ಐರೋಪ್ಯ ಒಕ್ಕೂಟದ ಕಾರುಗಳ ಮೇಲೂ ತೆರಿಗೆ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

Update: 2018-03-11 17:07 GMT

ವಾಶಿಂಗ್ಟನ್, ಮಾ. 11: ಅಲ್ಯುಮಿನಿಯಂ ಮತ್ತು ಉಕ್ಕು ಆಮದಿನ ಮೇಲೆ ಅಮೆರಿಕ ಭಾರೀ ಆಮದು ಸುಂಕ ವಿಧಿಸಿರುವುದಕ್ಕೆ ಐರೋಪ್ಯ ಒಕ್ಕೂಟ ಪ್ರತೀಕಾರ ತೀರಿಸಲು ಮುಂದಾದರೆ, ಯುರೋಪ್‌ನ ಕಾರುಗಳಿಗೂ ಭಾರಿ ಪ್ರಮಾಣದಲ್ಲಿ ಆಮದು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಕಳೆದ ವಾರ ಟ್ರಂಪ್ ಉಕ್ಕು ಆಮದಿನ ಮೇಲೆ 25 ಶೇ. ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ 10 ಶೇ. ಸುಂಕ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಈ ಕ್ರಮಕ್ಕೆ ಸ್ವತಃ ಅವರ ಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದರು. ಇದು ಚೀನಾ ಮತ್ತು ಯುರೋಪ್‌ನೊಂದಿಗೆ ಸಂಭಾವ್ಯ ವ್ಯಾಪಾರ ಸಮರಕ್ಕೆ ನಾಂದಿ ಹಾಡಬಹುದಾಗಿದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು.

ಆಮದು ಸುಂಕದ ಪ್ರಸ್ತಾಪವನ್ನು ಅಮೆರಿಕ ಮುಂದಿಟ್ಟಾಗಲೇ, ಅದರ ವಿರುದ್ಧ ಪ್ರತೀಕಾರಾತ್ಮಿಕ ಕ್ರಮಗಳ ಸರಮಾಲೆಯನ್ನೇ ತೆಗೆದುಕೊಳ್ಳುವುದಾಗಿ ಐರೋಪ್ಯ ಒಕ್ಕೂಟ ಎಚ್ಚರಿಸಿರುವುದನ್ನು ಸ್ಮರಿಸಬಹುದಾಗಿದೆ.

ಅಲ್ಯುಮಿನಿಯಂ ಮತ್ತು ಉಕ್ಕು ಆಮದಿನ ಮೇಲಿನ ಸುಂಕಕ್ಕೆ ಪ್ರತಿಯಾಗಿ, ಹ್ಯಾರ್ಲೆ ಡೇವಿಡ್ಸನ್ ಮೋಟರ್‌ಸೈಕಲ್‌ಗಳು, ಬೋರ್ಬನ್ ಮತ್ತು ಬ್ಲೂ ಜೀನ್ಸ್‌ಗಳ ಮೇಲೆ ಐರೋಪ್ಯ ಒಕ್ಕೂಟ ಆಮದು ಸುಂಕ ವಿಧಿಸಿದರೆ, ಯುರೋಪ್‌ನಲ್ಲಿ ತಯಾರಾಗುವ ಕಾರುಗಳ ಮೇಲೂ ತಾನು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News