ಭಾರತದ ಆಸ್ಪತ್ರೆಗಳಲ್ಲಿ ಹೆರಿಗೆ ಮಹಿಳೆಯರ ಪಾಲಿಗೆ ಯಾಕೆ ದುಸ್ವಪ್ನವಾಗಿದೆ?

Update: 2018-03-07 18:51 GMT

ಭಾರತದಲ್ಲಿ ಪ್ರತೀ ಒಂದು ಲಕ್ಷ ಹೆರಿಗೆಯಲ್ಲಿ 167 ಮಹಿಳೆಯರು ಸಾವನ್ನಪ್ಪುತ್ತಾರೆ. ಇದು ಸಮರ್ಥನೀಯ ಅಭಿವೃದ್ಧಿ ಗುರಿ (ಎಸ್ಡಿಜಿ) ಯ ಎರಡು ಪಟ್ಟು ಹೆಚ್ಚಾಗಿದೆ. ಈ ಪ್ರಮಾಣವನ್ನು ಕಡಿಮೆ ಮಾಡಲು ಸರಕಾರವು ಸಾಂಸ್ಥಿಕ ಹೆರಿಗೆಗೆ ಅನುಕೂಲ ಮಾಡುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ರೂಪಿಸುತ್ತದೆ. ಆದರೆ ಈ ಸೌಲಭ್ಯಗಳನ್ನು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿಲ್ಲ. ಹಾಗಾಗಿ ಹೆರಿಗೆ ವೇಳೆ ಅಸುನೀಗುವ ಮಹಿಳೆಯರ ಸಂಖ್ಯೆಯಲ್ಲೂ ಇಳಿಕೆಯಾಗಿಲ್ಲ. ಇದರ ಬಗ್ಗೆ ಮತ್ತಷ್ಟು ಪರಿಶೀಲನೆ ನಡೆಸಿದಾಗ ಭಾರತೀಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಖಾಸಗಿ ಕ್ಷೇತ್ರಗಳ ಸೇವೆಯನ್ನು ಪಡೆಯಲು ಸಾಧ್ಯವಾಗದ ಜನರಿಗೆ ಗುಣಮಟ್ಟದ ಆರೋಗ್ಯಸೇವೆಯನ್ನು ಒದಗಿಸಲು ಸಾಧ್ಯವಾಗಿಲ್ಲ ಎಂಬ ಅಂಶವು ಸ್ಪಷ್ಟವಾಗುತ್ತದೆ.

ಈ ಸೇವೆಗಳ ಒದಗುವಿಕೆಯೂ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಈ ಸೇವೆಗಳು ಒದಗಿದರೂ ಅದು ಕಳಪೆ ಗುಣಮಟ್ಟದ್ದಾಗಿರುವುದರಿಂದ ಜನರು ಮುಂದೆ ಅದನ್ನು ಉಪಯೋಗಿಸಲು ಹಿಂಜರಿಯುವಂತಾಗಿದೆ. ಇದನ್ನೇ ನಾವು ಸಾಂಸ್ಥಿಕ ಹೆರಿಗೆಯ ಸಮಯದಲ್ಲಿ ನೋಡುತ್ತೇವೆ. ಈ ಸಂಸ್ಥೆಗಳಲ್ಲಿ ಆರೋಗ್ಯಸೇವೆ ವೃತ್ತಿಪರರು ನೀಡುವ ಸೇವೆ ಕಳಪೆ ದರ್ಜೆಯ, ಕೆಲವೊಂದು ಬಾರಿ ಬಹುತೇಕ ಅಮಾನವೀಯ ರೀತಿಯಿಂದ ಕೂಡಿರುತ್ತದೆ. ಇಲ್ಲಿ ಮಹಿಳೆಯರು ಬೈಗುಳಗಳನ್ನು ಕೇಳಬೇಕಾಗುತ್ತದೆ, ಅಸಮಾನತೆಯನ್ನು ಸಹಿಸಬೇಕಾಗುತ್ತದೆ. ಹಾಸಿಗೆಯ ಕೊರತೆಯಿಂದಾಗಿ ಆಸ್ಪತ್ರೆಯ ನೆಲದ ಮೇಲೆ ಮಗುವನ್ನು ಹೆರುವ ಪರಿಸ್ಥಿತಿಯೂ ಎದುರಾಗುತ್ತದೆ. ದೀರ್ಘ ಪ್ರಸವ ವೇದನೆಯ ಸಮಯದಲ್ಲಿ ನೋವು ನಿವಾರಕಗಳನ್ನು ನೀಡಲಾಗುವುದಿಲ್ಲ ಮತ್ತು ಗರ್ಭಿಣಿಯರ ಅಥವಾ ಅವರ ಕುಟುಂಬದ ಅನುಮತಿ ಪಡೆಯದೆಯೇ ಶಸ್ತ್ರಚಿಕಿತ್ಸೆ ಮುಂತಾದುವುಗಳನ್ನು ನಡೆಸಲಾಗುತ್ತದೆ. ಹೆರಿಗೆ ಕೋಣೆಯಲ್ಲಿ ಗರ್ಭಿಣಿಯ ಮೇಲೆ ನಡೆಯುವ ಹಿಂಸಾಚಾರವನ್ನು ಒಟ್ಟಾಗಿ ಪ್ರಸೂತಿ ಹಿಂಸಾಚಾರ ಎಂದು ಕರೆಯಲಾಗುತ್ತದೆ.
ಸದ್ಯ ಇರುವ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಸಾಹಿತ್ಯಗಳಿಂದ ಪ್ರಸೂತಿ ಹಿಂಸಾಚಾರದ ಎರಡು ಅಂಶಗಳನ್ನು ಖಚಿತಪಡಿಸಿಕೊಳ್ಳಬಹುದು. ಇದು ಅತ್ಯಂತ ಹೊಸ ಶಬ್ದವಾಗಿದೆ, ಇದನ್ನು ಮೊತ್ತಮೊದಲ ಬಾರಿ 2007ರಲ್ಲಿ ವೆನೆಝುವೆಲದಲ್ಲಿ ಕಾನೂನು ದಾಖಲೆಗಳಲ್ಲಿ ಬಳಸಲಾಯಿತು. ಅಮಾನುಷ ರೀತಿಯಲ್ಲಿ ಹೆರಿಗೆ ಮಾಡುವ ಕುರಿತು ಮೊದಲಿಗೆ 1993ರಲ್ಲಿ ಬ್ರೆಝಿಲ್‌ನಲ್ಲಿ ಚರ್ಚೆ ನಡೆಸಲಾಯಿತು. ಆದರೆ ಅದು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಿತಿಗಳ ಮಧ್ಯೆ ಚರ್ಚೆಗೆ ಬಂದಿದ್ದು 2000ದ ಮಧ್ಯಭಾಗದಲ್ಲಿ. ಎರಡನೆಯದಾಗಿ, ಆರೋಗ್ಯ ಸೇವೆಯಲ್ಲಿ ಹೆರಿಗೆಯಲ್ಲಿ ಸಮಯದಲ್ಲಿ ಒಂದು ಹಂತದ ಅಗೌರವ ಮತ್ತು ಅವಮಾನಗಳು ದಶಕಗಳಿಂದಲೂ ನಡೆಯುತ್ತಿರುವುದನ್ನು ಜಾಗತಿಕ ಮತ್ತು ರಾಷ್ಟ್ರೀಯವಾಗಿ ನಡೆಸಲ್ಪಟ್ಟ ಅದ್ಯಯನಗಳು ದಾಖಲಿಸಿವೆ.
ಹದಿನೈದು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಇದ್ದ ಒಂದು ನಂಬಿಕೆಯನ್ನೇ ಉದಾಹರಿಸುವುದಾದರೆ, ನೋವು ಹೆಚ್ಚಿದ್ದರೆ ಮಾತ್ರ ಮಗು ಜನಿಸುತ್ತದೆ ಎಂದು ಇಲ್ಲಿನ ಮಹಿಳೆಯರು ಭಾವಿಸಿದ್ದರು. 1990ರ ದಶಕದಲ್ಲಿ ತಮಿಳುನಾಡಿನ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆರಿಗೆ ನೋವಿಗೆ ನೀಡುವ ಔಷಧಿಗಳನ್ನು ಸೇವಿಸುವುದು ಎಷ್ಟು ಸಲೀಸಾಗಿತ್ತೆಂದರೆ ಗರ್ಭಿಣಿಯರು ನೋವು ನಿವಾರಕಗಳನ್ನು ಕೇಳುತ್ತಲೇ ಇರಲಿಲ್ಲ. ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವ ಮಹಿಳೆಯರ ಮೇಲಿನ ಹಿಂಸಾಚಾರದಲ್ಲಿ ಪ್ರಸೂತಿ ಹಿಂಸಾಚಾರ ಕೂಡಾ ಸೇರಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ವಿವಿಧ ರೀತಿಯಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪರಿಣಾಮ ಭಾರತದಲ್ಲಿ ಮಹಿಳೆಯರ ಆರೋಗ್ಯ ಕ್ಷೀಣಿಸಿ ಅವರು ಆರೋಗ್ಯಯುತ ಜೀನ ನಡೆಸಲು ಸಾಧ್ಯವಾಗದಂತಾಗಿದೆ.
ಹಲ್ಲೆ, ವಿಷವುಣಿಕೆ ಹಾಗೂ ಸುಡುವುದು ಹೀಗೆ ವಿವಿಧ ರೀತಿಯಲ್ಲಿ ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ಹಿಂಸೆ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದರೆ ಈ ಹಿಂಸಾಚಾರಗಳು ಮನೆಯ ವಿಷಯಗಳು ಮನೆಯೊಳಗೆಯೇ ಉಳಿಯಬೇಕು ಎಂಬ ನೆಪದಲ್ಲಿ ಮನೆಯೊಳಗೆಯೇ ದಫನ ಮಾಡಲಾಗುತ್ತದೆ. ಹೆಣ್ಮಕ್ಕಳ ಮೇಲೆ ನಡೆಯುವ ಹಿಂಸಾಚಾರವು ಪ್ರತೀ ಮಗುವಿನ ಸುರಕ್ಷಿತ ಮತ್ತು ಆರೋಗ್ಯ ಜೀವನದ ಹಕ್ಕನ್ನು ನಿರ್ಲಕ್ಷಿಸುವ ಸಮುದಾಯದಿಂದ ನಡೆಯುವ ಪಕ್ಷಪಾತವಾಗಿದೆ. ಪ್ರಸೂತಿ ಹಿಂಸಾಚಾರವನ್ನೂ ಇದೇ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಯಾಕೆಂದರೆ ಹೆರಿಗೆ ಎಂಬುದು ಒಂದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಮಹಿಳೆಯು ಪಡೆಯುವ ಚಿಕಿತ್ಸೆ ಮತ್ತು ಆರೈಕೆಯ ೆುೀಲೆ ಪ್ರತಿಫಲವು ಅವಲಂಬಿತವಾಗಿದೆ.
ಜಾಗತಿಕ ದೃಷ್ಟಿಯಿಂದ ಈ ವಿಷಯದ ಮೇಲೆ ಬಹಳಷ್ಟು ಸಂಶೋಧನೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಹೆರಿಗೆ ಕೋಣೆಯಲ್ಲಿ ನಡೆಯುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎಂಟು ಅಧ್ಯಯನಗಳನ್ನು ನಡೆಸಲಾಗಿದೆ. ಜಗತ್ತಿನಾದ್ಯಂತ ನಡೆಸಲಾದ ಅಧ್ಯಯನಗಳು ಬಹುತೇಕ ಕೇವಲ ಗುಣಾತ್ಮಕ ವಿಧಾನಗಳ ಬಗ್ಗೆ ಪ್ರಸ್ತಾಪಿಸುತ್ತವೆ, ಆದರೆ ಕಠಿಣ, ಆಧಾರ ಸಹಿತ ಸಾಕ್ಷಿಗಳನ್ನು ನೀಡುವುದಿಲ್ಲ. ಈ ಅಧ್ಯಯನಗಳು ಮಹಿಳೆಯರು ಎದುರಿಸುವ ಅವಮಾನ ಮತ್ತು ಅಗೌರವಗಳನ್ನೂ ಕ್ಷುಲ್ಲಕಗೊಳಿಸಲು ಪ್ರಯತ್ನಿಸುತ್ತವೆ. ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡಲಾದ ಪರಿಶೀಲನೆಯು ಆರೋಗ್ಯ ಸಂಸ್ಥೆಗಳಲ್ಲಿ ಮಹಿಳೆಯರು ಪ್ರಸವದ ವೇಳೆ ಎದುರಿಸುವ ಅವಮಾನಗಳ ವಿಧಾನಗಳನ್ನು ಸರಿಯಾಗಿ ವರ್ಗೀಕರಿಸುತ್ತದೆ ಮತ್ತು ಬೆಳಕಿಗೆ ತರುತ್ತದೆ. ಆದರೆ ನಿಯಮಗಳು, ಯೋಜನೆಗಳು, ಸೌಕರ್ಯ ಮತ್ತು ಮುಖ್ಯವಾಗಿ ಸಾಂಸ್ಕೃತಿಕ ಭಿನ್ನತೆಯ ಕಾರಣದಿಂದ ಇವುಗಳಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ಇರುವುದು ಬಹಳ ಕಡಿಮೆ.


 ಉದಾಹರಣೆಗೆ, ಗರ್ಭಿಣಿಯ ಸಮೀಪ ಪತಿ ಅಥವಾ ಕುಟುಂಬದ ಇತರ ಸದಸ್ಯರು ಉಪಸ್ಥಿತರಿರುವುದರಿಂದ ಹೆರಿಗೆಯ ಸಮಯದಲ್ಲಿ ಬಹಳ ಅನುಕೂಲವಾಗುತ್ತದೆ ಮತ್ತು ಹೆರಿಗೆಯು ಸಲೀಸಾಗಿ ನಡೆಯುತ್ತದೆ ಎಂದು ಜಾಗತಿಕವಾಗಿ ನಡೆಸಿರುವ ಹಲವು ಅಧ್ಯಯನಗಳು ತಿಳಿಸಿವೆ. ಹೆರಿಗೆ ಸಮಯದಲ್ಲಿ ಜೊತೆಗಾರನನ್ನು ನಿರಾಕರಿಸುವುದು ಮಹಿಳೆಯ ಜೊತೆ ಅನುಚಿತ ವರ್ತನೆ ತೋರಿದ್ದಕ್ಕೆ ಸಮವಾಗಿದೆ. ಆದರೆ ಭಾರತದಂಥ ದೇಶದಲ್ಲಿ ಸರಕಾರಿ ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆಯ ಸಮಯದಲ್ಲಿ ಜೊತೆಗಾರನನ್ನು ಒದಗಿಸುವುದು ಅಸಾಧ್ಯವಾದ ಮಾತು. ತಮಿಳುನಾಡಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆ ಜೊತೆಗಾರ ಪರಿಕಲ್ಪನೆಯನ್ನು ಪರಿಚಯಿಸಲಾಗಿದ್ದರೂ ಇತರ ರಾಜ್ಯಗಳಲ್ಲಿ ಇದು ಸಾಧ್ಯವಾಗಿಲ್ಲ. ಅದಕ್ಕೆ ಮುಖ್ಯ ಕಾರಣ ಮೂಲಸೌಲಭ್ಯದ ಕೊರತೆ. ಪ್ರಸೂತಿ ತಜ್ಞ, ಆಸ್ಪತ್ರೆಯ ವೈದ್ಯ ಮತ್ತು ದಾದಿ ಯರಿಂದ ತುಂಬಿರುವ ಹೆರಿಗೆ ಕೋಣೆಯಲ್ಲಿ ಜೊತೆಗಾರ ನಿಲ್ಲಲು ಸ್ಥಳವೇ ಇರುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಅಪಾಯಕಾರಿ ಸೂಕ್ಷ್ಮಾಣುಗಳಿಂದ ತಾಯಿ ಹಾಗೂ ನವಜಾತ ಶಿಶುವಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಜೊತೆಗಾರ ಸೌಲಭ್ಯವನ್ನು ನೀಡಲು ನಿರಾಕರಿಸಲಾಗುತ್ತದೆ. ಹಾಗಾಗಿ ಭಾರತದಲ್ಲಿ ಈ ಸೌಲಭ್ಯದ ನಿರಾಕರಣೆಯು ಹಕ್ಕಿನ ಉಲ್ಲಂಘನೆಯೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ.
ಪ್ರಸೂತಿ ಹಿಂಸಾಚಾರದಲ್ಲಿನ ಮತ್ತೊಂದು ಕರಾಳ ಅಂಶವೆಂದರೆ ಆಕ್ರಮಣಕಾರಿ ಪ್ರಕ್ರಿಯೆಗಳು. ಭಾರತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಿಝೇರಿಯನ್ ನಡೆಸುವುದನ್ನು ಹಣ ಮಾಡುವ ಮತ್ತು ಹೆರಿಗೆ ಮಾಡಿಸುವ ಸುಲಭ ವಿಧಾನ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬಹುತೇಕರಿಗೆ ತಿಳಿದಿರದಿರುವುದು ಏನೆಂದರೆ, ಹೆರಿಗೆ ಮಾಡಿಸಲು ಎಪಿಸಿಯೊಟಿಮ್ ಎಂಬ ಪ್ರಕ್ರಿಯೆಯನ್ನು ಅವ್ಯಾಹತವಾಗಿ ಬಳಸಲಾಗುತ್ತದೆ. ಈ ಕ್ರಿಯೆಯಲ್ಲಿ ಸ್ತ್ರೀಯರ ಜನನಾಂಗದ ಕುಳಿ ಮತ್ತು ಗುದದ್ವಾರದ ಮಧ್ಯೆ ಛೇದನ ಮಾಡಿ ಮಗು ಹೊರಬರಲು ಸ್ಥಳಾವಕಾಶ ಹೆಚ್ಚಾಗುವಂತೆ ಮಾಡಲಾಗುತ್ತದೆ.
ವೈಜ್ಞಾನಿಕವಾಗಿ ಈ ಕ್ರಿಯೆಗೆ ವಿರೋಧ ವ್ಯಕ್ತವಾಗಿದ್ದರೂ ಈಗಲೂ ಬಹುದೊಡ್ಡ ಪ್ರಮಾಣದಲ್ಲಿ ಈ ಕ್ರಿಯೆಯನ್ನು ನಡೆಸಲಾಗುತ್ತಿದೆ. ಸಂಪನ್ಮೂಲಗಳು ಕಡಿಮೆ ಇರುವ ಆಸ್ಪತ್ರೆಗಳಲ್ಲಿ ಮಗು ಜನನದ ವೇಳೆ ನಡೆಸುವ ಶಸ್ತ್ರಚಿಕಿತ್ಸೆಗಿಂತ ಮೊದಲೇ ಈ ರೀತಿ ಛೇದನ ನಡೆಸಿ ಮಗುವನ್ನು ಹೊರತೆಗೆದರೆ ಆಸ್ಪತ್ರೆಯು ಮುಂದೆ ಸಮಸ್ಯೆಯನ್ನು ಎದುರಿಸಬೇಕಾಗಿ ಬರುವುದಿಲ್ಲ. ಹಾಗಾಗಿ ಹೆಚ್ಚಿನ ಆಸ್ಪತ್ರೆಗಳು ಎಪಿಸಿಯೊಟಿಮ್ ಪದ್ಧತಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿವೆ. ಕೆಲವು ಆಸ್ಪತ್ರೆಗಳಲ್ಲಂತೂ ಸಹಜ ಹೆರಿಗೆಯಾಗುವ ಪ್ರತಿಯೊಂದು ಮಹಿಳೆಯ ಮೇಲೂ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತೆ.
ಈ ಶಸ್ತ್ರಚಿಕಿತ್ಸೆಯ ಬಗ್ಗೆ ಮಹಿಳೆ ಅಥವಾ ಆಕೆಯ ಕುಟುಂಬಸ್ಥರಿಗೆ ವಿವರಿಸುವ ಅಥವಾ ಅವರ ಸಮ್ಮತಿ ಪಡೆಯುವ ಗೋಜಿಗೂ ಈ ಆಸ್ಪತ್ರೆಗಳು ಹೋಗುವುದಿಲ್ಲ. ಕೆಲವೊಮ್ಮೆ ಈ ಕ್ರಿಯೆಯನ್ನು ಸಮಯ ಉಳಿಸುವ ಸಲುವಾಗಿ ಅಥವಾ ಅನಸ್ತೇಶಿಯ ತಜ್ಞರು ಇಲ್ಲದಿರುವ ಕಾರಣ ಅರಿವಳಿಕೆ ನೀಡದೆಯೇ ಮಾಡಲಾಗುತ್ತದೆ.

ಜಾತಿ, ವರ್ಗ ಮತ್ತು ವೈದ್ಯಕೀಯ ಸ್ಥಿತಿಯ ಆಧಾರದಲ್ಲೂ ದೈಹಿಕ ಮತ್ತು ವೌಖಿಕ ದೌರ್ಜನ್ಯ ಮತ್ತು ಅಸಮಾನತೆಯನ್ನು ವಿಭಾಗೀಕರಿಸಿರುವುದನ್ನೂ ಅಲ್ಲಗಳೆಯುವಂತಿಲ್ಲ. ಪ್ರಸೂತಿ ಹಿಂಸಾಚಾರಕ್ಕೆ ಒಳಗಾಗುವ ಬಹುತೇಕ ಮಹಿಳೆಯರು ಹಿಂದುಳಿದ ಸಾಮಾಜಿಕ-ಆರ್ಥಿಕ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ. ಅವರು ಹೆರಿಗೆಗಾಗಿ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನೇ ಅವಲಂಬಿಸಬೇಕಾಗುತ್ತದೆ ಮತ್ತು ಅಲ್ಲಿ ನಡೆಯುವ ಇಂಥ ಘಟನೆಗಳ ಬಗ್ಗೆ ತಿಳಿದಿರುತ್ತಾರೆ. ಆದರೆ ಇದನ್ನು ಅವರು ಸಹಜವೆಂದೇ ಭಾವಿಸಿರುತ್ತಾರೆ. ಆದರೆ ಈ ಸಹಜತೆಯು ಸ್ವೀಕಾರಾರ್ಹವಲ್ಲದ ವಾಸ್ತವವಾಗಿದ್ದು ಅದನ್ನು ನಿಯಂತ್ರಿಸುವ ಅಗತ್ಯವಿದೆ. ನೋವು ನಿವಾರಕಗಳನ್ನು ಕೇಳಿದರು ಎಂದ ಮಾತ್ರಕ್ಕೆ ರೋಗಿಯನ್ನು ಮಾತುಗಳ ಮೂಲಕ ಅವಮಾನ ಮಾಡುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿದೆ. ಎಚ್‌ಐವಿ ಮತ್ತು ಹೆಪಟೈಟಿಸ್ ಬಿ ರೋಗಗಳಿಗೆ ತುತ್ತಾಗಿರುವ ಮಹಿಳೆಯರೂ ಕೂಡಾ ಸಮಾನ ಚಿಕಿತ್ಸೆಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಗರ್ಭಿಣಿಯರ ವಿರುದ್ಧದ ಎಲ್ಲ ದುರ್ನಡತೆಗಳಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿಸಬೇಕು ಮತ್ತು ಹೆರಿಗೆಗೆ ಆಗಮಿಸುವ ಮಹಿಳೆಯರನ್ನು ಸ್ವಾಯತ್ತ ವ್ಯಕ್ತಿಗಳೆಂದು ಪರಿಗಣಿಸಬೇಕು. ಅಂತಿಮವಾಗಿ ಹೇಳುವುದೇನೆಂದರೆ, ಮಹಿಳೆಯರು ತಮ್ಮ ದೇಹದ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಮತ್ತು ಅವರ ದೇಹದ ಮೇಲೆ ನಡೆಯುವ ಪ್ರತಿಯೊಂದು ಕ್ರಿಯೆಯ ಬಗ್ಗೆ ಮಾಹಿತಿ ಪಡೆಯುವ ಮತ್ತು ಅದನ್ನು ನಿರಾಕರಿಸುವ ಹಕ್ಕನ್ನು ಅವರು ಹೊಂದಿದ್ದಾರೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಕೃಪೆ: thewire.in

Writer - ಸುರಭಿ ಶ್ರೀವಾಸ್ತವ

contributor

Editor - ಸುರಭಿ ಶ್ರೀವಾಸ್ತವ

contributor

Similar News

ಜಗದಗಲ
ಜಗ ದಗಲ