×
Ad

ಅಲ್ಯುಮಿನಿಯಂಗೆ 10 ಶೇ., ಉಕ್ಕಿಗೆ 25 ಶೇ. ಆಮದು ಸುಂಕ: ಟ್ರಂಪ್ ಘೋಷಣೆ

Update: 2018-03-09 22:46 IST

ವಾಶಿಂಗ್ಟನ್, ಮಾ. 9: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಉಕ್ಕು ಆಮದಿನ ಮೇಲೆ 25 ಶೇಕಡ ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ 10 ಶೇಕಡ ತೆರಿಗೆ ವಿಧಿಸಿದ್ದಾರೆ.

ಆದಾಗ್ಯೂ, ಕೆನಡ ಮತ್ತು ಮೆಕ್ಸಿಕೊಗೆ ತೆರಿಗೆಯಿಂದ ವಿನಾಯಿತಿ ನೀಡಿದ್ದಾರೆ. ಅದೇ ವೇಳೆ, ಹಿಂದಿನ ‘ಯಾರಿಗೂ ವಿನಾಯಿತಿಯಿಲ್ಲ’ ನಿಲುವಿನಿಂದ ಹಿಂದೆ ಸರಿದು ಇತರ ಮಿತ್ರ ದೇಶಗಳಿಗೂ ವಿನಾಯಿತಿ ನೀಡುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.

ಶ್ವೇತಭವನದಲ್ಲಿ ಆಮದು ತೆರಿಗೆಯನ್ನು ಘೋಷಿಸಿದ ಅವರು, ಉಕ್ಕು ಮತ್ತು ಅಲ್ಯುಮಿನಿಯಂನ್ನು ಅಮೆರಿಕಕ್ಕೆ ತಂದು ಸುರಿಯುವುದು ‘‘ನಮ್ಮ ದೇಶದ ಮೇಲೆ ನಡೆಸುವ ದಾಳಿಯಾಗಿದೆ’’ ಎಂದು ಬಣ್ಣಿಸಿದರು. ಕಂಪೆನಿಗಳು ತಮ್ಮ ಕಾರ್ಖಾನೆಗಳನ್ನು ಅಮೆರಿಕದಲ್ಲಿ ಸ್ಥಾಪಿಸುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ ಎಂದು ಅವರು ಪ್ರತಿಪಾದಿಸಿದರು.

‘‘ತೆರಿಗೆ ಪಾವತಿಸಲು ನೀವು ಇಚ್ಛಿಸುವುದಿಲ್ಲವಾದರೆ, ನಿಮ್ಮ ಸ್ಥಾವರವನ್ನು ಅಮೆರಿಕಕ್ಕೆ ತನ್ನಿ’’ ಎಂದು ಟ್ರಂಪ್ ಹೇಳಿದರು.

ಜಪಾನ್, ದಕ್ಷಿಣ ಕೊರಿಯ, ಚೀನಾಗಳ ತೀವ್ರ ವಿರೋಧ

ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ವಿಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರಕ್ಕೆ ಶುಕ್ರವಾರ ಖಾರವಾಗಿ ಪ್ರತಿಕ್ರಿಯಿಸಿರುವ ಏಶ್ಯದ ಪ್ರಮುಖ ದೇಶಗಳು, ಇದು ದ್ವಿಪಕ್ಷೀಯ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ ಎಂದು ಎಚ್ಚರಿಸಿವೆ.

ಈ ನಿರ್ಧಾರವು ದೇಶಗಳ ನಡುವಿನ ಆತ್ಮೀಯ ದ್ವಿಪಕ್ಷೀಯ ಸಂಬಂಧಕ್ಕೆ ಹಾನಿಯೆಸಗಲಿದೆ ಎಂದು ಜಪಾನ್ ಹೇಳಿದರೆ, ಈ ನಿರ್ಧಾರಕ್ಕೆ ತನ್ನದು ತೀವ್ರ ವಿರೋಧವಿದೆ ಎಂದು ಚೀನಾ ಹೇಳಿದೆ.

ಈ ನಿರ್ಧಾರದ ವಿರುದ್ಧ ತಾನು ವಿಶ್ವ ವ್ಯಾಪಾರ ಸಂಘಟನೆಗೆ ದೂರು ಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ದಕ್ಷಿಣ ಕೊರಿಯ ಎಚ್ಚರಿಸಿದೆ.

ಜಗತ್ತಿನಲ್ಲಿ ಉತ್ಪಾದನೆಯಾಗುವ ಉಕ್ಕಿನ ಅರ್ಧದಷ್ಟನ್ನು ಚೀನಾ ಉತ್ಪಾದಿಸುತ್ತದೆ.

ಭಾರತದ ಮೇಲೂ ವಾಗ್ಬಾಣ!

ಮಹತ್ವದ ನೀತಿ ಘೋಷಣೆಗಳ ಸಂದರ್ಭದಲ್ಲಿ ಭಾರತದ ಹೆಸರು ಪ್ರಸ್ತಾಪಿಸುವುದನ್ನು ಟ್ರಂಪ್ ಅಭ್ಯಾಸ ಮಾಡಿಕೊಂಡಂತಿದೆ!

   ಉಕ್ಕು ಮತ್ತು ಅಲ್ಯುಮಿನಿಯಂ ಆಮದುಗಳ ಮೇಲೆ ಆಮದು ಸುಂಕ ಹೇರಿಕೆಯನ್ನು ಘೋಷಿಸಿದ ಸಂದರ್ಭದಲ್ಲಿ, ಭಾರತದಿಂದ ಮಾಡಿಕೊಳ್ಳುವ ಮೋಟರ್ ಸೈಕಲ್‌ಗಳ ಆಮದಿನ ಮೇಲೂ ‘ಸರಿಸಮಾನವಾದ ತೆರಿಗೆ’ ವಿಧಿಸುವುದಾಗಿ ಟ್ರಂಪ್ ಘೋಷಿಸಿದರು.

‘‘ಭಾರತದಿಂದ ಅಮೆರಿಕಕ್ಕೆ ಬರುವ ಮೋಟರ್‌ಸೈಕಲ್‌ಗಳ ಮೇಲೆ ಯಾವುದೇ ತೆರಿಗೆಯಿಲ್ಲ, ಆದರೆ, ಅಮೆರಿಕದಿಂದ ಭಾರತಕ್ಕೆ ಹೋಗುವ ಡೇವಿಡ್-ಹ್ಯಾರ್ಲೆ ಮೋಟರ್‌ಸೈಕಲ್‌ಗಳ ಮೇಲೆ 75 ಶೇ...... 50 ಶೇ. ಸುಂಕ ವಿಧಿಸಲಾಗುತ್ತಿದೆ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News