ರೈತರ ಬೇಡಿಕೆ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ: ಕಿಶಾನ್ ಮಹಾಸಭಾ ಎಚ್ಚರಿಕೆ

Update: 2018-03-12 07:56 GMT

ಮುಂಬೈ, ಮಾ.12: ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನ್ನು ಜಾರಿಗೆ ತರುವಂತೆ ಆಗ್ರಹಿಸಿ ಮಾ.6 ರಂದು ನಾಸಿಕ್‌ನ ಸಿಬಿಎಸ್ ಚೌಕ್‌ನಿಂದ ಬರಿಗಾಲಲ್ಲಿ ಪ್ರತಿಭಟನಾ ರ್ಯಾಲಿಯನ್ನು ಆರಂಭಿಸಿರುವ ಸಾವಿರಾರು ರೈತರ ಬೇಡಿಕೆಗಳನ್ನು ರಾಜ್ಯ ಸರಕಾರ ಕೂಡಲೇ ಈಡೇರಿಸಬೇಕು.ಬೇಡಿಕೆ ಈಡೇರಿಸದಿದ್ದರೆ ಆಝಾದ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕಿಶಾನ್ ಮಹಾಸಭಾದ ಅಜಿತ್ ನವಾಲೆ ಎಚ್ಚರಿಕೆ ನೀಡಿದ್ದಾರೆ.

‘‘ರೈತರ ವಿಷಯವನ್ನು ನಾವು ಸೂಕ್ಷ್ಮ ಹಾಗೂ ಧನ್ಮಾತಕ ರೀತಿಯಲ್ಲಿ ಪರಿಗಣಿಸಿದ್ದೇವೆ’’ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನಿವಿಸ್ ಸದನಕ್ಕೆ ಭರವಸೆ ನೀಡಿದ್ದಾರೆ.

ಇದೇ ವೇಳೆ, ವಿರೋಧ ಪಕ್ಷಗಳ ನಾಯಕ ಧನಂಜಯ ಮುಂಢೆ ಆಝಾದ್ ಮೈದಾನದಲ್ಲಿ ಜಮಾಯಿಸಿರುವ 40,000ಕ್ಕೂ ಅಧಿಕ ರೈತರನ್ನು ಭೇಟಿಯಾಗಿ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

   ಸಿಪಿಐ(ಎಂ)ರೈತ ಸಂಘಟನೆ ಅಖಿಲ ಭಾರತ ಕಿಶಾನ್ ಸಭಾ ಹಾಗೂ ವಿವಿಧ ರೈತ ಸಂಘಟನೆಯ ನೇತೃತ್ವದಲ್ಲಿ ನಾಸಿಕ್‌ನಿಂದ ಸುಮಾರು 180 ಕಿ.ಮೀ.ದೂರ ಪಾದಯಾತ್ರೆಯಲ್ಲಿ ಬಂದಿರುವ ರೈತರ ಮಹಾರ್ಯಾಲಿ ಮುಂಬೈನ ಆಝಾದ್ ಮೈದಾನಕ್ಕೆ ಸೋಮವಾರ ಬೆಳಗ್ಗೆ ಆಗಮಿಸಿದ್ದು, ರೈತರು ಕೆಂಪುಬಾವುಟ ಹಿಡಿದಿರುವ ಕಾರಣ ಇಡೀ ಮೈದಾನ ಕೆಂಪುಬಣ್ಣಗಳಿಂದ ಕಂಗೊಳಿಸುತ್ತಿದೆ.

 ‘‘ಶಾಂತಿಯುತವಾಗಿ ಮೋರ್ಚಾ ನಡೆಸಿರುವ ಬುಡಕಟ್ಟು ಸಮುದಾಯದ ಸಹೋದರರಿಗೆ ನಾನು ಅಭಿನಂದನೆ ಸಲ್ಲಿಸುವೆ. ಮೋರ್ಚಾದಲ್ಲಿ ಭಾಗವಹಿಸಿರುವ 95 ಶೇ.ಜನರು ಅರಣ್ಯ ಭೂಮಿಯ ಹಕ್ಕಿನ ವಿಷಯದ ಬಗ್ಗೆ ಮಾತನಾಡುತ್ತಿದ್ದು ಇದೊಂದು ಪ್ರಮುಖ ಪ್ರಶ್ನೆಯಾಗಿದೆ. ಸರಕಾರ ಎಲ್ಲ ಸೂಕ್ಷ್ಮ ವಿಷಯವನ್ನು ಗಮನಿಸಿ, ರೈತರ ಎಲ್ಲ ಸಮಸ್ಯೆಗೆ ಪರಿಹಾರ ಕೊಡುತ್ತೇವೆ’’ಎಂದು ಫಡ್ನವಿಸ್ ಹೇಳಿದ್ದಾರೆ.

‘‘ಮಹಾರಾಷ್ಟ್ರ ಮಾತ್ರವಲ್ಲ ಇಡೀ ದೇಶದ ರೈತರು ತೀವ್ರ ಸಂಕಷ್ಟದಲ್ಲಿದ್ದು ಕೇಂದ್ರ ಸರಕಾರ ಇದಕ್ಕೆ ಸ್ಪಂದಿಸಬೇಕಾಗಿದೆ’’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಿಪಿಐ ಮುಖಂಡ ಸೀತಾರಾಮ್ ಯೆಚೂರಿ ಮಧ್ಯಾಹ್ನ 2 ಗಂಟೆಗೆ ರೈತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರತಿಭಟನಾ ನಿರತ ರೈತರ ನಿಯೋಗ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿ ಫಡ್ನವಿಸ್‌ರನ್ನು ಭೇಟಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News