ಲಂಕಾದಲ್ಲಿ ಮತ್ತೆ ಹಿಂಸಾಚಾರ ಸ್ಫೋಟ: ಮುಸ್ಲಿಮ್ ಒಡೆತನದ ರೆಸ್ಟೋರೆಂಟ್ ಮೇಲೆ ದಾಳಿ

Update: 2018-03-12 16:51 GMT

ಕೊಲಂಬೊ, ಮಾ. 12: ಶ್ರೀಲಂಕಾದಲ್ಲಿ ರವಿವಾರ ಹೊಸದಾಗಿ ಕೋಮು ಹಿಂಸಾಚಾರ ನಡೆದಿದ್ದು, ಮುಸ್ಲಿಮ್ ಒಡೆತನದ ರೆಸ್ಟೋರೆಂಟೊಂದರ ಮೇಲೆ ದಾಳಿ ನಡೆಸಲಾಗಿದೆ.

ರಾಜಧಾನಿ ಕೊಲಂಬೊದಿಂದ 130 ಕಿ.ಮೀ. ದೂರದಲ್ಲಿರುವ ಪುಟ್ಟಲಂ ಜಿಲ್ಲೆಯ ಅನಮಡುವ ನಗರದಲ್ಲಿನ ರೆಸ್ಟೋರೆಂಟ್‌ನ ಮೇಲೆ ದುಷ್ಕರ್ಮಿಗಳು ಮುಂಜಾನೆ ದಾಳಿ ನಡೆಸಿದ್ದಾರೆ.

ಕಳೆದ ವಾರದ ಸೋಮವಾರ ಸ್ಫೋಟಗೊಂಡ ಕೋಮು ಗಲಭೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಏರ್ಪಡಿಸಿರುವ ನಡುವೆಯೇ ಹೊಸ ದಾಳಿ ಸಂಭವಿಸಿದೆ.

ಕೋಮುಗಲಭೆಯಲ್ಲಿ ಈವರೆಗೆ ಕ್ಯಾಂಡಿ ಪಟ್ಟಣದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು, ವ್ಯಾಪಾರ ಮಳಿಗೆಗಳು ಮತ್ತು ಮಸೀದಿಗಳಿಗೆ ಹಾನಿಯಾಗಿವೆ.

ಕಳೆದ ವಾರ ಬೌದ್ಧ ಸಿಂಹಳೀಯ ಸಮುದಾಯದ ವ್ಯಕ್ತಿಯೊಬ್ಬ ಸಾವಿಗೀಡಾದ ಹಿನ್ನೆಲೆಯಲ್ಲಿ ಹಿಂಸಾಚಾರ ನಡೆದ ಬಳಿಕ ದೇಶಾದ್ಯಂತ ಈಗ ಉದ್ವಿಗ್ನತೆ ನೆಲೆಸಿದೆ.

 ಕ್ಯಾಂಡಿಯಲ್ಲಿ ಕಳೆದ ವಾರ ನಡೆದ ಕೋಮು ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶನಿವಾರ ಮೂವರು ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ವಿಚಾರಣಾ ಆಯೋಗವನ್ನು ಸ್ಥಾಪಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News