ಮತದಾರರ ಐಡಿ ಆಧಾರ್ ಜೊತೆ ಜೋಡಣೆ ಕಡ್ಡಾಯಕ್ಕೆ ಮನವಿ
ಹೊಸದಿಲ್ಲಿ, ಮಾ.11: ಮತದಾರರ ಗುರುತು ಪತ್ರವನ್ನು ಆಧಾರ್ ಜೊತೆ ಸಂಪರ್ಕಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಕೋರಿ ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದೆ.
ಈ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದ ಚುನಾವಣಾ ಆಯೋಗ, ಆಧಾರ್ ಜೊತೆ ಮತದಾರರ ಗುರುತು ಪತ್ರವನ್ನು ಜೋಡಿಸುವುದನ್ನು ಐಚ್ಛಿಕಗೊಳಿಸಬೇಕು. ಇದು ಕಡ್ಡಾಯವಾಗಿರಬಾರದು ಎಂದು ಮನವಿ ಮಾಡಿತ್ತು. ಮತದಾರರ ಗುರುತು ಪತ್ರವನ್ನು ಆಧಾರ್ ಜೊತೆ ಸಂಪರ್ಕಿಸುವ ಪ್ರಕ್ರಿಯೆಗೆ 2015ರ ಫೆಬ್ರವರಿಯಲ್ಲಿ ಚಾಲನೆ ದೊರೆತಿತ್ತು. 2015ರ ಫೆ.27ರಂದು ‘ರಾಷ್ಟ್ರೀಯ ಮತದಾರರ ಪಟ್ಟಿಯನ್ನು ಶುದ್ಧೀಕರಣಗೊಳಿಸುವ ಹಾಗೂ ದೃಢೀಕರಣಗೊಳಿಸುವ ಕಾರ್ಯಕ್ರಮ(ಎನ್‌ಇಆರ್‌ಪಿಎಪಿ)ದ ಅನ್ವಯ ಗುರುತು ಪತ್ರ ಹಾಗೂ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆಗೆ ಮಾರ್ಗದರ್ಶಿ ಸೂತ್ರವನ್ನು ಚುನಾವಣಾ ಆಯೋಗ ಜಾರಿಗೊಳಿಸಿತ್ತು. ಆದರೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆಯನ್ನು ಸರಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆ, ಎಲ್‌ಪಿಜಿ, ಸೀಮೆ ಎಣ್ಣೆ ವಿತರಿಸುವ ಯೋಜನೆಗಳಿಗೆ ಮಾತ್ರ ಸೀಮಿತಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಈ ಮಾರ್ಗದರ್ಶಿ ಸೂತ್ರವನ್ನು ರದ್ದುಗೊಳಿಸಿತ್ತು. ಅದುವರೆಗೆ 38 ಕೋಟಿ ಮತದಾರರ ಗುರುತುಪತ್ರವನ್ನು ಆಧಾರ್ ಜೊತೆ ಸಂಪರ್ಕಿಸಲಾಗಿತ್ತು. 2017ರ ಜುಲೈ 4ರಂದು ನಸೀಮ್ ಝೈದಿ ನೇತೃತ್ವದಲ್ಲಿ ಚುನಾವಣಾ ಆಯೋಗವು ಪ್ರಕ್ರಿಯೆಯನ್ನು ಪುನರಾರಂಭಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಈ ಸಂದರ್ಭ, ಈ ಪ್ರಕ್ರಿಯೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಅಲ್ಲದೆ ಮತದಾರರ ಗುರುತುಪತ್ರವನ್ನು ಆಧಾರ್ ಜೊತೆ ಸಂಪರ್ಕಿಸದ ಮತದಾರರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿತ್ತು. ಆದರೆ ಇದೀಗ ಅಚಲ್ ಕುಮಾರ್ ಜೋತಿ ಆಯೋಗದ ಮುಖ್ಯಸ್ಥರಾದ ಬಳಿಕ ಆಯೋಗದ ನಿಲುವು ಬದಲಾಗಿದೆ. ಆಧಾರ್ ಜೊತೆ ಮತದಾರರ ಗುರುತುಪತ್ರದ ಜೋಡಣೆ ಕಡ್ಡಾಯ ಎಂದು ಆಯೋಗ ತಿಳಿಸಿದೆ. ಆದರೆ ಚುನಾವಣಾ ಪಟ್ಟಿಯಲ್ಲಿ ಈಗಾಗಲೇ ಹೆಸರು ನೋಂದಾಯಿಸಿದ್ದರೂ ಆಧಾರ್ ಕಾರ್ಡ್ ಹೊಂದಿರದವರಿಗೆ ಈ ನಿಯಮದಿಂದ ಏನೂ ಸಮಸ್ಯೆಯಿಲ್ಲ. ಅವರು ಮತ ಚಲಾಯಿಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.