೂ, ಇನ್ನಷ್ಟು ಒಳ್ಳೆಯದನ್ನು ಜನರು ನಿರೀಕ್ಷೆ ಮಾಡಬಾರದು ಎಂದಿಲ್ಲ. ತ್ರಿಪುರಾ ಇಂತಹದೊಂದು ತಿರುವಿನಲ್ಲಿ ನಿಂತಿತ್ತು. ಆ ಸಂದರ್ಭವನ್ನು ತನಗೆ ಪೂರಕವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಆದರೆ ಬಿಜೆಪಿ ಗೆಲ್ಲುವುದಕ್ಕಾಗಿ ಆರಿಸಿಕೊಂಡ ದಾರಿ ಮತ್ತೆ ಪ್ರಶ್ನಾರ್ಹವಾಗಿದೆ. ತ್ರಿಪುರಾದ ಪ್ರತ್ಯೇಕತಾವಾದಿಗಳ ಜೊತೆಗೆ ಯಾವ ಸಂಕೋಚವೂ ಇಲ್ಲದೆ ಬಿಜೆಪಿ ಕೈ ಜೋಡಿಸಿದೆ.

ಈ 25 ವರ್ಷಗಳ ಕಾಲ ಪ್ರತ್ಯೇಕತಾವಾದಿಗಳನ್ನು ಚಿಗುರದಂತೆ ನೋಡಿಕೊಳ್ಳುವಲ್ಲಿ ಎಡರಂಗ ಯಶಸ್ವಿಯಾಗಿತ್ತು. ಹಾಗೆಯೇ ತ್ರಿಪುರಾದ ದಲಿತರು ಮತ್ತು ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಎಲ್ಲೂ ಬಲಿಕೊಡದೆ ರಾಜಕೀಯ ನಡೆಸುತ್ತಾ ಬಂದಿದೆ. ತ್ರಿಪುರಾದ ಬಲಾಢ್ಯ ಬುಡಕಟ್ಟು ಸಮುದಾಯದ ಒಂದು ಗುಂಪು ಪ್ರತ್ಯೇಕತಾವಾದವನ್ನು ಎತ್ತಿ ಹಿಡಿದು ಚಳವಳಿ ನಡೆಸುತ್ತಿದ್ದಾಗ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಭಾವನಾತ್ಮಕ ರಾಜಕೀಯವನ್ನು ಹೊರತು ಪಡಿಸಿ ಬೇರೆ ಯಾವುದೇ ರಾಜಕೀಯ ಗೊತ್ತಿಲ್ಲದ ಬಿಜೆಪಿ, ತೀವ್ರವಾದವನ್ನು ಪ್ರತಿಪಾದಿಸುವ ಬುಡಕಟ್ಟು ಸಂಘಟನೆಗಳ ಜೊತೆಗಿನ ಮೈತ್ರಿಯ ಮೂಲಕವೇ ಮಾಣಿಕ್ ಸರ್ಕಾರ್‌ನ್ನು ಎದುರಿಸಲು ಮುಂದಾಯಿತು. ಸುಮಾರು 25 ವರ್ಷಗಳ ಕಾಲ ಸಮಾನತೆ, ಅಭಿವೃದ್ಧಿ ಇತ್ಯಾದಿಗಳನ್ನು ಕೇಳಿ ಬೋರು ಹೊಡೆದಿದ್ದ ಜನರಿಗೆ ಈ ಬಾರಿ ಬಿಜೆಪಿಯ ಭಾವನಾತ್ಮಕ ಭಾಷೆ ಇಷ್ಟವಾಗಿರಬೇಕು. ಹಾಗೆಯೇ ಬುಡಕಟ್ಟು ಸಂಘಟನೆಗಳ ರೋಚಕ ಭಾಷಣಗಳೂ ಜನರನ್ನು ಬಿಜೆಪಿಯ ಕಡೆಗೆ ಹೊರಳುವಂತೆ ಮಾಡಿತು.

ಇವರೆಲ್ಲರ ಬೆನ್ನಿಗೆ ಕಾರ್ಪೊರೇಟ್ ವಲಯ ಬಲವಾಗಿ ನಿಂತಿತ್ತು. ಬೃಹತ್ ಉದ್ಯಮಿಗಳ ಕಣ್ಣು ಈಶಾನ್ಯ ಭಾರತದತ್ತ ಬಿದ್ದಿದೆ. ಇಲ್ಲಿಯ ಬೃಹತ್ ಪ್ರಾಕೃತಿಕ ಸಂಪತ್ತು, ಅದಿರುಗಳು, ಸಂಪದ್ಭರಿತ ಭೂಮಿಯ ಮೇಲೆ ಉದ್ಯಮಿಗಳ ಕಣ್ಣು ಬಿದ್ದಿರುವುದು ಇಂದು ನಿನ್ನೆಯಲ್ಲ. ಆದರೆ ಈ ಭಾಗದಲ್ಲಿ ವ್ಯಾಪಕವಾಗಿ ಹರಡಿರುವ ನಕ್ಸಲೀಯರು ಅವರ ದಾರಿಗೆ ಬಹುದೊಡ್ಡ ತಡೆಯಾಗಿದ್ದರು. ಇದೇ ಸಂದರ್ಭದಲ್ಲಿ ತ್ರಿಪುರಾದ ಎಡರಂಗ ಸರಕಾರವೂ ಈ ದಾರಿಯಲ್ಲಿ ಅವರಿಗೆ ಮುಳ್ಳಾಗಿತ್ತು. ಆದುದರಿಂದಲೇ ಒಂದೆಡೆ ತೀವ್ರವಾದಿಗಳು, ಮಗದೊಂದೆಡೆ ಬಿಜೆಪಿಯ ಭಾವನಾತ್ಮಕ ರಾಜಕೀಯ ಹಾಗೂ ಕಾರ್ಪೊರೇಟ್ ಜನಗಳ ಪ್ರಭಾವ ಒಟ್ಟು ಸೇರಿ ಎಡರಂಗವನ್ನು ಮಣ್ಣು ಮುಕ್ಕಿಸಿತು. ತ್ರಿಪುರಾಕ್ಕೆ ಸಂಬಂಧಪಟ್ಟಂತೆ ಎಡರಂಗಕ್ಕೆ ಕೆಲವು ಧರ್ಮಸಂಕಟಗಳಿದ್ದವು. ಬಹುಶಃ ಪ್ರಬಲ ಬುಡಕಟ್ಟು ಸಮುದಾಯವನ್ನು ಓಲೈಸಿದ್ದಿದ್ದರೆ ಎಡರಂಗ ಈ ಚುನಾವಣೆಯನ್ನು ತನ್ನದಾಗಿಸಬಹುದಾಗಿತ್ತು. ಆದರೆ ದಲಿತರು ಮತ್ತು ಅಲ್ಪಸಂಖ್ಯಾತರು ಎಡರಂಗದ ಸಾಂಪ್ರದಾಯಿಕ ಬೆಂಬಲಿಗರು. ಎರಡು ದೋಣಿಯಲ್ಲಿ ಪ್ರಯಾಣಿಸುವುದು ಸಾಧ್ಯವಿರಲಿಲ್ಲ.

ಬುಡಕಟ್ಟು ತೀವ್ರವಾದಿ ಸಂಘಟನೆಗಳು ಈ ಬಾರಿ ಚುನಾವಣೆಯಲ್ಲಿ ಹೊರಗಿನವರು(ದಲಿತರು, ಮುಸ್ಲಿಮರು), ಮೂಲನಿವಾಸಿಗಳು ಎಂದು ಒಡೆದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕೂಡ ದಲಿತರು ಮತ್ತು ಅಲ್ಪಸಂಖ್ಯಾತರನ್ನು ನೆಚ್ಚಿಕೊಂಡಿತ್ತು. ಅತ್ಯಂತ ವಿಷಾದನೀಯ ಸಂಗತಿಯೆಂದರೆ 2013ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳಾಗಿದ್ದವರೇ ಈ ಬಾರಿ ಬಿಜೆಪಿಯಲ್ಲಿ ಸ್ಪರ್ಧಿಸಿದ್ದರು. ಒಂದು ರೀತಿಯಲ್ಲಿ ಹಾಲಿ ಬಿಜೆಪಿ ಮತ್ತು ಮಾಜಿ ಕಾಂಗ್ರೆಸ್ ಜೊತೆಯಾಗಿ ನಿಂತು ಎಡರಂಗವನ್ನು ಸೋಲಿಸಿತು ಎನ್ನಬಹುದು. ಒಟ್ಟಿನಲ್ಲಿ ಒಂದು ಸೋಲು ಒಂದು ಪಕ್ಷದ ಅವಸಾನವೆಂದು ತಿಳಿದುಕೊಂಡರೆ ಅದನ್ನು ರಾಜಕೀಯ ಅಪ್ರಬುದ್ಧತೆ ಎಂದು ಕರೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಸೋಲು ದೇಶಾದ್ಯಂತ ಎಡರಂಗವೂ ಸೇರಿದಂತೆ ಜಾತ್ಯತೀತ ಶಕ್ತಿಗಳು ಜನವಿರೋಧಿ ಪಕ್ಷಗಳ ವಿರುದ್ಧ ಒಂದಾಗುವುದಕ್ಕೆ ನಿಮಿತ್ತವಾಗಬೇಕು.

ಮುಂದಿನ ಎಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯುವ ಎಡರಂಗದ ಮಹಾಧಿವೇಶನದಲ್ಲಿ ಈ ಸೋಲು ತನ್ನ ಪರಿಣಾಮವನ್ನು ಖಂಡಿತವಾಗಿಯೂ ಬೀರಲಿದೆ. ತನ್ನೆಲ್ಲ ಮೇಲರಿಮೆಗಳನ್ನು, ಜಿಗುಟು ಸಿದ್ಧಾಂತಗಳನ್ನು ಪಕ್ಕಕ್ಕಿಟ್ಟು ಮೈಕೊಡವಿ ತನ್ನ ರಾಜಕೀಯ ದಾರಿಯನ್ನು ಹೊಸದಾಗಿ ಗುರುತಿಸಿಕೊಳ್ಳಲು ಎಡರಂಗಕ್ಕೆ ಇದು ಸುಸಮಯವಾಗಿದೆ. ಯೆಚೂರಿ ಮತ್ತು ಕಾರಟ್ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲೂ ಈ ಸೋಲು ತನ್ನದೇ ಆದ ರೀತಿಯಲ್ಲಿ ನೆರವಾಗಬಹುದು. ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ತೃತೀಯ ಶಕ್ತಿಯೊಂದು ಸಶಕ್ತವಾಗಿ ರೂಪುಗೊಳ್ಳಬೇಕಾದರೆ ಎಡರಂಗಗಳು ಆತ್ಮವಿಮರ್ಶೆ ಮಾಡಿಕೊಳ್ಳಲೇ ಬೇಕು. ತ್ರಿಪುರಾ ಸೋಲು ಈ ಕಾರಣದಿಂದ ಎರಡರಂಗಕ್ಕೆ ದೊರಕಿರುವ ಒಂದು ಅಮೂಲ್ಯ ಅವಕಾಶವೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News