ಬ್ರಿಟನ್: ಪೇಟ ಧರಿಸಿದ ಸಿಖ್ ವಿದ್ಯಾರ್ಥಿಯನ್ನು ಹೊರದಬ್ಬಿದ ಬಾರ್
Update: 2018-03-11 22:26 IST
ಲಂಡನ್, ಮಾ. 11: ಬ್ರಿಟನ್‌ನಲ್ಲಿರುವ ಸಿಖ್ ಕಾನೂನು ವಿದ್ಯಾರ್ಥಿಯೊಬ್ಬರನ್ನು ಪೇಟ ಧರಿಸಿದ ಕಾರಣಕ್ಕಾಗಿ ಬಾರ್‌ನಿಂದ ಹೊರದಬ್ಬಿದ ಘಟನೆಯೊಂದು ವರದಿಯಾಗಿದೆ.
ಧಾರ್ಮಿಕ ಪೇಟವನ್ನು ಧರಿಸಿದ ಕಾರಣಕ್ಕಾಗಿ ಶನಿವಾರ ನಾಟಿಂಗ್‌ಹ್ಯಾಮ್‌ಶಯರ್‌ನ ಮ್ಯಾನ್ಸ್‌ಫೀಲ್ಡ್‌ನಲ್ಲಿರುವ ‘ರಶ್ ಲೇಟ್ ಬಾರ್’ನಿಂದ ಹೊರಹೋಗುವಂತೆ ತನಗೆ ಆದೇಶ ನೀಡಲಾಯಿತು ಎಂದು 22 ವರ್ಷದ ಆಮ್ರಿಕ್ ಸಿಂಗ್ ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
‘ತಲೆವಸ್ತ್ರ ಧರಿಸಬಾರದು’ ಎನ್ನುವ ನಿಯಮ ಬಾರ್‌ನಲ್ಲಿದೆ ಎಂದು ತನಗೆ ಹೇಳಲಾಯಿತು ಎಂದು ಅವರು ಹೇಳಿದರು.
‘‘ಪೇಟವು ನನ್ನ ಕೂದಲನ್ನು ರಕ್ಷಿಸುತ್ತದೆ ಹಾಗೂ ಅದು ನನ್ನ ಧರ್ಮದ ಒಂದು ಭಾಗವಾಗಿದೆ ಎಂದು ನನ್ನತ್ತ ಬಂದ ಓರ್ವ ಬೌನ್ಸರ್‌ಗೆ ವಿವರಿಸಲು ಪ್ರಯತ್ನಿಸಿದೆ. ಆದರೆ, ನನ್ನ ಮನವಿಯನ್ನು ತಿರಸ್ಕರಿಸಲಾಯಿತು. ನನ್ನನ್ನು ನನ್ನ ಸ್ನೇಹಿತರಿಂದ ಬೇರ್ಪಡಿಸಿ ಎಳೆದು ಹೊರಗೆ ಹಾಕಿದರು’’ ಎಂದು ಸಿಂಗ್ ಹೇಳಿದರು.