ಎಂಜಿನ್‌ನಲ್ಲಿ ದೋಷ: ಇಂಡಿಗೊ, ಗೋಏರ್ ನ 65 ವಿಮಾನಗಳ ಹಾರಾಟ ರದ್ದು

Update: 2018-03-13 13:52 GMT

ಮುಂಬೈ, ಮಾ. 13: ಇಂಡಿಗೊ ಹಾಗೂ ಗೋಏರ್ ನ 11 ವಿಮಾನಗಳು ದೋಷಯುಕ್ತ ಎಂಜಿನ್ ಹೊಂದಿದೆ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಹೇಳಿದ ಬಳಿಕ, ಇಂಡಿಗೊ ಹಾಗೂ ಗೋಏರ್ ದೇಶದ ಒಳಗಿನ ತನ್ನ 65 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಗುರುಗಾಂವ್ ಮೂಲದ ಇಂಡಿಗೊ ಪ್ರತಿ ದಿನ ಹಾರಾಟ ನಡೆಸುತ್ತಿರುವ 1000 ವಿಮಾನಗಳಲ್ಲಿ 47 ವಿಮಾನಗಳನ್ನು ರದ್ದುಗೊಳಿಸಿದೆ. ವಾಡಿಯಾ ಗ್ರೂಪ್ ಪ್ರವರ್ತನೆಯ ಗೋಏರ್ ತನ್ನ 18 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ.

8 ನಗರಗಳಿಂದ ಹಾರಾಟ ನಡೆಸುತ್ತಿರುವ 18 ವಿಮಾನಗಳನ್ನು ಗೋಏರ್ ರದ್ದುಪಡಿಸಿದೆ ಎಂದು ಗೋಏರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಗೋಏರ್ ನ 230 ವಿಮಾನಗಳು ಪ್ರತಿ ದಿನ ಹಾರಾಟ ನಡೆಸುತ್ತವೆ.

ದೇಶೀಯವಾಗಿ ಹಾರಾಡುತ್ತಿರುವ ತನ್ನ 47 ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಇಂಡಿಗೊ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ದಿಲ್ಲಿ, ಮುಂಬೈ, ಚೆನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಪಾಟ್ನಾ, ಶ್ರೀನಗರ, ಭುವನೇಶ್ವರ, ಅಮೃತಸರ, ಗುವಾಹತಿ ಹಾಗೂ ಇತರ ಕಡೆಗಳಿಂದ ಹಾರಾಟ ನಡೆಸುತ್ತಿರುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅದು ಹೇಳಿದೆ.

ಇಂಡಿಗೋದ 8 ಹಾಗೂ ಗೋಏರ್ ನ 3 ವಿಮಾನಗಳು ದೋಷಯುಕ್ತ ಇಂಜಿನ್ ಹೊಂದಿದೆ. ಆದುದರಿಂದ ಅವುಗಳ ಹಾರಾಟ ಸ್ಥಗಿತಗೊಳಿಸಬೇಕು ಎಂದು ಸೋಮವಾರ ವಿಮಾನ ಯಾನ ನಿಯಂತ್ರಣ ಸಂಸ್ಥೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಹೇಳಿತ್ತು. ‘‘ತಮ್ಮ ದಾಸ್ತಾನಿನಲ್ಲಿರುವ ಹೆಚ್ಚುವರಿ ಇಂಜಿನ್‌ಗಳನ್ನು ವಿಮಾನಗಳಿಗೆ ಮರು ಅಳವಡಿಸಲಾಗುವುದು ಎಂದು ಇಂಡಿಗೋ ಹಾಗೂ ಗೋಏರ್ ಹೇಳಿತ್ತು’’ ಎಂದು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯದ ಹೇಳಿಕೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News