ಎಚ್ಚರಿಕೆ, ಈ ಚಟಗಳು ನಿಮ್ಮ ಮೂತ್ರಪಿಂಡಗಳಿಗೆ ಹಾನಿಯನ್ನು ಮಾಡುತ್ತವೆ

Update: 2018-03-08 10:31 GMT

ಇಂದು ವಿಶ್ವ ಮೂತ್ರಪಿಂಡ ದಿನ. ನಮ್ಮ ಶರೀರದಲ್ಲಿ ಮೂತ್ರಪಿಂಡಗಳ ಪ್ರಾಮುಖ್ಯದ ಕುರಿತು ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಮೂತ್ರಪಿಂಡಗಳು ಮಾನವ ಶರೀರದಲ್ಲಿನ ಅತ್ಯಂತ ಮುಖ್ಯವಾದ ಅಂಗಾಂಗಗಳಲ್ಲಿ ಸೇರಿವೆ. ಶರೀರದಲ್ಲಿನ ಹೆಚ್ಚುವರಿ ನೀರನ್ನು ಹೊರಗೆ ಹಾಕುವುದು ಮತ್ತು ಶರೀರಕ್ಕೆ ಹೆಚ್ಚು ನೀರು ಅಗತ್ಯವಿದ್ದಾಗ ನೆರವಾಗಲು ನೀರನ್ನು ಉಳಿಸಿಕೊಳ್ಳುವುದು ಮೂತ್ರಪಿಂಡಗಳ ಪ್ರಮುಖ ಕಾರ್ಯವಾಗಿದೆ. ರಕ್ತವನ್ನು ವಿಷಮುಕ್ತವಾಗಿಸುವ ಅವು ನಮ್ಮ ಶರೀರದಲ್ಲಿನ ತ್ಯಾಜ್ಯಗಳನ್ನು ಸೋಸಿ ಅವುಗಳನ್ನು ಮೂತ್ರದ ಮೂಲಕ ಶರೀರದಿಂದ ಹೊರಗೆ ಹಾಕುತ್ತವೆ.

ಮೂತ್ರಪಿಂಡಗಳು ಶರೀರದಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳ ಮಟ್ಟವನ್ನು ಕ್ರಮಬದ್ಧಗೊಳಿಸುವಲ್ಲಿಯೂ ನೆರವಾಗುತ್ತವೆ. ಜೊತೆಗೆ ರಕ್ತದೊತ್ತಡ ಮತ್ತು ಕೆಂಪು ರಕ್ತಕಣಗಳ ಉತ್ಪಾದನೆ ಇತ್ಯಾದಿಗಳನ್ನು ನಿಯಂತ್ರಿಸಲು ನೆರವಾಗುವ ಪ್ರಮುಖ ಹಾರ್ಮೋನ್‌ಗಳನ್ನೂ ಮೂತ್ರಪಿಂಡಗಳು ಉತ್ಪಾದಿಸುತ್ತವೆ. ಹೀಗಾಗಿ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕಾದ್ದು ಮುಖ್ಯವಾಗಿದೆ.

ಅಂದ ಹಾಗೆ ನಮ್ಮ ಕೆಲವು ಚಟಗಳು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತವೆ ಎನ್ನುವುದು ನಿಮಗೆ ಗೊತ್ತೇ?

ಇಲ್ಲಿದೆ ಅಂತಹ ಕೆಲವು ಚಟಗಳ ಮಾಹಿತಿ.......

► ನೋವು ನಿವಾರಕಗಳ ಅತಿಯಾದ ಸೇವನೆ

 ಔಷಧಿ ಅಂಗಡಿಗಳಲ್ಲಿ ವೈದ್ಯರ ಶಿಫಾರಸು ಚೀಟಿಯಿಲ್ಲದೆ ಸುಲಭವಾಗಿ ದೊರೆಯುವ ನೋವು ನಿವಾರಕ ಮಾತ್ರೆಗಳು ನೋವಿನಿಂದ ಉಪಶಮನವನ್ನೇನೋ ನೀಡುತ್ತವೆ, ಆದರೆ ಅವು ನಿಮ್ಮ ಮೂತ್ರಪಿಂಡಗಳಿಗೆ ಹಾನಿಯನ್ನೂ ಉಂಟು ಮಾಡಬಹುದು. ನೀವು ಈಗಾಗಲೇ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರೆ ಇಂತಹ ನೋವು ನಿವಾರಕ ಮಾತ್ರೆಗಳ ಸೇವನೆಯಿಂದ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಹೀಗಾಗಿ ಆಗಾಗ್ಗೆ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವ ಚಟ ನಿಮಗಿದ್ದರೆ ಅದಕ್ಕೆ ಕಡಿವಾಣ ಹಾಕಿ.

► ಸಂಸ್ಕರಿತ ಆಹಾರ ಸೇವನೆ

ಸಂಸ್ಕರಿತ ಆಹಾರದಲ್ಲಿ ರಂಜಕ ಮತ್ತು ಸೋಡಿಯಂ ಅಧಿಕ ಪ್ರಮಾಣದಲ್ಲಿರುತ್ತವೆ. ಮೂತ್ರಪಿಂಡ ಕಾಯಿಲೆಯಿಂದ ನರಳುತ್ತಿರುವವರು ತಮ್ಮ ಆಹಾರದಲ್ಲಿ ಸೋಡಿಯಂ ಮೇಲೆ ಮಿತಿ ಹೇರುವುದು ಅಗತ್ಯವಾಗಿದೆ. ಸಂಸ್ಕರಿತ ಆಹಾರದಂತಹ ಅಧಿಕ ರಂಜಕವನ್ನೊಳಗೊಂಡಿರುವ ಆಹಾರಗಳ ಸೇವನೆ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ಸಾಬೀತುಗೊಳಿಸಿವೆ.

► ಉಪ್ಪಿನ ಅತಿ ಬಳಕೆ

 ಅಧಿಕ ಪ್ರಮಾಣದಲ್ಲಿ ಉಪ್ಪು ಹೊಂದಿರುವ ಆಹಾರಗಳಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ ಮತ್ತು ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೆಚ್ಚುವರಿ ಉಪ್ಪನ್ನು ಹೊರಗೆ ಹಾಕಲು ಮೂತ್ರಪಿಂಡಗಳು ಹೆಚ್ಚಿನ ಕಾರ್ಯ ನಿರ್ವಹಿಸಬೇಕಾಗುವುದರಿಂದ ಅತಿಯಾದ ಉಪ್ಪಿನ ಬಳಕೆ ಕ್ರಮೇಣ ಮೂತ್ರಪಿಂಡಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಅಲ್ಲದೆ ಇದರಿಂದ ಶರೀರದಲ್ಲಿ ನೀರಿನಂಶ ಹೆಚ್ಚಾಗುವುದು ಸಹ ಮೂತ್ರಪಿಂಡ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.

► ಸಾಕಷ್ಟು ನೀರನ್ನು ಕುಡಿಯದಿರುವುದು

ನಿಮ್ಮ ಶರೀರದಲ್ಲಿ ಸಾಕಷ್ಟು ನೀರಿನ ಅಂಶವಿದ್ದರೆ ಅದು ವಿಷವಸ್ತುಗಳನ್ನು ಹೊರಗೆ ಹಾಕುವಲ್ಲಿ ಮೂತ್ರಪಿಂಡಗಳಿಗೆ ನೆರವಾಗುತ್ತದೆ. ಯಥೇಚ್ಛವಾಗಿ ನೀರನ್ನು ಕುಡಿಯುವುದು ಮೂತ್ರಪಿಂಡ ಕಲ್ಲುಗಳ ಅಪಾಯವನ್ನು ತಪ್ಪಿಸಿಕೊಳ್ಳಲು ಅತ್ಯುತ್ತಮ ಮಾರ್ಗವಾಗಿದೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರು ದ್ರವಸೇವನೆಯಿಂದ ದೂರವಿರುವುದು ಮುಖ್ಯವಾಗಿದೆ.

► ಅತಿಯಾದ ಮಾಂಸ ಸೇವನೆ

ಪ್ರಾಣಿಗಳ ಮಾಂಸದ ಸೇವನೆಯ ಬಳಿಕ ಅದರಲ್ಲಿಯ ಪ್ರೋಟಿನ್ ರಕ್ತದಲ್ಲಿ ಅಧಿಕ ಆಮ್ಲವನ್ನು ಉತ್ಪಾದಿಸುತ್ತದೆ. ಇದು ಮೂತ್ರಪಿಂಡಗಳಿಗೆ ಹಾನಿಕಾರಕವಾಗಬಹುದು ಮತ್ತು ಆಮ್ಲವ್ಯಾಧಿಗೆ ಕಾರಣವಾಗಬಹುದು. ಆಮ್ಲವ್ಯಾಧಿಯುಂಟಾದಾಗ ಆಮ್ಲವನ್ನು ತ್ವರಿತವಾಗಿ ಹೊರಹಾಕಲು ಮೂತ್ರಪಿಂಡಗಳಿಗೆ ಸಾಧ್ಯವಾಗುವುದಿಲ್ಲ. ಪ್ರಾಣಿಜನ್ಯ ಪ್ರೋಟಿನ್ ನಮ್ಮ ಶರೀರಕ್ಕೆ ಅಗತ್ಯವೇನೋ ಹೌದು, ಆದರೆ ಅತಿಯಾದ ಸೇವನೆ ಮೂತ್ರಪಿಂಡಗಳಿಗೆ ಮಾರಕವಾಗಬಹುದು.

► ನಿದ್ರೆಯ ಕೊರತೆ

ನಿದ್ರೆಯು ಮಿದುಳಿನ ಸ್ನಾಯುಗಳು ಮತ್ತು ಶರೀರಕ್ಕೆ ಆರಾಮವನ್ನು ನೀಡುವುದರಿಂದ ಒಳ್ಳೆಯ ನಿದ್ರೆ ಅತ್ಯಗತ್ಯವಾಗಿದೆ. ಮೂತ್ರಪಿಂಡಗಳು ಸೇರಿದಂತೆ ಶರೀರದ ಒಟ್ಟಾರೆ ಆರೋಗ್ಯವು ನಿದ್ರೆಯಿಂದ ದೊರೆಯುತ್ತದೆ. ನಿದ್ರೆ ಮತ್ತು ಜಾಗ್ರತ ಸ್ಥಿತಿಗಳ ಚಕ್ರವು ಮೂತ್ರಪಿಂಡಗಳ ಕಾರ್ಯವನ್ನು ಕ್ರಮಬದ್ಧಗೊಳಿಸುತ್ತದೆ ಮತ್ತು ಇದು ಮೂತ್ರಪಿಂಡಗಳು ದಿನದ 24 ಗಂಟೆಯೂ ಸಮರ್ಪಕವಾಗಿ ಕೆಲಸ ಮಾಡಲು ನೆರವಾಗುತ್ತದೆ.

► ಸಕ್ಕರೆ ಅಧಿಕವಾಗಿರುವ ಆಹಾರದ ಅತಿಯಾದ ಸೇವನೆ

ಆಹಾರದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿದ್ದರೆ ಅದು ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗುತ್ತದೆ ಮತ್ತು ಬೊಜ್ಜು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ಸಕ್ಕರೆಯನ್ನೊಳಗೊಂಡಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದು ಮೂತ್ರಪಿಂಡಗಳ ಕಾಯಿಲೆಗೆ ಕಾರಣ ವಾಗುತ್ತದೆ.

► ಅತಿಯಾದ ಮದ್ಯಪಾನ

ನಿಯಮಿತವಾಗಿ ಅತಿಯಾದ ಮದ್ಯಪಾನವು ಮೂತ್ರಪಿಂಡ ಕಾಯಿಲೆಗಳ ಅಪಾಯ ವನ್ನು ಇಮ್ಮಡಿಗೊಳಿಸುತ್ತದೆ. ವಿಪರೀತ ಮದ್ಯ ಸೇವಿಸುವವರು ಮೂತ್ರಪಿಂಡ ಸಮಸ್ಯೆಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನೆದುರಿಸುತ್ತಾರೆ. ಹೀಗಾಗಿ ಮೂತ್ರಪಿಂಡಗಳನ್ನು ರಕ್ಷಿಸಿಕೊಳ್ಳಲು ಮದ್ಯ ಸೇವನೆಗೆ ಒಂದು ಮಿತಿಯನ್ನು ಹಾಕಿಕೊಳ್ಳು ವುದು ಒಳ್ಳೆಯದು.

► ಧೂಮ್ರಪಾನ

ಧೂಮ್ರಪಾನವು ಮೂತ್ರಪಿಂಡಗಳು ಸೇರಿದಂತೆ ಶರೀರದ ಪ್ರತಿಯೊಂದು ಅಂಗಕ್ಕೂ ಹಾನಿಕಾರಕವಾಗಿದೆ. ಧೂಮ್ರಪಾನವು ರಕ್ತದೊತ್ತಡವನ್ನು ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದ ಹಾಗೂ ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ಕುಂಠಿತಗೊಳಿಸುತ್ತದೆ.

► ಆಗಾಗ್ಗೆ ಮೂತ್ರ ವಿಸರ್ಜನೆ ಮಾಡದಿರುವುದು

 ಮೂತ್ರ ವಿಸರ್ಜನೆಯ ಮೂಲಕ ದೇಹದಲ್ಲಿಯ ವಿಷವಸ್ತುಗಳು ಹೊರಹಾಕಲ್ಪಡು ತ್ತವೆ. ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗದೇ ಮೂತ್ರವನ್ನು ಕಟ್ಟಿಕೊಳ್ಳುವ ಅಭ್ಯಾಸವು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡಬಹುದು. ಅಲ್ಲದೇ ವೈರಾಣುಗಳಿಂದ ಉಂಟಾಗುವ ಸೋಂಕುಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಅವು ಮೂತ್ರಪಿಂಡ ಗಳಿಗೆ ಹಾನಿಯನ್ನುಂಟು ಮಾಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News