ಗೋವಾ: 35 ಮಂದಿಗೆ ಮಂಗನಕಾಯಿಲೆ ಸೋಂಕು

Update: 2018-03-11 17:23 GMT

ಪಣಜಿ, ಮಾ.11: ಮಂಗನಕಾಯಿಲೆ ಎಂದೇ ಕರೆಯಲಾಗುವ ‘ಕ್ಯಾಸನೂರ್ ಫಾರೆಸ್ಟ್ ಡಿಸೀಸ್’ (ಕೆಎಫ್‌ಡಿ) ಗೋವಾದಲ್ಲಿ ತೀವ್ರವಾಗಿ ಹಬ್ಬುತ್ತಿದ್ದು ಕನಿಷ್ಟ 35 ಮಂದಿ ಕಾಯಿಲೆ ಬಾಧಿತರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಗೋವಾದ ಸತ್ತರಿ ತಾಲೂಕಿನಲ್ಲಿ ಈ ಹಿಂದೆಯೂ ಮಂಗನಕಾಯಿಲೆ ಹಬ್ಬಿದ್ದು 2016ರಲ್ಲಿ ಮೂವರು ಮೃತಪಟ್ಟಿದ್ದರೆ, 2015ರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ. ಈ ವರ್ಷವೂ ಮಂಗನಕಾಯಿಲೆ ಸೋಂಕಿಗೆ ಒಳಗಾದ 35 ಮಂದಿಯೂ ಸತ್ತರಿ ತಾಲೂಕಿನ ನಿವಾಸಿಗಳು. ಇವರಲ್ಲಿ ಬಹುತೇಕ ಮಂದಿ ಸನ್‌ವೋರ್ಡರ್ಮ್ ಪಂಚಾಯತ್ ವ್ಯಾಪ್ತಿಯವರು. ಸೋಂಕು ಬಾಧಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗಿದೆ ಎಂದು ವಾಲ್‌ಪೋಯ್ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

 1957ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಅರಣ್ಯದಲ್ಲಿ ಪತ್ತೆಯಾದ ಈ ಕಾಯಿಲೆಗೆ ಕ್ಯಾಸನೂರು ಕಾಯಿಲೆ ಎಂದೇ ಹೆಸರಿಡಲಾಗಿದೆ. ಸಾಮಾನ್ಯವಾಗಿ ಈ ಕಾಯಿಲೆ ಹಬ್ಬುವ ವೈರಸ್‌ಗಳು ಮಂಗಗಳ ಮೈಮೇಲಿರುವ ಹೇನುಗಳ ಮೂಲಕ ಮಾನವನ ದೇಹವನ್ನು ಪ್ರವೇಶಿಸುವ ಕಾರಣ ಸ್ಥಳೀಯ ಭಾಷೆಯಲ್ಲಿ ಇದನ್ನು ಮಂಗನಕಾಯಿಲೆ ಎನ್ನಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News