×
Ad

ಬಿಹಾರ: ಪ್ರೀತಿಸಿ ಮದುವೆಯಾದ ‘ತಪ್ಪಿಗೆ’ ನವದಂಪತಿಗೆ ಉಗುಳು ನೆಕ್ಕುವ ಶಿಕ್ಷೆ

Update: 2018-03-06 23:38 IST

ಪಾಟ್ನ, ಮಾ.6: ಪ್ರೀತಿಸಿ ಮದುವೆಯಾದ ‘ತಪ್ಪಿಗೆ’ ನವದಂಪತಿ ನೆಲಕ್ಕೆ ಉಗುಳಿ ಅದನ್ನು ತಮ್ಮ ನಾಲಿಗೆಯಿಂದ ನೆಕ್ಕಲು ಬಲವಂತಪಡಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.

ಮರೌನ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಹಾರ ಗ್ರಾಮದ ನಿವಾಸಿಗಳಾದ ಸಂಜೀತ್ ಕುಮಾರ್ ಹಾಗೂ ಜೂಲಿ ಕುಮಾರಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಸಂಪ್ರದಾಯಸ್ಥ ಸಮಾಜದಿಂದ ಇವರ ಪ್ರೀತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇವರ ಲವ್‌ಸ್ಟೋರಿ ಬಹಿರಂಗಗೊಂಡ ಬಳಿಕ ಗ್ರಾಮದ ಕೆಲವು ಜನರು ಇವರ ಮೇಲೊಂದು ಕಣ್ಣಿಟ್ಟಿದ್ದರು. ಒಂದು ದಿನ ಈ ಜೋಡಿ ಗ್ರಾಮದಿಂದ ಓಡಿಹೋಗಿ ಪಾಟ್ನದ ಕೆಲವು ಸ್ನೇಹಿತರ ನೆರವಿನಿಂದ ವಿವಾಹವಾಗಿದ್ದಾರೆ. ವರನ ಮನೆಯವರು ಮದುವೆಯನ್ನು ಒಪ್ಪಿಕೊಂಡರೂ ಪಂಚಾಯತ್ ಮುಖಂಡರಿಗೆ ಈ ಮದುವೆ ಒಪ್ಪಿಗೆಯಾಗಿಲ್ಲ. ಕಳೆದ ವಾರ ಇಡೀ ಗ್ರಾಮಸ್ಥರನ್ನು ಸೇರಿಸಿ ಸಭೆ ನಡೆಸಲಾಗಿದೆ.

  ಸಭೆಯಲ್ಲಿ ಮಾತಾಡುವುದೇ ಬೇಡ . ಕ್ಷಮೆ ಕೇಳಿಬಿಡಿ ಎಂದು ಸಂಜೀತ್ ಕುಮಾರನ ಕುಟುಂಬದವರು ನವದಂಪತಿಗೆ ತಿಳಿಸಿದ್ದರು. ಅದರಂತೆ ಇವರು ನಡೆದುಕೊಂಡರೂ ಪಂಚಾಯತಿ ನಡೆಸಿದವರು ನವದಂಪತಿಯನ್ನು ನಿಂದಿಸಿದರು. ಅವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದರು. ಅಷ್ಟಕ್ಕೇ ಸುಮ್ಮನಾಗದೆ ನೆಲದ ಮೇಲೆ ಬಿದ್ದಿದ್ದ ತಮ್ಮದೇ ಉಗುಳನ್ನು ನೆಕ್ಕಲು ಬಲವಂತಪಡಿಸಿದರು ಎಂದು ಮದುಮಗಳು ಜೂಲಿ ಕುಮಾರಿ ತಿಳಿಸಿದ್ದಾಳೆ.

ರಾಜ್ಯ ಸರಕಾರದ ವರದಕ್ಷಿಣೆ ವಿರೋಧಿ ಅಭಿಯಾನದಿಂದ ಸ್ಫೂರ್ತಿ ಪಡೆದು ತಾವು ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದೆವು. ಆದರೆ ತಮ್ಮದೇ ಗ್ರಾಮದ ಹಿರಿಯರಿಂದ ಇಂತಹ ಅವಮಾನಕರ ಶಿಕ್ಷೆ ಸಿಗಬಹುದು ಎಂದು ಕನಸಿನಲ್ಲೂ ಊಹಿಸಿಲ್ಲ ಎಂದು ದಂಪತಿ ತಿಳಿಸಿದ್ದಾರೆ. ಘಟನೆಯ ಮಾಹಿತಿ ದೊರೆತ ತಕ್ಷಣ ಎಫ್‌ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ . ಜೆಡಿ(ಯು) ಸ್ಥಳೀಯ ಮುಖಂಡ ಅಮರ್‌ದಿಯೊ ಕಾಮಟ್ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News