ಕನ್ನಡದ ಧ್ವಜವ ಹಿಡಿದೆತ್ತಿ ನಿಲ್ಲೋ ಮಗು....!

Update: 2018-03-11 05:00 GMT

ಎಲ್ಲ ಪ್ರತಿರೋಧಗಳನ್ನು ಮೀರಿ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುವ ನಾಡಧ್ವಜ ಅಂತಿಮವಾಗಿದೆ. ಹಳದಿ, ಬಿಳಿ, ಕೆಂಪುವರ್ಣ ಹಾಗೂ ರಾಜ್ಯ ಸರಕಾರದ ಲಾಂಛನ ಹೊಂದಿರುವ ತ್ರಿವರ್ಣ ಧ್ವಜಕ್ಕೆ ಅಧಿಕೃತ ನಾಡಧ್ವಜವಾಗಿ ಕಾನೂನಿನ ಮಾನ್ಯತೆ ನೀಡಿ ನಾಡಿಗೆ ಪ್ರತ್ಯೇಕ ಧ್ವಜ ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಕೇಂದ್ರ ಸರಕಾರ ತನ್ನ ಸಮ್ಮತಿಯನ್ನು ನೀಡಿದರೆ ಕರ್ನಾಟಕ ತನ್ನದೇ ಆದ ಒಂದು ನಾಡಧ್ವಜವನ್ನು ಅಧಿಕೃತವಾಗಿ ಹೊಂದುವಂತಾಗುತ್ತದೆ. ಈ ಧ್ವಜವನ್ನು ಈ ಹಿಂದೆಯೂ ಕರ್ನಾಟಕದ ವಿವಿಧ ಸಂಘಟನೆಗಳು ಅನಧಿಕೃತವಾಗಿ ಬಳಸುತ್ತಿದ್ದವು. ರಾಜ್ಯೋತ್ಸವದ ಸಂದರ್ಭದಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ಸಾರ್ವಜನಿಕವಾಗಿ ಬಳಸಲ್ಪಡುತ್ತಿತ್ತು. ಕನ್ನಡ ಹೋರಾಟಗಾರ ಮ. ರಾಮಮೂರ್ತಿಯವರ ದೂರದೃಷ್ಟಿಯಿಂದ ಈ ನಾಡಧ್ವಜದ ಕಲ್ಪನೆಯೊಂದು ಹುಟ್ಟಿಕೊಂಡಿತ್ತು. ಕೇಂದ್ರ ಅಧಿಕೃತವಾಗಿ ಮಾನ್ಯ ಮಾಡಿಲ್ಲ ಎನ್ನುವುದನ್ನು ಬಿಟ್ಟರೆ, ಕನ್ನಡದ ಜನಮನದಲ್ಲಿ ಈ ಹಳದಿ, ಕೆಂಪು ಬಣ್ಣದ ಧ್ವಜ ಈಗಾಗಲೇ ಬೇರೂರಿ ಬಿಟ್ಟಿದೆ. ನಾಡಧ್ವಜ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಅಧಿಕೃತವಾಗಿ ಮೂಡಿ ಬಂದಿದೆ.

ಬಳಿ ಬಣ್ಣ ಮತ್ತು ಸರಕಾರದ ಲಾಂಛನವಾದ ಗಂಡಭೇರುಂಡವನ್ನು ಹೆಚ್ಚುವರಿಯಾಗಿ ಈ ಧ್ವಜ ಹೊಂದಿದೆ. ಹಳದಿ ಧನಾತ್ಮಕತೆಯ, ಸಂಭ್ರಮದ ಸಂಕೇತವಾಗಿದೆ. ಬಿಳಿ ಶಾಂತಿಯನ್ನು ಎತ್ತಿ ಹಿಡಿಯುತ್ತದೆ. ಕೆಂಪು ಆತ್ಮಾಭಿಮಾನ, ಶೌರ್ಯವನ್ನು ಪ್ರತಿನಿಧಿಸುತ್ತದೆ. ವಿಷಾದನೀಯ ಸಂಗತಿಯೆಂದರೆ, ಕರ್ನಾಟಕದ ಜನತೆ ಅಧಿಕೃತ ನಾಡಧ್ವಜದ ಬೇಡಿಕೆಯಿಟ್ಟಾಗ ಅದನ್ನು ಬಿಜೆಪಿಯ ಕೆಲವು ನಾಯಕರು ವಿರೋಧಿಸಿರುವುದು. ಪ್ರತ್ಯೇಕ ನಾಡಧ್ವಜವನ್ನು ಅಪೇಕ್ಷಿಸುವುದು ದೇಶದ್ರೋಹ ಎಂಬಂತಹ ಹೇಳಿಕೆಯನ್ನು ನೀಡಿರುವುದು. ಇಷ್ಟಕ್ಕೂ ರಾಷ್ಟ್ರಧ್ವಜಕ್ಕೆ ಪರ್ಯಾಯವಾಗಿ ಕನ್ನಡ ಧ್ವಜವನ್ನು ಸರಕಾರ ಅಪೇಕ್ಷಿಸಿಲ್ಲ. ರಾಷ್ಟ್ರಧ್ವಜದ ಜೊತೆಜೊತೆಗೆ ನಾಡಧ್ವಜವನ್ನು ಅಪೇಕ್ಷಿಸಿದೆ. ಇದೊಂದು ರೀತಿಯಲ್ಲಿ ಕುವೆಂಪು ಅವರು ‘ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂದು ಹಾಡಿದ ಹಾಗೆ. ಭಾರತವನ್ನು ಪ್ರೀತಿಸುತ್ತಲೇ, ಕನ್ನಡತನವನ್ನು ಎತ್ತಿ ಹಿಡಿಯುವುದು ಇದರ ಉದ್ದೇಶ. ಭಾರತವನ್ನು ಪ್ರೀತಿಸುವುದೆಂದರೆ, ನಮ್ಮ ದಮನಿಗಳಲ್ಲಿರುವ ಕನ್ನಡತನವನ್ನು ಸಾಯಿಸುವುದಲ್ಲ. ಎಲ್ಲಿಯವರೆಗೆ ನಮ್ಮಿಳಗೆ ಕನ್ನಡ ಸಂಸ್ಕೃತಿ, ಪರಂಪರೆ ಜೀವಂತವಿರುತ್ತದೆಯೋ ಅಲ್ಲಿಯವರೆಗೆ ನಾವು ಅತ್ಯುತ್ತಮ ಭಾರತೀಯರಾಗಲು ಸಾಧ್ಯ.ನಮ್ಮ ಕನ್ನಡತನವನ್ನು ಮರೆತು ಉತ್ತಮ ಭಾರತೀಯರಾಗಲು ಸಾಧ್ಯವಿಲ್ಲ.

ಕನ್ನಡತನ ಮರೆತರೆ ಉತ್ತರ ಭಾರತೀಯರ ಅಥವಾ ಹಿಂದಿಯ ಗುಲಾಮರಾಗಿ ಬದುಕಬೇಕಾಗುತ್ತದೆ. ಆದುದರಿಂದಲೇ ರಾಷ್ಟ್ರಧ್ವಜದ ಜೊತೆಗೇ ಕನ್ನಡದ ಧ್ವಜವನ್ನೂ ಎತ್ತಿ ಹಿಡಿಯುವುದು ಕನ್ನಡಿಗರೆಲ್ಲರ ಹೊಣೆಗಾರಿಕೆಯಾಗಿದೆ. ಕನ್ನಡ ಧ್ವಜ ಬೇಡ ಎನ್ನುವವರು ನಿಜವಾದ ಕನ್ನಡಿಗರಾಗಲು ಸಾಧ್ಯವಿಲ್ಲ ಮಾತ್ರವಲ್ಲ, ನಿಜವಾದ ಭಾರತೀಯರಾಗಲೂ ಸಾಧ್ಯವಿಲ್ಲ. ಯಾಕೆಂದರೆ ಅವರು ಈ ದೇಶದ ಪ್ರಾದೇಶಿಕತೆಯನ್ನು, ವೈವಿಧ್ಯ ಸಂಸ್ಕೃತಿಯನ್ನು ವಿರೋಧಿಸುವವರು ಮತ್ತು ಏಕ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಹವಣಿಸುವವರು. ಅವರು ಈ ದೇಶದ ಬಹುಸಂಸ್ಕೃತಿಯ ಹಿರಿಮೆಗೆ ಅಪಾಯ ತರಬಲ್ಲರು. ಆದರೆ ಆರಂಭದಲ್ಲಿ ನಾಡ ಧ್ವಜದ ವಿರುದ್ಧ ಅಪಸ್ವರ ಎತ್ತಿರುವ ಬಿಜೆಪಿ ನಾಯಕರು ಇತ್ತೀಚೆಗೆ ಯಾಕೋ ವೌನವಾಗಿದ್ದಾರೆ. ಒಂದೋ ಅವರಿಗೆ ಕನ್ನಡ ಧ್ವಜದ ಹಿರಿಮೆ ಅರ್ಥವಾಗಿರಬೇಕು. ಅಥವಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಭಾವನೆಗಳ ಜೊತೆಗೆ ಚೆಲ್ಲಾಟವಾಡಲು ಹಿಂಜರಿಯುತ್ತಿರಬೇಕು.

ಒಟ್ಟಿನಲ್ಲಿ ಅಂತಿಮವಾಗಿ ನಾಡಧ್ವಜಕ್ಕೆ ಎಲ್ಲರೂ ಒಂದಾಗಿ ಸಮ್ಮತಿಯನ್ನು ವ್ಯಕ್ತಪಡಿಸಿರುವುದು ಅಭಿನಂದನೀಯ. ಸದ್ಯದ ಸಂದರ್ಭದಲ್ಲಿ ಎಲ್ಲ ರಾಜ್ಯಗಳೂ ತಮ್ಮ ತಮ್ಮ ಐಡೆಂಟಿಟಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತವು ದಕ್ಷಿಣ ಭಾರತದ ಮೇಲೆ ಯಾಜಮಾನ್ಯ ಸ್ಥಾಪಿಸಲು ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸ್ಥಾಪನೆಯಾದ ಬಳಿಕ, ಫೆಡರಲ್ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ರಾಜ್ಯಗಳ ಅಧಿಕಾರವನ್ನು ಹಂತಹಂತವಾಗಿ ಕಿತ್ತುಕೊಳ್ಳಲಾಗುತ್ತಿದೆ ಎಂಬ ಅಸಮಾಧಾನ ವ್ಯಾಪಕವಾಗಿದೆ. ಕೇರಳದಲ್ಲಿ ‘ಓಣಂ ಹಬ್ಬ’ವನ್ನು ‘ವಾಮನ ಜಯಂತಿ’ಯಾಗಿ ಪರಿವರ್ತಿಸುವ ಹುನ್ನಾರ, ದಕ್ಷಿಣ ಭಾರತೀಯರ ಕುರಿತಂತೆ ಬಿಜೆಪಿ ಮುಖಂಡರ ವರ್ಣಾಧಾರಿತ ಹೇಳಿಕೆ, ಪೆರಿಯಾರ್ ಕುರಿತಂತೆ ಅಸಹನೆ, ಲಿಂಗಾಯತ ಧರ್ಮದ ಬಗ್ಗೆ ದ್ವೇಷ ಇವೆಲ್ಲವೂ ಉತ್ತರ ಮತ್ತು ದಕ್ಷಿಣದ ನಡುವಿನ ಬಂಧವನ್ನು ದುರ್ಬಲಗೊಳಿಸುತ್ತಿದೆ. ಇಡೀ ದೇಶದ ಅಧಿಕಾರ ಉತ್ತರ ಭಾರತೀಯರ ಕೈಯಲ್ಲಿರಬೇಕು ಎನ್ನುವ ಮನಸ್ಥಿತಿಯೊಂದು ದಿಲ್ಲಿಯಲ್ಲಿ ಕುಳಿತು ಕೆಲಸ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಹಿಂದಿಯನ್ನು ದಕ್ಷಿಣ ಭಾರತೀಯರ ಮೇಲೆ ಬೇರೆ ಬೇರೆ ರೂಪಗಳಲ್ಲಿ ಹೇರುವ ಪ್ರಯತ್ನ ನಡೆಯುತ್ತಿದೆ.

ಇವೆಲ್ಲದರ ಪರಿಣಾಮವಾಗಿ ಎಲ್ಲ ರಾಜ್ಯಗಳೂ ಒಂದು ರೀತಿಯ ಅಭದ್ರತೆಯ ಭಾವನೆಯನ್ನು ಹೊಂದುತ್ತಿವೆ. ಅವುಗಳು ತಮ್ಮ ತಮ್ಮ ಐಡೆಂಟಿಟಿಯನ್ನು, ಅಸ್ಮಿತೆಯನ್ನು ಪ್ರದರ್ಶಿಸುವ, ಕಾಯ್ದುಕೊಳ್ಳುವ ಅನಿವಾರ್ಯಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಕನ್ನಡದ ಅಸ್ತಿತ್ವದ ಮೇಲೆ ಬೇರೆ ಬೇರೆ ರೀತಿಯಲ್ಲಿ ದಾಳಿಗಳು ನಡೆಯುತ್ತಿವೆ. ಹಿಂದಿ ಹೇರಿಕೆ, ಉತ್ತರ ಭಾರತೀಯ ಸಂಸ್ಕೃತಿಯ ಹೇರಿಕೆ, ನೆಲ, ಜಲದ ವಿಷಯದಲ್ಲಿ ಅನ್ಯಾಯ ಇವೆಲ್ಲವೂ ಕನ್ನಡಿಗರೊಳಗೆ ಆತಂಕವನ್ನು ಬಿತ್ತಿದೆ. ಈ ಹಿನ್ನೆಲೆಯಲ್ಲಿಯೇ ಕನ್ನಡದ ಧ್ವಜದ ಅಡಿಯಲ್ಲಿ ಭಾಷೆ, ನೆಲ, ಜಲದ ಹಿತಾಸಕ್ತಿಯನ್ನು ಕಾಪಾಡಲು ಜನರು ಒಂದಾಗಿದ್ದಾರೆ. ಕರ್ನಾಟಕದ ಬಾವುಟಕ್ಕೆ ಅನುಮತಿ ದೊರಕಿದರೆ, ಜಮ್ಮು ಕಾಶ್ಮೀರದ ಬಳಿಕ ಪ್ರತ್ಯೇಕ ನಾಡಧ್ವಜ ಹೊಂದಿರುವ ಎರಡನೇ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯ ಗಳೂ ತಮ್ಮ ತಮ್ಮ ಬಾವುಟಗಳಡಿಯಲ್ಲಿ ಒಂದಾಗುವುದಕ್ಕೆ ಕನ್ನಡ ಧ್ವಜ ಸ್ಫೂರ್ತಿಯಾಗಲಿದೆೆ. ನಾಡ ಧ್ವಜ ಒಂದು ಸಂಕೇತ ಮಾತ್ರ. ಈ ಧ್ವಜದ ಮೂಲಕ ನಾವು ಕನ್ನಡ ನಾಡು, ನುಡಿಯ ವೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ.

ಶ್ರೇಷ್ಠ ಕವಿಗಳು, ದಾಸರು, ಶರಣರು, ಸೂಫಿ ಸಂತರು ಆಗಿ ಹೋದ ನೆಲ ನಮ್ಮದು. ಭಾಷೆಯೆಂದರೆ ಕೇವಲ ಕನ್ನಡ ವರ್ಣಮಾಲೆಯಷ್ಟೇ ಅಲ್ಲ. ನಮ್ಮ ಪರಂಪರೆಯನ್ನು ನಮ್ಮ ಭಾಷೆ ಎತ್ತಿ ಹಿಡಿಯಬೇಕು. ಕನ್ನಡದ ಸೌಹಾರ್ದ ವೌಲ್ಯಗಳನ್ನು ನಮ್ಮ ಭಾಷೆಯ ಮೂಲಕ ಹರಡುವಂತಾಗಬೇಕು. ನಮ್ಮ ನೆ, ಜಲ ವಿಷಯಗಳಲ್ಲಿ ಎಲ್ಲ ಜನರೂ ಜಾತಿ, ಧರ್ಮ, ಪಕ್ಷ ಭೇದಗಳನ್ನು ಮರೆತು ಕನ್ನಡದ ಧ್ವಜದ ಅಡಿಯಲ್ಲಿ ಒಂದಾಗಬೇಕು. ಆಗ ಮಾತ್ರ ಕನ್ನಡ ಧ್ವಜ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುತ್ತದೆ. ಕರ್ನಾಟಕದ ಹಿತಾಸಕ್ತಿ ರಕ್ಷಣೆ ಬೇರೆಯಲ್ಲ, ಭಾರತದ ಹಿತಾಸಕ್ತಿಯ ರಕ್ಷಣೆ ಬೇರೆಯಲ್ಲ ಎಂಬ ಧ್ಯೇಯದೊಂದಿಗೆ ಕನ್ನಡ ಧ್ವಜವನ್ನು ಹಿಡಿದುಕೊಂಡು ಅಭಿವೃದ್ಧಿಯ ಕಡೆಗೆ ನಾಡು ಮುನ್ನಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೇಂದ್ರ ಸರಕಾರ ಆದಷ್ಟು ಬೇಗ ಕನ್ನಡ ಧ್ವಜಕ್ಕೆ ಮಾನ್ಯತೆಯನ್ನು ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News