ಮಂಗಳೂರಿನಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಲ್ಪಟ್ಟ ರಾತ್ರಿ ಶಾಲೆ

Update: 2018-03-14 07:01 GMT

1943ನೇ ಮಾರ್ಚ್ ತಿಂಗಳ 15ರಂದು ವಿವಿಧ ವಯೋಮಾನದ ಕೇವಲ ಐವರು ವಿದ್ಯಾರ್ಥಿಗಳನ್ನು ಸೇರಿಸಿ ಎಣ್ಣೆ ದೀಪದ ಬೆಳಕಿನ ಆಸರೆಯಲ್ಲಿ ಜ್ಞಾನಾರ್ಜನೆ ಮಾಡುವ ಒಂದೇ ಉದ್ದೇಶದಿಂದ ‘‘ತೊಟ್ಟಿಲಿನಿಂದ ಸಮಾಧಿಯವರೆಗೂ ಜ್ಞಾನವನ್ನು ಸಂಪಾದಿಸಿ’’ ಎಂಬ ಪ್ರವಾದಿಯವರ ಧ್ಯೇಯ ವಾಕ್ಯದೊಂದಿಗೆ ಮರ್‌ಹೂಮ್ ಹಾಜಿ ಖಾಲಿದ್ ಮುಹಮ್ಮದ್‌ರವರು ಮಂಗಳೂರಿನ ಪ್ರಥಮ ರಾತ್ರಿ ಶಾಲೆಯನ್ನು ಪ್ರಾರಂಭಿಸಿದರು. ಆ ಶಾಲೆಯೇ ಈಗ 75ರ ಸಂಭ್ರಮದಲ್ಲಿರುವ ನವ ಭಾರತ ರಾತ್ರಿ ಪ್ರೌಢ ಶಾಲೆ.

ವ್ಯಕ್ತಿಯೊಬ್ಬ/ಳು ಜ್ಞಾನ ಸಂಪನ್ನತೆ ಪಡೆಯಲು ಶಿಕ್ಷಣದ ಪಾತ್ರ ಮಹತ್ವದ್ದು. ವ್ಯಕ್ತಿಯ ಬದುಕಲ್ಲಿ ಅರಿವು ಮೂಡಿಸುವ ಶಿಕ್ಷಣ ದೊರಕಿದಲ್ಲಿ ಆ ಶಿಕ್ಷಣದ ಮುಖೇನ ಸೌಜನ್ಯ, ಸಚ್ಚಾರಿತ್ರ, ಸದಾಚಾರ, ಸದ್ಗುಣ, ಸಂಸ್ಕೃತಿ, ಸತ್ಯದ ಪಾಲನೆ ಎಲ್ಲವೂ ಸಾಧ್ಯವಾಗುತ್ತದೆ. ಶಿಕ್ಷಣದಿಂದಲೇ ವೈಯುಕ್ತಿಕ ಬದುಕಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ನಮ್ಮ ಸಮಾಜದಲ್ಲಿ ಕೆಲವರು ದೌರ್ಭಾಗ್ಯದಿಂದ ವಿದ್ಯೆಯಿಂದ ವಂಚಿತರಾಗಿದ್ದರೆ, ಇನ್ನು ಕೆಲವರು ತಾವು ಶಿಕ್ಷಣ ಪಡೆದು, ಆ ಶಿಕ್ಷಣದ ಬೆಳಕನ್ನು ಸಮಾಜಕ್ಕೂ ಪಸರಿಸುವಲ್ಲಿ ಪಣತೊಡುತ್ತಾರೆ. ಇಂತಹ ಉನ್ನತ ಧ್ಯೇಯವನ್ನಿಟ್ಟುಕೊಂಡ ವ್ಯಕ್ತಿಯೊಬ್ಬರ ಸಂಕಲ್ಪದಿಂದ ಹುಟ್ಟಿಕೊಂಡ ವಿದ್ಯಾಸಂಸ್ಥೆಯೊಂದು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆಯಾಗಿ ಅವರ ಬದುಕಲ್ಲಿ ಅಕ್ಷರದ ಬೆಳಕು ನೀಡುವುದರ ಮೂಲಕ ತಾನೂ ಬೆಳಗಿ ಹಲವು ಸಂವತ್ಸರಗಳನ್ನು ದಾಟಿ ಇಂದು 75ರ ಸಂಭ್ರಮವನ್ನಾಚರಿಸುತ್ತಿದೆ.

75 ವರುಷಗಳ ಹಿಂದೆ ಬ್ರಿಟಿಷರನ್ನು ಈ ದೇಶ ಬಿಟ್ಟು ತೊಲಗಿಸುವ ಸ್ವಾತಂತ್ರ ಚಳವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ. 1943ನೇ ಮಾರ್ಚ್ ತಿಂಗಳ 15ರಂದು ವಿವಿಧ ವಯೋಮಾನದ ಕೇವಲ ಐವರು ವಿದ್ಯಾರ್ಥಿಗಳನ್ನು ಸೇರಿಸಿ ಎಣ್ಣೆ ದೀಪದ ಬೆಳಕಿನ ಆಸರೆಯಲ್ಲಿ ಜ್ಞಾನಾರ್ಜನೆ ಮಾಡುವ ಒಂದೇ ಉದ್ದೇಶದಿಂದ ‘‘ತೊಟ್ಟಿಲಿನಿಂದ ಸಮಾಧಿಯವರೆಗೂ ಜ್ಞಾನವನ್ನು ಸಂಪಾದಿಸಿ’’ ಎಂಬ ಪ್ರವಾದಿಯವರ ಧ್ಯೇಯ ವಾಕ್ಯದೊಂದಿಗೆ ಮರ್‌ಹೂಮ್ ಹಾಜಿ ಖಾಲಿದ್ ಮುಹಮ್ಮದ್‌ರವರು ಮಂಗಳೂರಿನ ಪ್ರಥಮ ರಾತ್ರಿ ಶಾಲೆಯನ್ನು ಪ್ರಾರಂಭಿಸಿದರು. ಆ ಶಾಲೆಯೇ ಈಗ 75ರ ಸಂಭ್ರಮದಲ್ಲಿರುವ ನವ ಭಾರತ ರಾತ್ರಿ ಪ್ರೌಢ ಶಾಲೆ.
ಮಂಗಳೂರಿನ ಮರ್‌ಹೂಮ್ ಹಾಜಿ ಫಕೀರ್ ಸಾಹೇಬ್ ಮತ್ತು ಶ್ರೀಮತಿ ಆಮಿನಾ ದಂಪತಿಯ ಮಗನಾಗಿ 1924ನೇ ಮಾರ್ಚ್ 15ರಂದು ಜನಿಸಿದವರು ಮರ್‌ಹೂಮ್ ಹಾಜಿ ಖಾಲಿದ್ ಮುಹಮ್ಮದ್. ಅವರ ಧರ್ಮಪತ್ನಿ ಮರ್‌ಹೂಮ್ ಫಾತಿಮಾ ಖಾಲಿದ್. ಅವರದು ಐವರು ಪುತ್ರರು ಮತ್ತು ಪುತ್ರಿಯೊಬ್ಬಳನ್ನೊಳಗೊಂಡ ಮಧ್ಯಮ ವರ್ಗದ ಕುಟುಂಬವಾಗಿತ್ತು.
‘‘ಬೆಳೆಯುವ ಸಿರಿ ಮೊಳಕೆಯಲ್ಲೇ’ ಎಂಬಂತೆ ಸದ್ಗುಣ ಸಂಪನ್ನರಾದ ಅವರು ಬಾಲ್ಯದಲ್ಲಿಯೇ ವಿದ್ಯೆಯೆಡೆಗೆ ಆಕರ್ಷಿತರಾಗಿ ನಂತರ ವಿದ್ಯಾಕ್ಷೇತ್ರದಲ್ಲೇ ಸಾಧನೆ ಮಾಡಲು ಸಾಧ್ಯವಾಯಿತು. 1943ರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ಆರಂಭಿಸಿದ ರಾತ್ರಿ ಶಾಲೆ, ನಗರದ ಮೊಟ್ಟ ಮೊದಲ ರಾತ್ರಿ ಶಾಲೆಯಾಗಿ ಮಾನ್ಯತೆ ಪಡೆದು, ಹೆಸರುವಾಸಿಯಾಗಿ 75 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ ನವಭಾರತ ರಾತ್ರಿಶಾಲೆ ಎಂಬ ಹೆಸರಿನಿಂದ ಜನಮನದಿಂದ ಅಚ್ಚೊತ್ತಿದೆ.
 ಮ. ಹಾಜಿ ಖಾಲಿದ್ ಮುಹಮ್ಮದರು ತಾನು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ವಯಸ್ಕರಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ. ಹೆಸರು ಬರೆಯಲು ಕೂಡ ಬರದ ಅನೇಕರಿಗೆ ಅಕ್ಷರದ ಗುರುತು ಮಾಡಿಸಿದ್ದಾರೆ. ವಯಸ್ಕರ ಶಿಕ್ಷಣವನ್ನು ಮೂರು ದಶಕಗಳ ಹಿಂದೆಯೇ ‘ಈಚ್ ವನ್ ಟೀಚ್ ಟೆನ್’ ಚಳವಳಿಯ ರೂಪದಲ್ಲಿ ಆರಂಭಿಸಿದವರು. ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದಾದರೆ ‘ಶಿಕ್ಷಣವೇ ಜೀವನ, ಜೀವನವೇ ಶಿಕ್ಷಣ’ವೆಂದು ಬದುಕಿದವರು ಅವರು. ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಭಾರತೀಯನಾಗಿ ಬಾಳಬೇಕೆಂಬುದು ಅವರ ಆಂತರ್ಯದ ಇಂಗಿತವಾಗಿತ್ತು. ಶುದ್ಧ ಗಾಂಧೀವಾದಿಯಾಗಿದ್ದ ಅವರು ಹಿಂದೂ, ಕ್ರೈಸ್ತ, ಮುಸಲ್ಮಾನ ಎಂಬ ಭೇದ ಭಾವ ಕಲ್ಪಿಸದೇ ಎಲ್ಲ ಧರ್ಮದವರಿಗೂ ವಿದ್ಯಾಭ್ಯಾಸ ದೊರಕಿಸಿದವರು.

ಅವರು ಆರಂಭಿಸಿದ ಈ ರಾತ್ರಿ ಶಾಲೆ ಬಹಳ ಸಂಕೀರ್ಣ ಸ್ಥಿತಿಯಲ್ಲಿ ಆರಂಭಗೊಂಡರೂ ಅನಕ್ಷರತೆಯನ್ನು ಅಮೂಲಾಗ್ರವಾಗಿ ಹೊಡೆದೋಡಿಸುವ ಮಾರಕಾಸ್ತ್ರವಾಗಿ ಕೆಲಸ ಮಾಡಿತ್ತು. ಅವರ ರಾತ್ರಿ ಶಾಲೆ ವಯಸ್ಕರ ಶಿಕ್ಷಣಕ್ಕೆ ಪಣತೊಟ್ಟಿದ್ದಲ್ಲದೆ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಗಳ ಕಲಿಕೆಗೆ ವಿಶೇಷ ಒತ್ತು ನೀಡಿತ್ತು. ನಗರದಲ್ಲಿ ಅದೆಷ್ಟೋ ಬಡ ಮಕ್ಕಳು ಆಹಾರಕ್ಕಾಗಿ ಕೂಲಿನಾಲಿ ಮಾಡುತ್ತಾ ವಿದ್ಯೆಯಿಂದ ವಂಚಿತರಾಗಿ, ಇನ್ನಿತರ ಮಕ್ಕಳು ದಿನನಿತ್ಯ ಶಾಲೆಗೆ ಹೋಗುವುದನ್ನು ಓದು ಬರಹವನ್ನು ಕಲಿಯುವುದನ್ನು ಕಂಡು ತಮ್ಮ ದುರದೃಷ್ಟವನ್ನು ಹಳಿದುಕೊಳ್ಳುತ್ತಿದ್ದರೆ ಅಂತಹವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ದಾರಿತೋರಿಸಿ, ಇಂತಹವರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ವ್ಯಕಿಗಳಾಗಲು ಶ್ರಮಿಸಿದ ಈ ಶಾಲೆ, ಇಂತಹ ಶಿಕ್ಷಣದ ಹಂಬಲವಿರುವ ವಿದ್ಯಾರ್ಥಿಗಳನ್ನು 1948ರಲ್ಲೇ ಇ.ಎಸ್.ಎಲ್.ಸಿ ಪರೀಕ್ಷೆಗೂ ಸಿದ್ಧಪಡಿಸಿತ್ತು. 1953ರಲ್ಲಿ ಶಾಲೆಯ ಸಾಧನೆಯ ಇನ್ನೊಂದು ಮೈಲಿಗಲ್ಲಾಗಿ ಮದ್ರಾಸ್ ಯುನಿವರ್ಸಿಟಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಸಲ್ಪಡುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲಾಯಿತು. 1955ನೇ ಇಸವಿಯಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಶಾಲೆ ಉತ್ತಮ ಫಲಿತಾಂಶವನ್ನು ಪಡೆದಿತ್ತು.
ಆ ಸಮಯದಲ್ಲಿ ಆಸಕ್ತ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯ ಪರೀಕ್ಷೆಗೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ಮತ್ತು ಮೈಸೂರು ರಿಯಾಸತ್ ಹಿಂದಿ ಪರಿಷತ್, ಬೆಂಗಳೂರಿನಲ್ಲಿ ನಡೆಯುವ ಪರೀಕ್ಷೆಗೂ ತರಬೇತಿ ನೀಡಲಾಗುತ್ತಿತ್ತು. ಆಗಿನ ಕಾಲದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ನಡೆಸುತ್ತಿದ್ದ ಎಸೆಸೆಲ್ಸಿ ಪರೀಕ್ಷೆಯಲ್ಲೂ ವಿದ್ಯಾರ್ಥಿಗಳು ತೊಡಗಿಕೊಂಡು ಉತ್ತಮ ಫಲಿತಾಂಶವನ್ನು ತಂದಿದ್ದರು.
ಆರ್ಥಿಕ ದುಸ್ಥಿತಿ ಬಡತನ ಹಾಗೂ ಇನ್ನಿತರ ಕಾರಣಗಳಿಂದ ಶಿಕ್ಷಣವನ್ನು ನಿಲ್ಲಿಸಬೇಕಾಗಿ ಬಂದ ಅಸಂಖ್ಯ ಬಡ ವಿದ್ಯಾರ್ಥಿಗಳಿಗೆ ಆಶಾ ಕಿರಣವಾಗಿ ಅವರಿಗೆಲ್ಲ ಉತ್ತಮ ಶಿಕ್ಷಣವನ್ನು ಒದಗಿಸಿ ಅವರ ಶಿಕ್ಷಣ ಪಡೆಯುವ ಕನಸನ್ನು ನನಸಾಗಿಸಿ ಅವರ ಬದುಕನ್ನು ಹಸನುಗೊಳಿಸುವ ಮೂಲಕ ಈ ಶಾಲೆ ಸ್ಥಾಪನೆಯಾದಂದಿನಿಂದ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಡಾಕ್ಟರ್, ವಕೀಲ, ಅಧ್ಯಾಪಕ, ಬ್ಯಾಂಕ್ ಹುದ್ದೆಗಳನ್ನು ಪಡೆದಿದ್ದಲ್ಲದೆ ಇನ್ನಿತರ ಹಲವು ಕ್ಷೇತ್ರಗಳಲ್ಲಿ ದುಡಿಯುತ್ತಾ ಉತ್ತಮ ಸಾಧನೆಗಳನ್ನು ಮಾಡಿದ್ದಾರೆ.
‘‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಇರಬೇಕು’’ ಎಂಬ ಮಾತಿಗೆ ಸಾಕ್ಷಿಯಾಗಿ ಇಲ್ಲಿಯ ವಿದ್ಯಾರ್ಥಿಗಳು ಪಠ್ಯ ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿ್ದಾರೆ. ಶಿಸ್ತು, ಸಂಯಮ, ತ್ಯಾಗ ಸೇವೆಗೆ ಹೆಸರು ಪಡೆದ ಈ ವಿದ್ಯಾ ಸಂಸ್ಥೆಯು ಜಾತಿ,ಮತ ಭೇದವೆಣಿಸದೆ ಕರ್ತವ್ಯ ದೃಷ್ಟಿಯಿಂದ ವಿದ್ಯಾದಾನ ಮಾಡುತ್ತಾ ಮುನ್ನಡೆದುಕೊಂಡು ಬಂದಿದೆ.
ಯಾರೊಬ್ಬರಿಂದಲೂ ಕೀಳು ಮಾತನ್ನು ಕೇಳದೆ ಯಾರೊಬ್ಬರ ದಾರಿಗೂ ಮುಳ್ಳಾಗದೆ ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡಿ ಸ್ವತಂತ್ರವಾಗಿ ಜನಾನುರಾಗಿಯಾಗಿ ಬೆಳೆದು ಬಂದ ಈ ಸಂಸ್ಥೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದ ಮರ್‌ಹೂಮ್ ಹಾಜಿ ಖಾಲಿದ್ ಮುಹಮ್ಮದ್‌ರವರು 2005ರ ಡಿಸೆಂಬರ್ 16ರಂದು ತಮ್ಮ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಮಂಗಳೂರು ನಗರದಲ್ಲಿ ಧ್ರುವ ನಕ್ಷತ್ರದಂತೆ ತಲೆ ಎತ್ತಿ ನಿಂತಿರುವ ಈ ನವಭಾರತ ರಾತ್ರಿ ಶಾಲೆ 75 ವರ್ಷಗಳ ಸೇವೆಯನ್ನು ಪೂರೈಸಿರುವುದು ಹೆಮ್ಮೆಯ ವಿಷಯ. ಅದು ಸಾರ್ಥಕವಾದ ಸೇವೆಯ ಕುರುಹೂ ಹೌದು. ಸಹಸ್ರಾರು ವಿದ್ಯಾಸಕ್ತರ ಬದುಕಿಗೆ ಅಕ್ಷರದ ಬೆಳಕು ನೀಡಿದ ಈ ಸಂಸ್ಥೆಯ 75ರ ಸಂಭ್ರಮದ ಉತ್ಸಾಹ ಸಂಸ್ಥೆಯನ್ನು ಶತಮಾನವನ್ನೂ ಮೀರಿ ಬೆಳೆಸಲಿ ಎಂಬುದು ವಿದ್ಯಾಭಿಮಾನಿಗಳ ಹಾರೈಕೆ

Writer - ಝುಲೇಖ ಮುಮ್ತಾಝ್

contributor

Editor - ಝುಲೇಖ ಮುಮ್ತಾಝ್

contributor

Similar News

ಜಗದಗಲ
ಜಗ ದಗಲ