×
Ad

ಲೈಂಗಿಕ ಶೋಷಣೆ : ಭಾರತೀಯ ಮಹಿಳಾ ಕ್ರೀಡಾಪಟುಗಳು ಎಷ್ಟು ಸುರಕ್ಷಿತರು?

Update: 2018-03-08 00:21 IST

ಅಮೆರಿಕದ ಜಿಮ್ನಾಸ್ಟ್‌ಗಳೆಂದರೆ ಆ ದೇಶಕ್ಕೆ ಒಲಿಂಪಿಕ್ಸ್ ಪದಕಗಳನ್ನು ಗೆದ್ದು ತರುವ ಯಂತ್ರಗಳೆಂದೇ ಪ್ರಸಿದ್ಧಿ. ಆದರೆ ಕ್ರೀಡೆಯಲ್ಲಿ ಅಮೆರಿಕಕ್ಕೆ ಪ್ರತಿಷ್ಠೆಯನ್ನು ತಂದುಕೊಟ್ಟ ಜಿಮ್ನಾಸ್ಟಿಕ್ ಲೋಕದಲ್ಲಿ ತಲ್ಲಣವೇ ಉಂಟಾಯಿತು. ಅದಕ್ಕೆ ಕಾರಣ ಜಿಮ್ನಾಸ್ಟ್ ಗಳ ಅಧಿಕೃತ ಮಾಜಿ ವೈದ್ಯ ಲ್ಯಾರಿ ನಸ್ಸರ್. ನಸ್ಸರ್ ಕಳೆದ ಒಂದು ದಶಕದಲ್ಲಿ 150ಕ್ಕೂ ಅಧಿಕ ಮಹಿಳಾ ಜಿಮ್ನಾಸ್ಟ್‌ಗಳನ್ನು ಲೈಂಗಿಕವಾಗಿ ಶೋಷಣೆಗೊಳಪಡಿಸಿದ್ದಾನೆ ಎಂಬ ಆಘಾತಕಾರಿ ಅಂಶವು ಬೆಳಕಿಗೆ ಬಂದ ಸಂದರ್ಭದಲ್ಲಿ ಅಮೆರಿಕದ ಕ್ರೀಡಾಲೋಕವೇ ಒಂದರೆಕ್ಷಣ ಮಂಪರು ಬಡಿದಂತಾಗಿತ್ತು.

ಜನವರಿ 19ರಂದು ನಸ್ಸರ್‌ಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದ ಸಂದರ್ಭದಲ್ಲಿ ಹೇಳಿಕೆ ನೀಡಿದ ಮೂರು ಬಾರಿಯ ಒಲಿಂಪಿಕ್ಸ್ ಚಿನ್ನ ವಿಜೇತೆ ಮತ್ತು ಯುಎಸ್ ಮಹಿಳಾ ಜಿಮ್ನಾಸ್ಟಿಕ್ ತಂಡದ ನಾಯಕಿ ಆ್ಯಲಿ ರೈಸ್ಮನ್, ಈ ಪ್ರಕರಣ ಕ್ರೀಡೆಯ ಇತಿಹಾಸದಲ್ಲೇ ಲೈಂಗಿಕ ಶೋಷಣೆಯ ಅತ್ಯಂತ ಕೆಟ್ಟ ಪಿಡುಗಾಗಿದೆ ಎಂದು ವ್ಯಾಖ್ಯಾನಿಸಿದ್ದರು. ಪ್ರಾಮಾಣಿಕತೆ, ಪಾರದರ್ಶಕತೆ ಎಲ್ಲಿದೆ? ಎಂದಾಕೆ ಯುಎಸ್‌ಎ ಜಿಮ್ನಾಸ್ಟಿಕ್ಸ್ ಮತ್ತು ಯುಎಸ್ ಒಲಿಂಪಿಕ್ ಸಮಿತಿಯಲ್ಲಿ ಪ್ರಶ್ನಿಸಿದ್ದರು.
ಯುವ ಜಿಮ್ನಾಸ್ಟ್‌ಗಳಿಗೆ ತಾವು ತರಬೇತಿ ಪಡೆಯುತ್ತಿರುವ ಸಂಸ್ಥೆ (ಮಿಚಿಗನ್ ರಾಜ್ಯ), ರಾಷ್ಟ್ರೀಯ ಮಂಡಳಿ ಅಥವಾ ಒಲಿಂಪಿಕ್ ಮಂಡಳಿಯಿಂದ ಯಾವುದೇ ನೆರವು ಸಿಗುತ್ತಿರಲಿಲ್ಲ ಎಂಬುದು ನಸ್ಸರ್ ಪ್ರಕರಣದಲ್ಲಿ ಸಾಬೀತಾಗಿತ್ತು.
ಜಗತ್ತಿನ ಅತ್ಯಂತ ಮುಂದುವರಿದ, ಅತ್ಯಂತ ಸಂಘಟಿತ ಮತ್ತು ಕ್ರೀಡಾಸ್ನೇಹಿ ವಾತಾವರಣ ಹೊಂದಿರುವ ಅಮೆರಿಕ ದಲ್ಲೇ ಈ ಪರಿಸ್ಥಿತಿಯಾದರೆ ಭಾರತದಲ್ಲಿ ಈ ಬಗ್ಗೆ ಯೋಚಿಸುವುದಾದರೂ ಹೇಗೆ? ಆದರೆ ಯೋಚಿಸಿದಾಗ ಇಲ್ಲಿ ನಡೆದಿರುವ ಕೆಲವೊಂದು ಪ್ರಕರಣಗಳಾದರೂ ಬೆಳಕಿಗೆ ಬರುತ್ತವೆ.
ತಂಡಕ್ಕೆ ಆಯ್ಕೆಯಾಗಬೇಕಿದ್ದರೆ ತನಗೆ ದೇಹಸುಖ ನೀಡಬೇಕು ಎಂಬ ಬೇಡಿಕೆಯಿಡುತ್ತಾರೆ ಎಂದು ಅನೇಕ ಮಹಿಳಾ ಕ್ರಿಕೆಟ್‌ಪಟುಗಳು ನೀಡಿದ ದೂರಿನ ಆಧಾರದಲ್ಲಿ 2009ರ ಆಗಸ್ಟ್‌ನಲ್ಲಿ ಆಂಧ್ರ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ವಿ. ಚಾಮುಂಡೇಶ್ವರನಾಥ್ ಅವರನ್ನು ವಜಾಗೊಳಿಸಲಾಗಿತ್ತು. ಆದರೆ ನಂತರ ದೂರು ನೀಡಿದವರಲ್ಲಿ ಒಬ್ಬಾಕೆ ತಾನು ಒತ್ತಡಕ್ಕೊಳಗಾಗಿ ಆ ದೂರು ನೀಡಿದ್ದೆ ಎಂದು ಹೇಳಿ ತಾನು ನೀಡಿದ್ದ ದೂರನ್ನು ವಾಪಸ್ ಪಡೆದುಕೊಂಡಿದ್ದರು. ಇದಾಗಿ ಆರು ವರ್ಷಗಳ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸದ್ಯ ಚಾಮುಂಡೇಶ್ವರನಾಥ್ ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಪುಲ್ಲೇಲ ಗೋಪಿಚಂದ್ ಅವರ ನಂತರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಕ್ರೀಡಾಪಟುಗಳಾದ ಪಿ.ವಿ ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಮತ್ತು ಗೋಪಿಚಂದ್‌ಗೆ ಹಾಗೂ ನಂತರದ ವರ್ಷದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್‌ಗೆ ಬಿಎಂಡಬ್ಲೂ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಚಾಮುಂಡೇಶ್ವರನಾಥ್ ರಾಷ್ಟ್ರೀಯ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡಿದ್ದಾರೆ.
2010ರಲ್ಲಿ ಭಾರತೀಯ ಹಾಕಿ ಅಧಿಕಾರಿಗಳಿಗೆ ಬಂದ ಅನಾಮಧೇಯ ಪತ್ರದಲ್ಲಿ ಮಹಿಳಾ ತಂಡದ ವೀಡಿಯೊಗ್ರಾಫರ್ ಬಸವರಾಜ್ ವಿರುದ್ಧ ಆರೋಪ ಹೊರಿಸಲಾಗಿತ್ತು. ನಂತರ 20ರ ಹರೆಯದ ಕಿರಿಯ ವಿಶ್ವಕಪ್ ತಂಡದ ನಾಯಕಿ, ತರಬೇತುದಾರ ಎಂ.ಕೆ ಕೌಶಿಕ್‌ರ ವರ್ತನೆಯ ಕುರಿತು ಇಮೇಲ್ ಕಳುಹಿಸಿದರು. ಈ ಇಮೇಲ್‌ನಲ್ಲಿ 30 ಆಟಗಾರರ ಸಹಿ ಕೂಡಾ ಇತ್ತು. ಹಾಕಿ ಅಧಿಕಾರಿಗಳು ವೀಡಿಯೋಗ್ರಾಫರ್‌ನನ್ನು ವಜಾ ಮಾಡಿದರೆ ಕೌಶಿಕ್ ರಾಜೀನಾಮೆ ನೀಡಿ ಮನೆಗೆ ತೆರಳಿದ್ದರು. ಆದರೆ 2013ರ ಜುಲೈಯಲ್ಲಿ ಕೌಶಿಕ್‌ರನ್ನು ಪುರುಷರ ತಂಡದ ಸಹಾಯಕ ಕೋಚ್ ಆಗಿ ನಾಲ್ಕು ತಿಂಗಳ ಅವಧಿಗೆ ನೇಮಿಸಲಾಯಿತು. 2014ರಲ್ಲಿ ಹಾಕಿ ಇಂಡಿಯಾವು ಕೌಶಿಕ್‌ರನ್ನು ಕೇಂದ್ರ ವಲಯದ ಹೈ-ಪರ್ಫಾಮೆನ್ಸ್ ವ್ಯವಸ್ಥಾಪಕರಾಗಿ ಮಾಡಿತು. ಸದ್ಯ ಅವರು ಹಾಕಿ ಇಂಡಿಯಾದ ಭೋಪಾಲ್‌ನಲ್ಲಿರುವ ಪುರುಷರ ಹಾಕಿ ಅಕಾಡಮಿಯಲ್ಲಿ ಮುಖ್ಯ ತರಬೇತುದಾರರಾಗಿದ್ದಾರೆ. ಇನ್ನು ಕೌಶಿಕ್ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿ ಇಮೇಲ್ ಕಳುಹಿಸಿದ ಆಟಗಾತಿಯ ಗತಿಯೇನಾಯಿತು ಎಂದು ಕೇಳಿದರೆ, ಆಕೆ ಮತ್ತೆಂದೂ ಭಾತೀಯ ಹಾಕಿ ತಂಡದಲ್ಲಿ ಆಡಲೇ ಇಲ್ಲ.


ತಮಿಳುನಾಡು ಬಾಕ್ಸಿಂಗ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎ.ಕೆ. ಕರುಣಾಕರನ್ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಮಹಿಳಾ ಬಾಕ್ಸರ್‌ವೊಬ್ಬರು ಆರೋಪಿಸಿದ ಪರಿಣಾಮ ಕರುಣಾಕರನ್‌ರನ್ನು 2011ರ ಮಾರ್ಚ್ ನಲ್ಲಿ ಬಂಧಿಸಲಾಯಿತು. ಇದಾದ ನಂತರ ದೂರು ನೀಡಿದ ಮಹಿಳೆ ಚೆನ್ನೈ ತೊರೆದು ಕಿಕ್ ಬಾಕ್ಸಿಂಗ್ ಮತ್ತು ಮಾರ್ಲ್ ಆರ್ಟ್ಸ್ ಕಲಿಯಲು ಆರಂಭಿಸಿದರು.

2015ರ ಆಗಸ್ಟ್‌ನಲ್ಲಿ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್ ಸಮಯದಲ್ಲಿ ತಾನು ತಂಗಿದ್ದ ಅತಿಥಿಗೃಹದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕುಸ್ತಿ ರೆಫ್ರಿ ವಿರೇಂದರ್ ಮಲಿಕ್‌ರನ್ನು ಬಂಧಿಸಲಾಯಿತು. 2014ರ ಸೆಪ್ಟಂಬರ್‌ನಲ್ಲಿ ಹೊಸದಿಲ್ಲಿಯ ಐಜಿಐ ಸ್ಟೇಡಿಯಂನಲ್ಲಿ ಜಿಮ್ನಾಸ್ಟಿಕ್ ತರಬೇತುದಾರ ಮನೋಜ್ ರಾಣಾ ಮತ್ತು ಜಿಮ್ನಾಸ್ಟ್ ಚಂದನ್ ಪಾಠಕ್ ತನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಜಿಮ್ನಾಸ್ಟ್ ಆರೋಪಿಸಿದ್ದರು. ತನ್ನ ದೂರನ್ನು ವಾಪಸ್ ಪಡೆಯುವಂತೆ ಮಂಡಳಿಯ ಅಧಿಕಾರಿಗಳು ತನ್ನ ಮೇಲೆ ಒತ್ತಡ ಹೇರುತ್ತಿರುವುದಾಗಿ ಆಕೆ ಆರೋಪ ಮಾಡಿದ್ದರು. ಆದರೆ 2017ರ ಡಿಸೆಂಬರ್‌ನಲ್ಲಿ ಪರಿಶೀಲಿಸಿದಾಗ ಕೂಡಾ ರಾಣಾ ಐಜಿಐ ಸ್ಟೇಡಿಯಂನಲ್ಲಿ ತರಬೇತುದಾರರಾಗಿ ಮುಂದುವರಿದಿರುವುದು ಗಮನಕ್ಕೆ ಬಂದಿದೆ.
ಬ್ರಿಟಿಷ್ ಬಿಲ್ಲುಗಾರಳ ಜೊತೆ ಅನುಚಿತವಾಗಿ ವರ್ತಿಸಿದರು ಎಂಬ ಕಾರಣಕ್ಕೆ ಬಿಲ್ಲುಗಾರಿಕೆ ತರಬೇತುದಾರ ಸುನೀಲ್ ಕುಮಾರ್‌ನನ್ನು 2017ರ ಅಕ್ಟೋಬರ್‌ನಲ್ಲಿ ಅರ್ಜೆಂಟೀನದಲ್ಲಿ ನಡೆದ ಯುವ ವಿಶ್ವ ಬಿಲ್ಲುಗಾರಿಕಾ ಚಾಂಪಿಯನ್‌ಶಿಪ್‌ನಿಂದ ಹೊರಗೆ ಕಳುಹಿಸಲಾಗಿತ್ತು. ಅವರು ಈಗಲೂ ಅಮಾನತಿನಲ್ಲಿದ್ದಾರೆ.
ಈ ಎಲ್ಲ ಘಟನೆಗಳಿಂದ ಸಾಬೀತಾಗುವ ಅಂಶವೆಂದರೆ ಭಾರತೀಯ ಕ್ರೀಡಾಲೋಕ ಕೂಡಾ ಅಪಾಯಗಳಿಂದ ತುಂಬಿದೆ. ಆದರೆ ಈ ಅಪಾಯಗಳು ಸಾಂಘಿಕ ಕ್ರೀಡೆಗಳಿಗಿಂತ ವೈಯಕ್ತಿಕ ಕ್ರೀಡೆಗಳಲ್ಲಿ ಹೆಚ್ಚಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಲು ಹೊರಡುವ ಮಹಿಳೆಯರು ಶೋಷಣೆಗಳೆಂದ ಅಪಾಯಗಳನ್ನು ದಿಟ್ಟವಾಗಿ ಎದುರಿಸಿ ಮುನ್ನಡೆಯಬೇಕಾಗುತ್ತದೆ.
ಈ ವಾರದ ಆರಂಭದಲ್ಲಿ ನನಗೆ ಪರಿಚಯವಿರುವ ಅನೇಕ ಮಹಿಳಾ ಕ್ರೀಡಾಳುಗಳಿಗೆ ಸಂದೇಶ ಕಳುಹಿಸಿ, ತಮಗಾದ ಅಥವಾ ಅನುಭವಕ್ಕೆ ಬಂದಿರುವ ಅಧಿಕಾರದಲ್ಲಿರುವ ವ್ಯಕ್ತಿಗಳಿಂದ ಉಂಟಾಗಿರುವ ಕಿರುಕುಳ, ದೌರ್ಜನ್ಯ, ಶೋಷಣೆಯ ಬಗ್ಗೆ ತಿಳಿಸಲು ಮನವಿ ಮಾಡಿದ್ದೆ. ಯಾವೊಬ್ಬ ಮಹಿಳೆ ಕೂಡಾ ಅದು ನಡೆದಿಲ್ಲ ಎಂದು ಹೇಳಲಿಲ್ಲ. ತನಗಲ್ಲದಿದ್ದರೂ, ತನ್ನ ಕ್ರೀಡೆಯಲ್ಲದಿದ್ದರೂ ಇತರರ ಜೊತೆ ಇಂಥ ಘಟನೆಗಳು ನಡೆದಿವೆ ಎಂದೇ ಅವರೆಲ್ಲರೂ ತಿಳಿಸಿದ್ದರು.
ಮಹಿಳಾ ಕ್ರೀಡಾಪಟುಗಳು ಎಚ್ಚರಿಕೆಯಿಂದ ಕಾಲಿಡುವ ಮೂಲಕ ಶೋಷಣೆಯ ಈ ತೆಳುಪದರವನ್ನು ಪಾರು ಮಾಡಬಹುದು. ಕುಖ್ಯಾತ ತರಬೇತುದಾರರು ಮತ್ತು ಅಧಿಕಾರಿಗಳ ಜೊತೆ ಕೆಲಸ ಮಾಡಲು, ಅವರನ್ನು ನಿಭಾಯಿಸಲು ಮಹಿಳಾ ಕ್ರೀಡಾಪಟುಗಳು ಬುದ್ಧಿವಂತಿಕೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಕ್ರೀಡಾ ಮಂಡಳಿಗಳ ಅಧಿಕಾರಿಗಳ ಅಥ್ಲೀಟ್‌ಗಳನ್ನು ಶಿಬಿರಗಳಲ್ಲಿ ಇರಿಸುವ ಮತ್ತು ವೈಯಕ್ತಿಕ ತರಬೇತುದಾರರಿಂದ ದೂರವಿರಿಸುವ ಚಾಳಿಯ ಬಗ್ಗೆ ನಾವು ಅನೇಕ ಬಾರಿ ಕೇಳಿರುತ್ತೇವೆ. ಅಥ್ಲೀಟ್‌ಗಳು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗುವ ಮೂಲಕ ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರುತ್ತಾರೆ. ಅದಕ್ಕಾಗಿ ಈ ರೀತಿ ಮಾಡಲಾಗುತ್ತದೆ ಎಂಬ ಸಬೂಬು ನೀಡಲಾಗುತ್ತದೆ. ಆದರೆ ಕ್ರೀಡಾಳುಗಳು ದಿನದ 24 ಗಂಟೆಯೂ ತರಬೇತುದಾರರೊಂದಿಗೆ ಇರಲು ಬಯಸದೆ ಹಾಗೂ ಶಿಬಿರದಿಂದ ಹೊರಗೆ ಉಳಿಯಲು ಬಯಸಿದರೆ? ಮಹಿಳಾ ಅಥ್ಲೀಟ್‌ಗಳ ದೂರುಗಳನ್ನು ಆಲಿಸುವ ಅಧಿಕಾರಿಗಳುಳ್ಳ ಯಾವುದಾದರೂ ಕ್ರೀಡಾ ಆಡಳಿತವಿದೆಯೇ? ಅಷ್ಟಕ್ಕೂ ಈ ಕ್ರೀಡಾ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿ ಅದೆಷ್ಟು ಮಹಿಳಾ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ?
ಮಹಿಳಾ ಅಥ್ಲೀಟ್ ನೀಡಿದ ದೂರಿಗೆ ಪ್ರತಿಯಾಗಿ ಅಧಿಕಾರಿಗಳು ನೀಡುವ ಸಾಮಾನ್ಯ ವಿವರಣೆಯೆಂದರೆ ಚುನಾವಣೆಯು ಸಮೀಪವಿರುವ ಕಾರಣ ನಿರ್ದಿಷ್ಟ ಅಧಿಕಾರಿಯ ಘನತೆಯನ್ನು ಕುಗ್ಗಿಸಲು ಮಾಡುತ್ತಿರುವ ಪ್ರಯತ್ನ ಇದಾಗಿದೆ ಎಂಬುದು. ಈಗ ಆಂತರಿಕ ದೂರು ಸಮಿತಿಗಳ ರಚನೆಯಾಗಿದೆ. ಆದರೆ ಈ ಸಮಿತಿಗಳಲ್ಲೂ ಪುರುಷರೇ ಪ್ರಧಾನವಾಗಿದ್ದು ಅವರು ಆರೋಪಿತರ ಸಾರ್ವಜನಿಕ ಜನಪ್ರಿಯತೆಯನ್ನು ಗಮನಿಸುತ್ತಾರೆಯೇ ಹೊರತು ಸಂತ್ರಸ್ತಳ ದೂರನ್ನಲ್ಲ.

Writer - ಶಾರದಾ ಉಗ್ರ

contributor

Editor - ಶಾರದಾ ಉಗ್ರ

contributor

Similar News

ಜಗದಗಲ

ಜಗ ದಗಲ