ರಾಷ್ಟ್ರಪತಿಗೆ ಸ್ವಾಗತ ಆದರೆ ‘ಸಂಘಿ’ ಧೋರಣೆಗಲ್ಲ: ಅಲಿಘರ್ ವಿದ್ಯಾರ್ಥಿ ಯೂನಿಯನ್ ನಾಯಕ

Update: 2018-03-07 06:44 GMT

ಅಲಿಘರ್, ಮಾ.7: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ 65ನೇ ಘಟಿಕೋತ್ಸವಕ್ಕೆ ಇಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿದ್ಯಾರ್ಥಿ ಯೂನಿಯನ್ ಕಾರ್ಯದರ್ಶಿ ಮುಹಮ್ಮದ್ ಫಹಾದ್ ಹೇಳಿಕೆಯೊಂದನ್ನು ನೀಡಿ ರಾಷ್ಟ್ರಪತಿಯ ಭೇಟಿಯ ಸಂದರ್ಭ ಆರೆಸ್ಸೆಸ್ಸಿನ ಯಾವುದೇ ಸದಸ್ಯ ಅಲ್ಲಿ ಹಾಜರಿರಬಾರದೆಂದು ಎಚ್ಚರಿಸಿದ್ದಾರೆ.

ಸುದ್ದಿಗಾರರೊಡನೆ ಮಾತನಾಡಿದ ಫಹಾದ್, ತಾವು ರಾಷ್ಟ್ರಪತಿಯ ಆಗಮನವನ್ನು ವಿರೋಧಿಸುವುದಿಲ್ಲ, ಆದರೆ ಸಂಘಿಗಳ ಧೋರಣೆಯನ್ನು ವಿರೋಧೀಸುವುದಾಗಿ ತಿಳಿಸಿದ್ದಾರೆ.

‘‘ಮುಸ್ಲಿಮರು ಮತ್ತು ಕ್ರೈಸ್ತರು ಈ ದೇಶಕ್ಕೆ ಪರಕೀಯರು’’ ಎಂದು ರಾಮನಾಥ್ ಕೋವಿಂದ್ 2010ರಲ್ಲಿ ನೀಡಿದ್ದ ಹೇಳಿಕೆಯೊಂದನ್ನು ಉಲ್ಲೇಖಿಸಿದ ಅವರು, ಈ ಮಾತು ಈಗಲೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಮನಸ್ಸನ್ನು ಚುಚ್ಚುತ್ತಿದೆ ಎಂದಿದ್ದಾರೆ.

‘‘ರಾಷ್ಟ್ರಪತಿಯಾಗಿ ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ ಯಾವುದೇ ಆರೆಸ್ಸೆಸ್ ವ್ಯಕ್ತಿಯನ್ನು ಅವರ ಜತೆ ವಿವಿ ಆವರಣದೊಳಗೆ ಅನುಮತಿಸಬಾರದು. ಶಿಷ್ಟಾಚಾರದಂತೆ ಅವರ ಜತೆ ಬರುವವರು ಬರಬಹುದು’’ ಎಂದು ಫಹಾದ್ ಹೇಳಿದ್ದಾರೆ.

ಈ ಬಗ್ಗೆ ಫಹಾದ್ ಅವರು ವಿವಿ ಆಡಳಿತಕ್ಕೂ ಪತ್ರ ಬರೆದಿದ್ದು, ಬೇರೆ ಯಾರಾದರೂ ಆರೆಸ್ಸೆಸ್ಸಿನವರು ಬಂದರೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ರಾಷ್ಟ್ರಪತಿಯ ಭೇಟಿಯ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ವ್ಯಾಪಕ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News