ಕರಾಚಿಯಲ್ಲಿ ಟ್ವೆಂಟಿ-20 ಸರಣಿ ಆತಿಥ್ಯಕ್ಕೆ ಪಾಕ್ ಸಜ್ಜು

Update: 2018-03-12 19:03 GMT

ಕರಾಚಿ, ಮಾ.12: ಪಾಕಿಸ್ತಾನ ಕ್ರಿಕೆಟ್ ತಂಡ ಎಪ್ರಿಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟ್ವೆಂಟಿ-20 ಸರಣಿ ಆಯೋಜಿಸಲು ಸಜ್ಜಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ವೆಸ್ಟ್‌ಇಂಡೀಸ್ ತಂಡ ಎ.1,2 ಹಾಗೂ 4 ರಂದು 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆಡಲು ಪಾಕ್‌ಗೆ ಭೇಟಿ ನೀಡಲಿದೆ. ಈ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್ ವಾಪಸಾಗಲಿದೆ.

ಕಳೆದ 9 ವರ್ಷಗಳಿಂದ ಪಾಕ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಪರೂಪವಾಗಿದೆ. 2009ರಲ್ಲಿ ಲಾಹೋರ್‌ನಲ್ಲಿ ಉಗ್ರಗಾಮಿಗಳು ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ದಾಳಿ ನಡೆಸಿ ಆರು ಆಟಗಾರರು ಗಾಯಗೊಂಡಿದ್ದು, 8 ಪಾಕಿಸ್ತಾನಿ ಪ್ರಜೆಗಳು ಹತರಾಗಿದ್ದರು. ಆನಂತರ ಯಾವುದೇ ಕ್ರಿಕೆಟ್ ತಂಡ ಪಾಕ್‌ಗೆ ತೆರಳಿಲ್ಲ.

3ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್‌ನ ಫೈನಲ್ ಪಂದ್ಯ ಕರಾಚಿಯಲ್ಲಿ ನಡೆದಿತ್ತು. 2ನೇ ಆವೃತ್ತಿಯ ಐಎಸ್‌ಎಲ್ ಫೈನಲ್ ಲಾಹೋರ್‌ನಲ್ಲಿ ನಡೆದಿತ್ತು. ಕರಾಚಿಯಲ್ಲಿ ನಡೆದಿದ್ದ ಪಿಎಸ್‌ಎಲ್ ಫೈನಲ್ ವೇಳೆ ಐಸಿಸಿ ಭದ್ರತಾ ಸಲಹೆಗಾರ ರೆಗ್ ಡಿಕಾಸನ್ ಪಾಕ್‌ಗೆ ಭೇಟಿ ನೀಡಿದ್ದು, ಟ್ವೆಂಟಿ-20 ಸರಣಿಗೆ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ ಎಂದು ಸೇಥಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News