ಜಪಾನ್ ಭೂಕಂಪ, ಸುನಾಮಿಗೆ 7 ವರ್ಷ ಪೂರ್ಣ
ಟೋಕಿಯೊ, ಮಾ. 11: ಜಪಾನ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ ಮತ್ತು ಸುನಾಮಿಗೆ ರವಿವಾರ (ಮಾರ್ಚ್ 11) 7 ವರ್ಷಗಳು ತುಂಬಿದವು. ಇತಿಹಾಸದ ಭೀಕರ ಪ್ರಾಕೃತಿಕ ವಿಕೋಪಗಳ ಪೈಕಿ ಒಂದಾಗಿರುವ ಅಂದಿನ ಘಟನೆಯಲ್ಲಿ 18,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೂ ಅಲ್ಲದೆ, ಫುಕುಶಿಮ ಪರಮಾಣು ವಿದ್ಯುತ್ ಸ್ಥಾವರದಲ್ಲಿ ವಿಕರಣ ಸೋರಿಕೆಯಾಗಿತ್ತು.
ಮಧ್ಯಾಹ್ನ 2:46ಕ್ಕೆ ಸೈರನ್‌ಗಳು ಮೊಳಗಿದಾಗ ಜಪಾನ್‌ನ ಕರಾವಳಿ ನಗರಗಳು ಮತ್ತು ಪಟ್ಟಣಗಳ ಜನರು ರವಿವಾರ ಒಂದು ನಿಮಿಷದ ವೌನ ಆಚರಿಸಿದರು. 2011 ಮಾರ್ಚ್ 11ರಂದು ಇದೇ ಸಮಯದಲ್ಲಿ ಜಪಾನ್ ಕರಾವಳಿಯ ಸಮುದ್ರದಲ್ಲಿ ರಿಕ್ಟರ್ ಮಾಪಕದಲ್ಲಿ 9ರ ಅಗಾಧ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದರಿಂದಾಗಿ ಹುಟ್ಟಿಕೊಂಡ ಬೃಹತ್ ಸುನಾಮಿ ಅಲೆಗಳು ಸಮುದ್ರ ಗೋಡೆಗಳನ್ನು ಕೆಡವಿ ಕಟ್ಟಡಗಳು, ಕಾರುಗಳು ಮತ್ತು ಇಡೀ ಗ್ರಾಮಗಳನ್ನೇ ಕೊಚ್ಚಿಕೊಂಡು ಹೋದವು.
ಟೋಕಿಯೊದಲ್ಲಿ ನಡೆದ ಅಧಿಕೃತ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಶಿಂರೊ ಅಬೆ, ಪುನರ್ನಿರ್ಮಾಣವು ನಿರಂತರವಾಗಿ ನಡೆಯುತ್ತಿದೆ ಎಂದರು. 70,000ಕ್ಕೂ ಅಧಿಕ ಮಂದಿ ಈಗಲೂ ತಮ್ಮ ಊರುಗಳಿಂದ ನಿರ್ವಸಿತರಾಗಿದ್ದಾರೆ ಹಾಗೂ ಅವರ ಪೈಕಿ ಹೆಚ್ಚಿನವರಿಗೆ ತಮ್ಮ ಮನೆಗಳಿಗೆ ಹಿಂದಿರುಗಲು ಎಂದಿಗೂ ಸಾಧ್ಯವಾಗುವುದಿಲ್ಲ ಎಂದರು.
ಈಗಲೂ ವಿಕಿರಣ ಹೊರಸೂಸುತ್ತಿರುವ ಸ್ಥಾವರ
ಭೂಕಂಪ ಮತ್ತು ಸುನಾಮಿ ಅಲೆಗಳ ದಾಳಿಯಿಂದಾಗಿ ತೀವ್ರವಾಗಿ ಜರ್ಝರಿತಗೊಂಡಿರುವ ಫುಕುಶಿಮ ಅಣು ವಿದ್ಯುತ್ ಸ್ಥಾವರದಲ್ಲಿ ಈಗಲೂ ವಿಕಿರಣ ಸೋರಿಕೆಯಾಗುತ್ತಿದೆ. ಹಾಗಾಗಿ, ಅದನ್ನು ದುರಸ್ತಿಪಡಿಸುವುದು ಅಗಾಧ ಸಾಹಸದ ಕೆಲಸವಾಗಿದೆ ಎಂದು ಜಪಾನ್ ಪ್ರಧಾನಿ ಶಿಂರೊ ಅಬೆ ಹೇಳಿದರು.
ಸ್ಥಾವರವನ್ನು ಸರಿಪಡಿಸುವ ಕಾರ್ಯ ಪೂರ್ಣಗೊಳ್ಳಲು ದಶಕಗಳೇ ಬೇಕಾಗಬಹುದು ಎಂದರು.