ದಲಿತ ಯುವಕನ ಸುಟ್ಟು ಕರಕಲಾದ ಮೃತದೇಹ ಪತ್ತೆ
Update: 2018-03-07 23:33 IST
ಜೈಪುರ, ಮಾ. 7: ದಲಿತ ಯುವಕ ನೀರಜ್ ಜಾಟವ್ ಹತ್ಯೆಗೊಳಗಾದ ಮೂರು ದಿನಗಳ ಬಳಿಕ ಆತನ ಗೆಳೆಯನ ಸುಟ್ಟು ಕರಕಲಾದ ಮೃತದೇಹ ಫೂಲ್‌ಬಾಗ್ ಪೊಲೀಸ್ ಠಾಣೆ ಪ್ರದೇಶದ ಯುಐಟಿ ಪ್ಲಾಟ್ ಸಮೀಪ ಮಂಗಳವಾರ ಪತ್ತೆಯಾಗಿದೆ.
ಮೃತಪಟ್ಟ ಯುವಕನನ್ನು ಅಜಯ್ ಜಾಟವ್ (18) ಎಂದು ಗುರುತಿಸಲಾಗಿದೆ. ನಗ್ನ, ಅರೆಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಹೋಳಿ ಸಂದರ್ಭದ ವಿವಾದಕ್ಕೆ ಸಂಬಂಧಿಸಿ ಹತ್ಯೆಗೀಡಾದ 16 ವರ್ಷದ ನೀರಜ್ ಜಾಟವ್‌ನ ಹತ್ಯೆಗೂ ಅಜಯ್ ಹತ್ಯೆಗೂ ಸಂಬಂಧ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಪಾವಧಿಯಲ್ಲಿ ಇಬ್ಬರು ದಲಿತರಾದ ಅಜಯ್ ಹಾಗೂ ನೀರಜ್‌ರ ಹತ್ಯೆಯಾಗಿರುವುದು ಇಲ್ಲಿನ ಜನರಲ್ಲಿ ಆತಂಕ ಉಂಟು ಮಾಡಿದೆ. ಭೀವಾಡಿಯಲ್ಲಿ ಮಾರ್ಚ್ 3ರಂದು ಸಂಭವಿಸಿದ ಘರ್ಷಣೆಗೆ ಸಂಬಂಧಿಸಿ ಅಪರಿಚಿತ ದುಷ್ಕರ್ಮಿಗಳು ಅಜಯ್‌ನನ್ನು ಬೆಂಕಿ ಹಚ್ಚಿ ಕೊಂದಿದ್ದಾರೆ ಎಂದು ಅಜಯ್‌ನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.