ಮಾನವೀಯತೆಯ ಸೋಲಿಗೆ ‘ದಯಾ ಮರಣ’ವೆಂಬ ಹೆಸರು

Update: 2018-03-12 04:39 GMT

ಭಾರತದಲ್ಲಿ ಬಹು ಸಮಯದಿಂದ ಚರ್ಚೆಯಲ್ಲಿದ್ದ ‘ದಯಾ ಮರಣ’ಕ್ಕೆ ಕೊನೆಗೂ ಸಮ್ಮತಿ ದೊರಕಿದೆ. ಮಾರಣಾಂತಿಕ ರೋಗದಿಂದ ನರಳುತ್ತಿರುವವರು ಮತ್ತು ಪುನಃಶ್ಚೇತನಗೊಳ್ಳದೆ ಕೋಮಾಸ್ಥಿತಿಯಲ್ಲಿರುವವರಿಗೆ ಅಳವಡಿಸಿದ ಜೀವರಕ್ಷಕ ಉಪಕರಣಗಳನ್ನು ತೆಗೆಯಲು ಅದು ಹಸಿರು ನಿಶಾನೆ ತೋರಿಸಿದೆ. ರೋಗಿಗಳು ದಯಾಮರಣವನ್ನು ಕೋರಿ ಉಯಿಲು ಬರೆದಿಟ್ಟಿದ್ದರೆ ಅಥವಾ ಪೂರ್ವ ನಿರ್ದೇಶನ ನೀಡಿದ್ದರೆ ಅಂಥವರಿಗೆ ದಯಾಮರಣಕ್ಕೆ ನ್ಯಾಯಾಲಯ ಅನುಮತಿ ನೀಡಿದೆ. ಜೊತೆಗೆ ಈ ಕುರಿತಂತೆ ಮಾರ್ಗಸೂಚಿಗಳನ್ನೂ ಶಿಫಾರಸು ಮಾಡಿದೆ. ದಯೆ ಮತ್ತು ಮರಣ ಎರಡೂ ಪರಸ್ಪರ ವಿರುದ್ಧಾರ್ಥಗಳನ್ನು ನೀಡುವ ಪದಗಳು. ದಯೆಯ ಜೊತೆಗೆ ‘ಬದುಕು’ ಮಾತ್ರ ಹೊಂದಿಕೆಯಾಗುತ್ತದೆ. ಸದ್ಯಕ್ಕೆ ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಸಾವುಗಳು ಬೇರೆ ಬೇರೆ ಹೆಸರಿನಲ್ಲಿ ವಿಜೃಂಭಿಸುತ್ತಿವೆ. ಧರ್ಮ ರಕ್ಷಣೆ, ಭಯೋತ್ಪಾದನೆ ನಿಗ್ರಹ, ಶಾಂತಿ ಸ್ಥಾಪನೆ, ದೇಶ ರಕ್ಷಣೆ ಹೀಗೆ ಬಗೆ ಬಗೆಯ ಸಮರ್ಥನೆಗಳ ಮೂಲಕ ಅಮಾಯಕರನ್ನು ಕೊಲ್ಲುತ್ತಾ ಬರಲಾಗುತ್ತಿದೆ. ಕೊಲ್ಲುವುದಕ್ಕೆ ಸಾವಿರ ನೆಪಗಳು, ಸಾವಿರ ದಾರಿಗಳು. ‘ದಯಾ ಮರಣ’ ತುಸು ಭಿನ್ನವಾದುದು. ಇಲ್ಲಿ, ಓರ್ವ ಸಂತ್ರಸ್ತನೇ ಮರಣವನ್ನು ಬೇಡಿ ಪಡೆದುಕೊಳ್ಳುವಂತಹದ್ದು. ಬದುಕಿಗಿಂತ ಮರಣವೇ ಒಳಿತು ಎಂದು ತೀರ್ಮಾನಕ್ಕೆ ಬಂದವರಿಗೆ ನಾಗರಿಕ ಸಮಾಜ ಮಾಡುವ ಮಹದುಪಕಾರ ‘ದಯಾ ಮರಣ’

 ಇತ್ತೀಚೆಗೆ ನಮ್ಮದೇ ದೇಶದಲ್ಲಿ ವೃದ್ಧ ದಂಪತಿ ರಾಷ್ಟ್ರಪತಿಗೆ ‘ದಯಾ ಮರಣ’ದ ಅರ್ಜಿಯನ್ನು ಸಲ್ಲಿಸಿದ್ದರು. ಅಂದಹಾಗೆ ಅವರು ಯಾವುದೇ ಮಾರಕ ರೋಗಗಳಿಂದ ನರಳುತ್ತಿರಲಿಲ್ಲ. ಅವರನ್ನು ಕುಟುಂಬ ಸದಸ್ಯರು ಬೀದಿ ಪಾಲಾಗಿಸಿದ್ದರು. ಬದುಕುವುದಕ್ಕೆ ಅವರಿಗೆ ಯಾವುದೇ ಆಸರೆಯಿರಲಿಲ್ಲ. ಆತ್ಮಹತ್ಯೆ ಅಪರಾಧವಾಗಿರುವುದರಿಂದ, ನಮಗೆ ದಯಾ ಮರಣವನ್ನು ದಯಪಾಲಿಸಿ ಎಂದು ಅವರು ಸರಕಾರಕ್ಕೆ ಮನವಿ ಮಾಡಿದ್ದರು. ‘ದಯಾ ಮರಣ’ ಹೇಗೆ ಮಾನವೀಯತೆಯ ಸೋಲು ಕೂಡ ಆಗಿರಬಹುದು ಎನ್ನುವುದಕ್ಕೆ ಮೇಲಿನ ಮನವಿಯೇ ಉದಾಹರಣೆ. ಈ ದಂಪತಿಯ ಬದುಕು ನರಕಸದೃಶವಾಗಿತ್ತು. ಆದರೆ ಅದಕ್ಕೆ ಪರಿಹಾರ ಖಂಡಿತವಾಗಿಯೂ ಮರಣ ಅಲ್ಲ. ಅವರನ್ನು ಬೀದಿ ಪಾಲಾಗಿಸಿದವರೊಳಗೆ ಮಾನವೀಯತೆಯನ್ನು ಬಿತ್ತುವುದೇ ಸಮಸ್ಯೆಗೆ ಪರಿಹಾರ. ಇದನ್ನು ನಾವು ರೋಗಿಗಳಿಗೂ ಅನ್ವಯಿಸಬಹುದು.

‘ಸಾವೇ ಒಳ್ಳೆಯದು’ ಎಂದು ರೋಗಿಗಳು ಬಯಸುವ ಅತ್ಯಂತ ವೇದನಾದಾಯಕ ರೋಗವೆಂದರೆ ಕ್ಯಾನ್ಸರ್. ಸಾವು ಎದುರುಗಡೆ ಬಂದು ನಿಂತಿದೆ. ಗುಣಮುಖರಾಗುವ ಯಾವ ಸಾಧ್ಯತೆಗಳೂ ಇಲ್ಲ. ಜೊತೆಗೆ ಮಾರಣಾಂತಿಕ ವೇದನೆ. ಹೇಗೂ ಸಾಯುವವರಾಗಿರುವ ಕಾರಣ ಅವರಿಗೆ ಮರಣವನ್ನು ನಾವು ದಯೆಯ ರೂಪದಲ್ಲಿ ನೀಡಬಹುದೇ? ಇದು ಚರ್ಚೆಗೆ ಅರ್ಹವಾಗಿರುವ ಮತ್ತು ನಮ್ಮ ಮಾನವೀಯತೆಗೆ ಸವಾಲು ಹಾಕುವಂತಹ ಪ್ರಶ್ನೆಯಾಗಿದೆ. ಕ್ಯಾನ್ಸರ್‌ಗೆ ಔಷಧಿಗಳಿವೆ. ಆದರೆ ಆ ಔಷಧಿಗಳು ಮತ್ತು ನೋವು ನಿವಾರಕಗಳು ತೀರಾ ದುಬಾರಿ. ಈ ಕಾರಣದಿಂದಲೇ ಬಹುತೇಕ ಕ್ಯಾನ್ಸರ್ ರೋಗಿಗಳು ಮರಣವನ್ನು ಅಪೇಕ್ಷಿಸುತ್ತಾರೆ. ಇಲ್ಲಿ ನಾಗರಿಕ ಸಮಾಜದ ಹೊಣೆಗಾರಿಕೆ ಏನೆಂದರೆ, ಆ ಕ್ಯಾನ್ಸರ್ ಔಷಧಿಗಳನ್ನು ಅಗ್ಗದ ದರದಲ್ಲಿ ದೊರಕುವಂತೆ ಮಾಡುವುದು ಅಥವಾ ರೋಗಿಗಳಿಗೆ ಔಷಧಿಗಳನ್ನು ಒದಗಿಸಿ ಕೊಡಲು ಆರ್ಥಿಕ ನೆರವು ನೀಡುವುದು. ಇಂದು ವಿವಿಧ ಕಂಪೆನಿಗಳ ಸ್ವಾರ್ಥ, ದುರಾಸೆಯ ಕಾರಣದಿಂದ ಈ ಔಷಧಿಗಳು ದುಬಾರಿಯಾಗಿವೆ. ರೋಗಿಗಳಿಗೆ ಔಷಧಿಗಳನ್ನು ಒದಗಿಸಲಾಗದ ನಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಮರಣಕ್ಕೆ ದಯೆಯ ಮುಖವಾಡ ತೊಡಿಸಲು ನಾವಿಂದು ಮುಂದಾಗಿದ್ದೇವೆ.

ದಯಾಮರಣದ ಮೂಲಕ ನಾವು ಕೊಲೆ ಮಾಡುವುದು ಓರ್ವ ರೋಗಿಯನ್ನು ಮಾತ್ರ ಅಲ್ಲ, ಮಾನವೀಯ ವೌಲ್ಯಗಳನ್ನು ಕೂಡ. ಅರುಣಾ ಶಾನುಭಾಗರ ಬದುಕು ‘ದಯಾ ಮರಣ’ ಬೇಕೋ ಬೇಡವೋ ಎನ್ನುವ ಚರ್ಚೆಗೆ ತೀವ್ರತೆಯನ್ನು ನೀಡಿತು. ದುಷ್ಕರ್ಮಿಯೊಬ್ಬನ ಅಮಾನವೀಯ ಕೃತ್ಯದಿಂದ ಕೋಮಾಕ್ಕೆ ತಲುಪಿದ ಅರುಣಾ, ಹಲವು ದಶಕಗಳ ಕಾಲ ಅತ್ತ ಸಾಯದೆ, ಇತ್ತ ಬದುಕದೇ ಅತಂತ್ರವಾಗಿ ಜೀವನವನ್ನು ಕಳೆದಿದ್ದರು. ಆದರೆ ಈ ಸಂದರ್ಭದಲ್ಲಿ ಆಕೆಯನ್ನು ತಾಯಿಯಂತೆ ಹಲವು ವರ್ಷಗಳ ಕಾಲ ಜೋಪಾನ ಮಾಡಿದ ಆಸ್ಪತ್ರೆಯ ದಾದಿಯರು ಆ ಮೂಲಕ ಮಾನವ ಘನತೆಯನ್ನು ಎತ್ತಿ ಹಿಡಿದರು. ಒಂದು ವೇಳೆ ದಯಾಮರಣ ಕಾನೂನು ಜಾರಿಯಲ್ಲಿದ್ದಿದ್ದರೆ ಕೋಮಾ ತಲುಪಿದ ಒಂದೇ ವರ್ಷದಲ್ಲಿ ಆಕೆಯನ್ನು ಕೊಂದು ಹಾಕುತ್ತಿದ್ದರೇನೋ. ಅರುಣಾ ಅವರ ಕೋಮಾವಸ್ಥೆ, ಮಾನವೀಯತೆಯ ಕೋಮಾವಸ್ಥೆಗೆ ಹಾಕಿದ ಸವಾಲಾಗಿತ್ತು. ದಾದಿಯರು ಆಕೆಯ ಬದುಕಿನ ಕೊನೆಯ ದಿನಗಳವರೆಗೂ ಉಪಚರಿಸಿ ಮನುಷ್ಯತ್ವವನ್ನು ಕೋಮಾದಿಂದ ಹೊರಗೆ ತಂದರು.

ದಯಾಮರಣವನ್ನು ಪೂರ್ಣ ಮನಸ್ಸಿನಿಂದ ಬೆಂಬಲಿಸುವುದೆಂದರೆ ಪರೋಕ್ಷವಾಗಿ ಮನುಷ್ಯ ತನ್ನ ಮಾನವೀಯ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಎಂದೇ ಅರ್ಥ. ಇಂದು ಈ ದೇಶದ ಲಕ್ಷಾಂತರ ವೃದ್ಧರು ತಮ್ಮ ಮಕ್ಕಳ ಬೇಜವಾಬ್ದಾರಿಯಿಂದಾಗಿ ವೃದ್ಧಾಶ್ರಮದಲ್ಲಿ ಅಥವಾ ಬೀದಿಯಲ್ಲಿ ಬದುಕು ಸವೆಸುತ್ತಿದ್ದಾರೆ. ನಾವು ಈ ವೃದ್ಧರನ್ನು ಸಮಸ್ಯೆಯೆಂದು ತಿಳಿದುಕೊಳ್ಳದೆ, ಅವರನ್ನು ಬೀದಿಗೆ ಅಥವಾ ವೃದ್ಧಾಶ್ರಮಕ್ಕೆ ತಳ್ಳಿದ ಕುಟುಂಬವನ್ನು ಸಮಸ್ಯೆಯಾಗಿ ಪರಿಗಣಿಸಬೇಕು ಮತ್ತು ಅದಕ್ಕೆ ಚಿಕಿತ್ಸೆಯನ್ನು ನೀಡಬೇಕು. ರೋಗಗ್ರಸ್ತನಾಗಿ ಜೀವರಕ್ಷಕ ಉಪಕರಣಗಳಲ್ಲಿ ಕುಟುಕು ಜೀವ ಉಳಿಸಿಕೊಂಡಿರುವ ಮನುಷ್ಯತ್ವಕ್ಕೆ ಚಿಕಿತ್ಸೆಯ ಅಗತ್ಯವಿದೆಯೇ ಹೊರತು, ರೋಗ ಪೀಡಿತರಾಗಿ ಮರಣವನ್ನು ಎದುರಿಸುತ್ತಿರುವ ರೋಗಿಗಳಿಗೆ ಮರಣವನ್ನು ದಯಪಾಲಿಸುವುದಲ್ಲ. ತೀರಾ ಅಪರೂಪದ ಪ್ರಕರಣಗಳಲ್ಲಿ ದಯಾಮರಣ ಪ್ರಯೋಜನಕ್ಕೆ ಬರಬಹುದೇನೋ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಇದು ದುರುಪಯೋಗವಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಒಬ್ಬ ತರುಣ ತನ್ನ ವೃದ್ಧ ತಾಯಿಯನ್ನು ಮಹಡಿಯಿಂದ ನೂಕಿ ಕೊಂದು ಹಾಕಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಆತನ ದೃಷ್ಟಿಯಲ್ಲಿ ಅವನು ತಾಯಿಗೆ ನೀಡಿದ್ದು ‘ದಯಾ ಮರಣ’ವೇ ಆಗಿತ್ತು. ಆದರೆ ಕಾನೂನಿಗೆ ವಿರುದ್ಧವಾಗಿತ್ತು. ವೃದ್ಧ ತಾಯಿ, ತಂದೆಯರನ್ನು ಸಾಕಲು ಅಥವಾ ನೋಡಿಕೊಳ್ಳಲು ಹೆಣಗಾಡುವ ಇಂತಹ ಲಕ್ಷಾಂತರ ಜನರು ಈ ದೇಶದಲ್ಲಿದ್ದಾರೆ. ಇವರು ‘ದಯಾ ಮರಣ’ವನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಜೈನ ಧರ್ಮದಲ್ಲಿ ಆಚರಣೆಯಲ್ಲಿರುವ ‘ಸಲ್ಲೇಖನ ವ್ರತ’ವನ್ನು ಕೆಲವರು ದುರಪಯೋಗಪಡಿಸಿಕೊಂಡ ಕುರಿತಂತೆ ಈ ಹಿಂದೆ ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ವೃದ್ಧರನ್ನು ಸಾಕುವ ಹೊಣೆಯಿಂದ ಮುಕ್ತರಾಗಲು ಈ ವ್ರತವನ್ನು ಹೇರಲಾಗುತ್ತಿದ್ದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಇದೀಗ ದಯಾ ಮರಣವೆನ್ನುವುದು ಕೂಡ ಹಾಸಿಗೆ ಹಿಡಿದ ವೃದ್ಧರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಮಾರಕ ರೋಗಗಳು ಆಧುನಿಕ ದಿನಗಳಲ್ಲಿ ಸಹಜವಾಗಿವೆ. ಆದರೆ ಮನುಷ್ಯನೊಳಗೆ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿರುವ ಸ್ವಾರ್ಥ, ಕ್ರೌರ್ಯವೆನ್ನುವ ರೋಗಕ್ಕಿಂತ ಕ್ಯಾನ್ಸರ್‌ನಂತಹ ರೋಗಗಳು ಮಾರಕವೇನೂ ಅಲ್ಲ. ಒಬ್ಬ ಸಾವು ಬದುಕಿನ ನಡುವೆ ಒದ್ದಾಡುತ್ತಿರುವಾಗ ಗರಿಷ್ಠ ಪ್ರಮಾಣದಲ್ಲಿ ಆತನ ಸೇವೆ ಮಾಡಿ, ಆತನಿಗೆ ಬೇಕಾದ ನೆರವುಗಳನ್ನು ನೀಡಿ ಆತನ ಬದುಕನ್ನು ಸಹ್ಯ ಮಾಡಿಕೊಡುವುದು ಮನುಷ್ಯನ ಹೊಣೆಗಾರಿಕೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಎಲ್ಲರೂ ಸಿದ್ಧರಾದಲ್ಲಿ ‘ದಯಾ ಮರಣ’ವೆನ್ನುವ ಪರೋಕ್ಷ ಕೊಲೆಯೊಂದರಲ್ಲಿ ಭಾಗಿಯಾಗುವುದರಿಂದ ನಾವೆಲ್ಲರೂ ಪಾರಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News