ಉಪವಾಸದ ದಿನಗಳಲ್ಲಿ ಆಹಾರಕ್ರಮ ಹೇಗಿರಬೇಕು?

Update: 2018-03-09 10:45 GMT

ಆಗಾಗ್ಗೆ ಉಪವಾಸವನ್ನು ಆಚರಿಸುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಕ್ರಮವಾಗಿದೆ. ವಿವಿಧ ಧರ್ಮಗಳಲ್ಲಿ ಉಪವಾಸಕ್ಕೆ ಮಹತ್ವದ ಸ್ಥಾನವಿದೆ. ಉಪವಾಸದಿಂದ ನಮ್ಮ ಶರೀರಕ್ಕೆ ಹಲವಾರು ಲಾಭಗಳಿವೆಯಾದರೂ, ನಮ್ಮ ಶರೀರವು ಅದಕ್ಕೆ ಒಗ್ಗಿಕೊಳ್ಳು ವವರೆಗೂ ಅದೊಂದು ಸವಾಲು ಕೂಡ ಆಗಬಹುದು. ಉಪವಾಸವನ್ನು ಆಚರಿಸುವ ಸಂದರ್ಭದಲ್ಲಿ ಹಲವರು ಆ್ಯಸಿಡಿಟಿ ಅಥವಾ ಆಮ್ಲೀಯತೆಯ ಸಮಸ್ಯೆಗೊಳಗಾಗುತ್ತಾರೆ. ಹೆಚ್ಚಿನವರು ಉಪವಾಸವಿರುವಾಗ ಘನ ಆಹಾರಗಳನ್ನು ತ್ಯಜಿಸಿ ಹಣ್ಣುಗಳು ಮತ್ತು ಪಾನೀಯಗಳಿಗೆ ಅಂಟಿಕೊಂಡಿರುತ್ತಾರೆ.

ಶರೀರವು ತನ್ನಲ್ಲಿಯ ಹಾನಿಕಾರಕ ವಿಷವಸ್ತುಗಳನ್ನು ಹೊರಗೆ ಹಾಕುವುದರೊಂದಿಗೆ ಉಪವಾಸವು ಪರಿಣಾಮಕಾರಿ ಫಲಿತಾಂಶಗಳನ್ನು ನೀಡತೊಡಗುತ್ತದೆ. ಹೀಗೆ ಉಪವಾಸವಿರುವಾಗ ಕಾಡುವ ಆಮ್ಲೀಯತೆಯು ಎದೆ ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿ ಉರಿಗೆ ಕಾರಣವಾಗುತ್ತದೆ. ಉಪವಾಸದಲ್ಲಿ ಆಮ್ಲೀಯತೆಯು ಸಾಮಾನ್ಯ ಸಮಸ್ಯೆ ಯಾಗಿದ್ದು, ಅದನ್ನು ನಿವಾರಿಸಲು ಕೆಲವು ಸರಳ ಮಾರ್ಗಗಳಿಲ್ಲಿವೆ....

►ಬಿಸಿನೀರಿನ ಸೇವನೆ

ಉಪವಾಸವಿರುವಾಗ ಶರೀರದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ತಣ್ಣಗಿನ ನೀರಿನ ಬದಲು ಬೆಚ್ಚನೆಯ ಅಥವಾ ಬಿಸಿನೀರಿನ ಸೇವನೆ ಒಳ್ಳೆಯದು. ಅಲ್ಲದೆ ಒಂದೇ ಬಾರಿಗೆ ಹೊಟ್ಟೆ ತುಂಬ ನೀರು ಕುಡಿಯುವ ಬದಲು ಆಗಾಗ್ಗೆ ಸಣ್ಣ ಪ್ರಮಾಣದಲ್ಲಿ ಅಥವಾ ಗುಟುಕುಗಳಲ್ಲಿ ಸೇವಿಸಬೇಕು. ಹೊಟ್ಟೆಯಲ್ಲಿ ತುಂಬ ನೀರಿದ್ದರೆ ಆಮ್ಲೀಯತೆಯ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.

►ತಂಪು ಪಾನೀಯಗಳು

ಉಪವಾಸದ ವೇಳೆ ತಂಪು ಪಾನೀಯಗಳನ್ನು ಸೇವಿಸಬಹುದಾಗಿದೆ. ಮಜ್ಜಿಗೆ ಅಥವಾ ಸಕ್ಕರೆರಹಿತ ಹಾಲಿನಂತಹ ತಣ್ಣನೆಯ ಪಾನೀಯಗಳು ಉಪವಾಸದ ಸಂದರ್ಭದಲ್ಲಿ ಆಮ್ಲೀಯತೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತವೆ. ಇವು ಹೊಟ್ಟೆಯನ್ನು ತಂಪಾಗಿರಿಸುವ ಜೊತೆಗೆ ಎದೆಉರಿಯನ್ನು ಶಮನಗೊಳಿಸುತ್ತವೆ.

►ಹಣ್ಣುಗಳು

ಬಾಳೇಹಣ್ಣು ಅಥವಾ ಕರಬೂಜಗಳಂತಹ ಹಣ್ಣುಗಳು ಉಪವಾಸದ ಸಂದರ್ಭದಲ್ಲಿ ಅದ್ಭುತ ಪರಿಣಾಮಗಳನ್ನು ನೀಡುತ್ತವೆ. ಬಾಳೆಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಆಮ್ಲೀಯತೆಯನ್ನು ತಡೆಯುತ್ತದೆ. ಅದರಲ್ಲಿಯ ನಾರು ಉಪವಾಸ ವಿರುವಾಗ ಶರೀರಕ್ಕೆ ಒಳ್ಳೆಯದು. ಅದು ಶರೀರದಲ್ಲಿ ಪಿಎಚ್ ಮಟ್ಟದ ಸಮತೋಲನವನ್ನು ಕಾಯ್ದುಕೊಳ್ಳಲೂ ನೆರವಾಗುತ್ತದೆ. ಕರಬೂಜ ಕೂಡ ಆಮ್ಲೀಯತೆಯನ್ನು ತಡೆಯಲು ನೆರವಾಗುತ್ತದೆ. ಉಪವಾಸವಿರುವಾಗ ಈ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

►ಸೀಯಾಳದ ನೀರು

ಸೀಯಾಳದ ನೀರು ನೈಸರ್ಗಿಕ ಪಾನೀಯವಾಗಿದ್ದು, ಆಮ್ಲೀಯತೆಯನ್ನು ತಡೆಯಲು ಪರಿಣಾಮಕಾರಿ ಮತ್ತು ಆರೋಗ್ಯಕರ ವಿಧಾನವಾಗಿದೆ. ಸೀಯಾಳದ ನೀರಿನ ಸೇವನೆಯು ಶರೀರದಲ್ಲಿಯ ಹಾನಿಕಾರಕ ನಂಜುಗಳನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿದೆ, ಜೊತೆಗೆ ಶರೀರದಲ್ಲಿ ಪಿಎಚ್ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ.

►ಸಿಟ್ರಸ್ ಹಣ್ಣಗಳನ್ನು ದೂರವಿಡಿ

ಉಪವಾಸವಿರುವಾಗ ಆಮ್ಲೀಯತೆಯನ್ನು ನಿವಾರಿಸಲು ಕಿತ್ತಳೆ, ದ್ರಾಕ್ಷಿ ಮತ್ತು ಲಿಂಬೆಯಂತಹ ಆಮ್ಲವನ್ನು ಒಳಗೊಂಡ ಹಣ್ಣುಗಳನ್ನು ಸೇವಿಸಬಾರದು. ಇವು ಆಮ್ಲೀಯತೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ.

►ಉಪವಾಸ ಬಿಡುವಾಗ ಎಚ್ಚರ ವಹಿಸಿ

ಗಂಟೆಗಟ್ಟಲೆ ಕಾಲ ಆಚರಿಸಿದ ಉಪವಾಸವನ್ನು ಬಿಡುವಾಗ ಒಂದೇ ಬಾರಿಗೆ ಹೊಟ್ಟೆ ತುಂಬ ಆಹಾರವನ್ನು ಸೇವಿಸುವ ಬದಲು ನೀರು ಮತ್ತು ಹಣ್ಣುಗಳ ಸೇವನೆ ಒಳ್ಳೆಯದು. ಉಪವಾಸದ ನಂತರ ಆರೋಗ್ಯಕರ ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಆಮ್ಲೀಯತೆಯನ್ನು ದೂರವಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News