ಯುಎಇಯಿಂದ ಹೊರಟಿದ್ದ ವಿಮಾನ ಅಪಘಾತ: 11 ಮಂದಿ ಮೃತ್ಯು

Update: 2018-03-12 04:00 GMT
ಸಾಂದರ್ಭಿಕ ಚಿತ್ರ

ಟೆಹರಾನ್, ಮಾ. 12: ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಇಸ್ತಾಂಬುಲ್‌ಗೆ ಯುವತಿಯರ ತಂಡವನ್ನು ಕರೆದೊಯ್ಯುತ್ತಿದ್ದ ಟರ್ಕಿಯ ಖಾಸಗಿ ಜೆಟ್ ವಿಮಾನವೊಂದು ಇರಾನ್‌ನ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲ 11 ಮಂದಿ ಬಲಿಯಾಗಿದ್ದಾರೆ.

ದುಬೈನಲ್ಲಿ ಬ್ಯಾಚುಲರೆಟ್ ಪಾರ್ಟಿ ಮುಗಿಸಿಕೊಂಡು ಈ ತಂಡ ವಾಪಸ್ಸಾಗುತ್ತಿತ್ತು ಎನ್ನಲಾಗಿದ್ದು, ಇದರಲ್ಲಿ ಇದ್ದವರು ಯಾರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಶೆಹ್ರ್ ಇ-ಕೋಡ್ ಬಳಿ ವಿಮಾನ ಪರ್ವತಕ್ಕೆ ಅಪ್ಪಳಿಸಿ, ಸ್ಫೋಟಗೊಂಡಿತು ಎಂದು ದೇಶದ ತುರ್ತು ನಿರ್ವಹಣಾ ಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ಇರಾನ್‌ನ ಅಧಿಕೃತ ಟೆಲಿವಿಷನ್ ವರದಿ ಮಾಡಿದೆ.

ಝೋಗ್ರೋಸ್ ಪರ್ವತಕ್ಕೆ ಸ್ಥಳೀಯ ಗ್ರಾಮಸ್ಥರು ಧಾವಿಸಿದಾಗ ಭೀಕರವಾಗಿ ಸುಟ್ಟು ಕರಕಲಾಗಿದ್ದ ದೇಹಗಳು ಮಾತ್ರ ಪತ್ತೆಯಾದವು. ಯಾರೂ ಉಳಿದುಕೊಂಡಿಲ್ಲ ಎಂದು ವಕ್ತಾರ ಮೊಜ್ತಾಬಾ ಖಲೇದಿ ಹೇಳಿದ್ದಾರೆ. ಮೃತದೇಹಗಳ ಪತ್ತೆಗೆ ಡಿಎನ್‌ಎ ಪರೀಕ್ಷೆ ಮಾಡಬೇಕಾಗಿದೆ.

ವಿಮಾನ ಸ್ಫೋಟಗೊಳ್ಳುವ ಮುನ್ನ ವಿಮಾನದ ಎಂಜಿನ್‌ನಿಂದ ಬೆಂಕಿ ಕಾಣುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ರವಿವಾರ ಸಂಜೆಯ ವೇಳೆಗೆ ವಿಮಾನ ಟೇಕಾಫ್ ಆಗಿ, 35 ಸಾವಿರ ಅಡಿ ಎತ್ತರಕ್ಕೆ ತಲುಪಿತ್ತು ಎನ್ನಲಾಗಿದೆ. ಒಂದು ಗಂಟೆ ಬಳಿಕ ದಿಢೀರನೇ ತೀರಾ ಎತ್ತರಕ್ಕೆ ಹೋದ ವಿಮಾನ ಕೆಲವೇ ಕ್ಷಣಗಳಲ್ಲಿ ಕೆಳಮಟ್ಟಕ್ಕೆ ಬಂತು ಎಂದು ಫ್ಲೈಟ್‌ರಾಡಾರ್24 ವೆಬ್‌ಸೈಟ್ ವಿವರಿಸಿದೆ.

ಯುಎಇ ನಾಗರಿಕ ವಿಮಾನಯಾನ ಇಲಾಖೆಯ ಮೂಲಗಳ ಪ್ರಕಾರ, ವಿಮಾನ ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಅಪಘಾತಕ್ಕೀಡಾದ ವಿಮಾನ ಬೊಂಬಾರ್ಡಿಯರ್ ಸಿಎಲ್604 ಎಂದು ಟರ್ಕಿಯ ಖಾಸಗಿ ಸುದ್ದಿ ಏಜೆನ್ಸಿ ಡೊಗಾನ್ ಗುರುತಿಸಿದೆ.

ಬಸರನ್ ಹೋಲ್ಡಿಂಗ್ ಎಂಬ ಖಾಸಗಿ ಕಂಪನಿಗೆ ಸೇರಿದ ವಿಮಾನ ಇದಾಗಿದೆ ಎಂದು ಟರ್ಕಿಯ ಸಾರಿಗೆ ಸಚಿವಾಲಯ ಸ್ಪಷ್ಟಪಡಿಸಿದೆ. ಬಸರನ್ ಅಧ್ಯಕ್ಷೆಯ ಪುತ್ರಿ ಮಿನಾ ಬಸರನ್ (28) ಇತ್ತೀಚೆಗೆ ದುಬೈನಲ್ಲಿ ನಡೆದ ಬ್ಯಾಚುಲರೆಟ್ ಪಾರ್ಟಿಯ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News