ಗ್ರಾಹಕ ಹಕ್ಕುಗಳಿಗೆ ಬೆಲೆ ಬರಲಿ

Update: 2018-03-14 18:53 GMT

ಗ್ರಾಹಕ ಶಿಕ್ಷಣವಿದ್ದಾಗ ಮಾತ್ರ ಹಕ್ಕುಗಳ ಅರಿವಾಗುತ್ತದೆ. ಅನ್ಯಾಯವಾದಾಗ ದೂರಿಕೊಳ್ಳುವ, ಪರಿಹಾರ ಪಡೆಯುವ ಹಕ್ಕುಗಳೂ ಊರ್ಜಿತವಾಗಿದೆ. ಕಾನೂನುಬದ್ಧವಾದ ಹಕ್ಕುಗಳಿದ್ದರೂ ಅದನ್ನು ಬಳಸಿಕೊಳ್ಳಲು ಜನರು ಮುಂದಾಗುವುದಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲೂ ಗ್ರಾಹಕ ವೇದಿಕೆಗಳಿವೆ. ಸಹಕರಿಸುವ ಸಂಘಟನೆಗಳಿವೆ. ಆದರೆ, ಗ್ರಾಹಕರು ಮಾತ್ರ ಎಚ್ಚರಗೊಳ್ಳುವುದೇ ಇಲ್ಲ.

ಮಾರ್ಚ್ 15 ವಿಶ್ವ ಗ್ರಾಹಕ ಹಕ್ಕುಗಳ ದಿನ. World Consumer Day. ಅಂದರೆ ಎಲ್ಲ ನಾಗರಿಕರೂ ತಮ್ಮ ಹಕ್ಕುಗಳ ಬಗ್ಗೆ ಸಂಭ್ರಮಿಸಬೇಕಾದ ದಿನ. ದಿನ ನಿತ್ಯ ಕಾಡುತ್ತಿರುವ ಬೆಲೆ ಏರಿಕೆ, ಸಾರಿಗೆ ಸಂಪರ್ಕ, ಸಮಸ್ತ ವ್ಯವಹಾರಗಳಲ್ಲಿ ಆಗುತ್ತಿರುವ ಮೋಸ ವಂಚನೆ, ಜನಸಾಮಾನ್ಯರ ಬದುಕನ್ನೇ ಕಂಗೆಡಿಸುತ್ತಿರುವ ವಾತಾವರಣ ಎದ್ದು ಕಾಣುತ್ತಿದೆ. ಆದರೂ ಕೂಡಾ ಜನಸಾಮಾನ್ಯರು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಸಿದ್ಧರಿಲ್ಲ. ಯಾಕೆಂದರೆ ತಮಗೆ ಹಕ್ಕುಗಳಿವೆ, ರಕ್ಷಣೆ ಇದೆ ಎಂಬ ಅರಿವೇ ಇಲ್ಲ. ಭ್ರಷ್ಟಾಚಾರ ಎಲ್ಲೆಲ್ಲೂ ಅವ್ಯಾಹತವಾಗುತ್ತಿರುವ ಈ ಕಾಲದಲ್ಲಿ ನೈತಿಕತೆಯನ್ನು ಬದಿಗೊತ್ತಿ ಸ್ವಾರ್ಥ ಪಥದತ್ತ ಸಾಗುತ್ತಿರುವುದನ್ನು ನಾವಿಂದು ಕಾಣಬಹುದು. ರಾಜಕಾರಣವಿಂದು ಪರಿಶುದ್ಧವಾಗಿ ಉಳಿದಿಲ್ಲ. ಸಂಸ್ಕೃತಿ, ಧರ್ಮ, ಸಮನ್ವಯದ ಸಹಬಾಳ್ವೆ ಕನಸಾಗಿಯೇ ಉಳಿದಿದೆ. ಹಣದ ಹಿಂದೆ ಸರದಿ ನಿಂತ ಜನರಿಗೆ ಬಡತನದ ಅರಿವಾಗುವುದಿಲ್ಲ. ಸಂವಿಧಾನವೇ ಕಡೆಗಣಿಸಲ್ಪಡುವ ಕಾಲದಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯಾಗಲೀ, ಮಹಿಳಾ ಸಂರಕ್ಷಣಾ ಕಾಯ್ದೆಯಾಗಲೀ ದೃಢವಾಗಿ ಜಾರಿಯಾಗಲು ಅಸಾಧ್ಯವೆನಿಸುವಂತಾಗಿದೆ. ಎಲ್ಲೆಲ್ಲೂ ತಾಂಡವವಾಡುತ್ತಿರುವ ಅತ್ಯಾಚಾರ, ಅನಾಚಾರಗಳ ಮಧ್ಯೆ ಅವ್ಯವಹಾರವೆಂಬುದು ಕಪ್ಪು ಛಾಯೆಯಡಿಯಲ್ಲಿ ನುಸುಳಿ ಹೋಗುತ್ತದೆ. ಕನಿಷ್ಠ ವಿಶ್ವ ಗ್ರಾಹಕರ ದಿನ, ವ್ಯವಹಾರ ಲೋಕದ ಕರಿಛಾಯೆಗೊಂದು ಮಿಂಚನ್ನಾದರೂ ಕಾಣುವ ಆಶಯವಿದು.

1962 ಮಾರ್ಚ್ 15ರಂದು ಅಮೆರಿಕದ ಅಧ್ಯಕ್ಷ ಕೆನಡಿಯವರು ಗ್ರಾಹಕ ಹಕ್ಕುಗಳನ್ನು ಅಧಿಕೃತವಾಗಿ ಜಾರಿಗೊಳಿಸಿದಾಗಿನಿಂದ ಇಂದಿನವರೆಗೂ ವಿಶ್ವಾದ್ಯಂತ ಗ್ರಾಹಕ ಸಂರಕ್ಷಣೆಗಾಗಿ ಶ್ರಮ ಪಡಲಾಗುತ್ತಿದೆ. ಕನ್ಸೂಮರ್ ಇಂಟರ್‌ನ್ಯಾಶನಲ್ (CI) ವಿಶ್ವದಾದ್ಯಂತ ಇದನ್ನು ಪಸರಿಸಿತು. 1982ರಿಂದ ವಿಶ್ವ ಗ್ರಾಹಕ ದಿನವಾಗಿ ಮಾರ್ಚ್ 15ನ್ನು ಆಚರಿಸಲು ನಿರ್ಧರಿಸಿತು. ವಿಶ್ವಸಂಸ್ಥೆಯು ಅದಕ್ಕಾಗಿ ಪ್ರತ್ಯೇಕ ಮಾರ್ಗದರ್ಶಿ ಸೂತ್ರವನ್ನು ನಿರ್ಮಿಸಿ 1985 ಎಪ್ರಿಲ್ 10ರಂದು ಜನರಲ್ ಅಸೆಂಬ್ಲಿಯಲ್ಲಿ ಮಂಡಿಸಿತ್ತು. ಅಂದಿನಿಂದ ಪ್ರತೀ ವರ್ಷವೂ ಮಾರ್ಚ್ 15 ವಿಶ್ವ ಗ್ರಾಹಕ ದಿನವಾಗಿ ಆಚರಿಸಲ್ಪಡುತ್ತದೆ.
ಜನಸಾಮಾನ್ಯರೆಲ್ಲರಿಗೂ ಬದುಕುವ ಹಕ್ಕು, ಅಂದರೆ ಸುರಕ್ಷಿತ, ಶುದ್ಧ ಆಹಾರ, ಶುದ್ಧ ಸ್ವಚ್ಛ ಪರಿಸರ ಮತ್ತು ವಂಚನಾರಹಿತವಾದ ಸುರಕ್ಷಿತ ವ್ಯವಹಾರ ಗ್ರಾಹಕ ಸಂರಕ್ಷಣೆಯ ಮೂಲೋದ್ದೇಶವಾಗಿದ್ದವು. ಸುರಕ್ಷಿತ ಬದುಕಿಗಾಗಿ ಕೆಲವು ಆವಶ್ಯಕತೆಗಳಿವೆ. ಆಹಾರ, ನೀರು, ಗಾಳಿ, ಬಟ್ಟೆ, ಆಶ್ರಯ, ಮತ್ತು ಆರೋಗ್ಯ ಪ್ರತಿಯೋರ್ವ ಮನುಷ್ಯನ ಆವಶ್ಯಕತೆ. ಇವುಗಳನ್ನು ಸುರಕ್ಷಿತವಾಗಿ ಸುಲಭವಾಗಿ ಪಡೆಯುವ ಹಕ್ಕನ್ನು ಕಾನೂನುಬದ್ಧಗೊಳಿಸಿದೆ. ಇದು ಪ್ರಥಮ ಹಕ್ಕು.
ಸುರಕ್ಷಿತ ಬದುಕು ಎರಡನೆಯ ಹಕ್ಕು. ವ್ಯವಹಾರ ಲೋಕವೆಂದರೆ, ಮನುಷ್ಯನ ಆವಶ್ಯಕತೆಗಳನ್ನು ಪೂರೈಸಲು ಬೇಕಾಗುವ ವಿಭಿನ್ನ ಸೇವೆಗಳು, ವಸ್ತುಗಳನ್ನು ಒದಗಿಸುವ ವ್ಯಾಪಾರ ಮಾತ್ರವಲ್ಲ. ವಿದ್ಯುತ್, ಸಾರಿಗೆ, ನೀರು ಸರಬರಾಜು, ಆಸ್ಪತ್ರೆಗಳು, ತ್ಯಾಜ್ಯ ವಿಲೇವಾರಿ ಇತ್ಯಾದಿ ಸೇವೆಗಳೂ ಆವಶ್ಯಕತೆಗಳೇ. ಇವು ಅಪಾಯಕಾರಿಯಾಗಬಾರದು. ಬದುಕಿಗೆ ಅಪಾಯ ತರುವ ಆತಂಕವುಂಟು ಮಾಡುವ ಸೇವೆಯಿಂದಲೂ ರಕ್ಷಣೆಯಿದೆ. ಬೇಕಾದ ವಸ್ತು ಯಾ ಸೇವೆಯನ್ನು ಆರಿಸಿಕೊಳ್ಳುವುದು ಕೂಡಾ ಗ್ರಾಹಕ ಹಕ್ಕಾಗಿದೆ. ಗ್ರಾಹಕ ಶಿಕ್ಷಣವಿದ್ದಾಗ ಮಾತ್ರ ಹಕ್ಕುಗಳ ಅರಿವಾಗುತ್ತದೆ. ಅನ್ಯಾಯವಾದಾಗ ದೂರಿಕೊಳ್ಳುವ, ಪರಿಹಾರ ಪಡೆಯುವ ಹಕ್ಕುಗಳೂ ಊರ್ಜಿತವಾಗಿವೆ. ಕಾನೂನುಬದ್ಧವಾದ ಹಕ್ಕುಗಳಿದ್ದರೂ ಅದನ್ನು ಬಳಸಿಕೊಳ್ಳಲು ಜನರು ಮುಂದಾಗುವುದಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲೂ ಗ್ರಾಹಕ ವೇದಿಕೆಗಳಿವೆ. ಸಹಕರಿಸುವ ಸಂಘಟನೆಗಳಿವೆ. ಆದರೆ, ಗ್ರಾಹಕರು ಮಾತ್ರ ಎಚ್ಚರಗೊಳ್ಳುವುದೇ ಇಲ್ಲ.
ಉದಾಹರಣೆಗೆ ಮಂಗಳೂರಿನ ಬಗ್ಗೆಯೇ ಹೇಳುವುದಾದರೆ...


ಮಂಗಳೂರು ನಗರದಲ್ಲಿ ಬಹಳಷ್ಟು ಕಾಲೇಜುಗಳಿವೆ. ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ನಿತ್ಯ ಬಂದು ಹೋಗುವ ಪ್ರಯಾಣಿಕರಿದ್ದಾರೆ. ಆದರೆ, ಇಲ್ಲಿರುವ ಪ್ರತಿಯೊಂದು ಹೊಟೇಲ್‌ಗಳೂ ಶೋಷಕರಂತೆಯೇ ವರ್ತಿಸುತ್ತಾರೆ. ಗ್ರಾಹಕ ನಿಯಮದಂತೆ, ಗುಣಮಟ್ಟ, ಅಳತೆ ಮತ್ತು ಬೆಲೆ ಗಮನಿಸಲೇಬೇಕಾದ ಸಂಗತಿ. ಆದರೆ, ಯಾವ ಹೊಟೇಲ್‌ಗಳೂ ಇದನ್ನು ಪಾಲಿಸುವುದಿಲ್ಲ. ಒಂದು ಪ್ಲೇಟ್ ಊಟದಲ್ಲಿ ಎಷ್ಟು ಗ್ರಾಂ ಅನ್ನ ಇದೆ? ಒಂದು ಕಪ್ ಚಹಾದಲ್ಲಿ ಎಷ್ಟು ಎಂಎಲ್ ಚಹಾ ಇದೆ? ಒಂದು ಕಪ್ ಮೊಸರಿನಲ್ಲಿ ಎಷ್ಟು ಎಂಎಲ್ ಮೊಸರಿದೆ? ಯಾರೂ ಗಮನಿಸುವುದಿಲ್ಲ. ನಿಯಮ ಇದೆ. ಜಿಲ್ಲಾಡಳಿತ, ಆಹಾರ ಇಲಾಖೆ, ಯಾರೂ ಕೇಳುವುದಿಲ್ಲ. 40ರೂ.ಯಿಂದ 60ರೂ.ವರೆಗೆ ವಸೂಲು ಮಾಡುವ ಊಟದಲ್ಲಿ ಮಾನದಂಡವೇ ಇಲ್ಲವೆಂದಾದರೆ ಶೋಷಣೆ ಹೇಗಿರಬಹುದು? ಊಹಿಸಲು ಅಸಾಧ್ಯ. ಕೆಲವೆಡೆ ಇಡ್ಲಿಗೆ 4 ರೂ., ಚಪಾತಿಗೆ 5 ರೂ.ನಂತೆ ಮಾರುವುದಿದೆ. ಅದೇ ಇಡ್ಲಿ ಯಾ ಚಪಾತಿಗೆ ಹೊಟೇಲ್‌ಗೆ ಹೋದಾಗ 15ರಿಂದ 20ರವರೆಗೂ ಹೋಗುವುದಿದೆ. ಅದೇ ರೀತಿ 50 ಎಂಎಲ್‌ನಷ್ಟಿರಬಹುದಾದ ಚಹಾ, ಕೆಲವೆಡೆ 10 ರೂ.ಗೆ ಇದ್ದರೆ, ಕೆಲವೆಡೆ 20 ರೂ.ವರೆಗೂ ಏರುತ್ತದೆ. ಗ್ರಾಹಕ ರಕ್ಷಣಾ ನಿಯಮದ ಕನಿಷ್ಠ ಪ್ರಭಾವವೂ ಇಲ್ಲದ ವ್ಯವಹಾರ ಹೊಟೇಲ್ ವ್ಯಾಪಾರ. ಇದು ಗ್ರಾಹಕ ಶೋಷಣೆ ಅಲ್ಲವೇ? ಕಾಯ್ದೆ ಇಲ್ಲಿ ಯಾಕೆ ಅನ್ವಯವಾಗುವುದಿಲ್ಲ? ಎಲ್ಲಿದೆ ಗ್ರಾಹಕ ಸಂರಕ್ಷಣೆ?
ನಮ್ಮ ಆಸ್ಪತ್ರೆಗಳತ್ತ ಕಣ್ಣರಳಿಸಿದರೆ ಸಾಕು. ಆಸ್ಪತ್ರೆ ಎಂದರೆ ರೋಗಿಗಳು ಅರೆಜೀವ ಕಳೆದುಕೊಳ್ಳುತ್ತಾರೆ. ತಜ್ಞರ ದರ 500 ರೂ.ಯಿಂದ 1,500 ರೂ.ವರೆಗೂ ಏರುತ್ತಿದೆ. ಇದಕ್ಕೆ ಕಾನೂನಿನ ಮಾನದಂಡವಿಲ್ಲ. ಆಸ್ಪತ್ರೆಯ ಸೇವಾದರಗಳಿಗೂ ಮಾನದಂಡವಿಲ್ಲ. ಖಾಸಗಿ ವೈದ್ಯರಲ್ಲಿ ರಶೀದಿ ಕೊಡುವ ವ್ಯವಸ್ಥೆಯೇ ಇಲ್ಲ. ಇತರ ಎಲ್ಲಾ ಸೇವೆಗಳಿಗೂ ರಶೀದಿ ಕಡ್ಡಾಯ. ಜೀವ ಉಳಿಸುವ ಈ ಸೇವೆಗೆ ನಿಯಂತ್ರಣ ಯಾಕಿಲ್ಲ? ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಶೋಷಣೆಗೆ ನಿಯಂತ್ರಣ ಯಾಕಿಲ್ಲ? ಗ್ರಾಹಕ ನಿಯಮದಂತೆ ಪ್ರತಿಯೊಂದು ಆಸ್ಪತ್ರೆಯಲ್ಲೂ ದರಪಟ್ಟಿ ಕಡ್ಡಾಯ. ರಶೀದಿ ಕೂಡಾ. ಪ್ರತಿಯೋರ್ವ ರೋಗಿಯ ಬಳಿ, ರೋಗವಿವರ ವರದಿ (Patients Summary Report) ಇರಿಸುವುದು ಕಡ್ಡಾಯ. ಆದರೆ ಮಂಗಳೂರಿನ ಖಾಸಗಿ ಆಸ್ಪತ್ರೆಗಳು ಯಾವ ನಿಯಮವನ್ನ್ನೂ ಪಾಲಿಸುವುದಿಲ್ಲ. ಗ್ರಾಹಕ ಕಾಯ್ದೆ ಇವರಿಗೂ ಅನ್ವಯ. ಜಿಲ್ಲಾಡಳಿತ ಯಾಕೆ ಸುಮ್ಮನಿದೆ? ಆಸ್ಪತ್ರೆಗಳ ಸನದು ಯಾಕೆ ಜಾರಿಯಾಗಿಲ್ಲ? ಗ್ರಾಹಕ ಸಂರಕ್ಷಣಾ ಕಾಯ್ದೆ ಇದ್ದರೂ ಸರಕಾರ, ಆಡಳಿತ ಕಡೆಗಣಿಸಿದರೆ, ಜನಸಾಮಾನ್ಯರಿಗೆ ತಲುಪಲು ಸಾಧ್ಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಕ್ರಮ ಜರುಗಿಸಬಹುದೆಂದು ಆಶಿಸೋಣ.
ಜಿಲ್ಲೆಯಲ್ಲಿ ಗ್ರಾಹಕ ಸಂರಕ್ಷಣಾ ಇಲಾಖೆ ಇದೆ. ಗ್ರಾಹಕ ಮಾಹಿತಿ ಕೇಂದ್ರವೂ ಇದೆ. ಆದರೆ ಜನಸಾಮಾನ್ಯರ ಪಾಲಿಗೆ ಮಾಹಿತಿಯೂ ಇಲ್ಲ. ರಕ್ಷಣೆಯೂ ಇಲ್ಲ. ಜಿಲ್ಲಾಡಳಿತ ಮಾತ್ರವಲ್ಲ, ಸರಕಾರವೇ ಜನಸಾಮಾನ್ಯರಿಗೆ, ಈ ಕಾಯ್ದೆಯನ್ನು ತಲುಪಿಸಲು ಸಿದ್ಧವಾಗಿಲ್ಲ. ಕೆಲವೇ ಮಂದಿ ಶೋಷಕರು, ಸಮಸ್ತ ನಾಗರಿಕ ಸಮುದಾಯವನ್ನೇ ವಂಚಿಸುತ್ತಿದ್ದಾರೆೆ. ಜನರು ಎಚ್ಚೆತ್ತು ಹಕ್ಕುಗಳಿಗಾಗಿ ಹೋರಾಟಕ್ಕಿಳಿಯಬೇಕು. ಜಿಲ್ಲಾಡಳಿತ ಗಮನಹರಿಸುವಂತೆ ಮಾಡಬೇಕು. ರೇಡಿಯೋಗಳಲ್ಲಿ, ಟಿವಿಗಳಲ್ಲಿ ‘ಜಾಗೋ ಗ್ರಾಹಕ’ ಎಂದ ಮಾತ್ರಕ್ಕೆ ಗ್ರಾಹಕ ಕಾಯ್ದೆ ಜನರಿಗೆ ತಲುಪುವುದಿಲ್ಲ. ಜಿಲ್ಲಾಡಳಿತ ಈ ಕಾಯ್ದೆ ನಿಯಮವನ್ನು ಕಡ್ಡಾಯ ಜಾರಿಗೊಳಿಸಬೇಕು. ಆಸ್ಪತ್ರೆಗಳು, ಸಾರಿಗೆ, ದೂರವಾಣಿ, ಹೊಟೇಲ್‌ಗಳು, ವ್ಯಾಪಾರಿಗಳ ಮೇಲೆ ಕಾಯ್ದೆಯನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ಜನಸಾಮಾನ್ಯ ಹಕ್ಕುಗಳ ಫಲಾನುಭವಿಗಳಾಗುತ್ತಾರೆ.
‘ಸ್ವಚ್ಛ ಭಾರತ ಅಭಿಯಾನ’ ಜನಸಾಮಾನ್ಯರಿಗೊಂದು ವರದಾನ. ಆದರೆ ಇದು ಬರ್ಹಿದೆಸೆಗೊಂದು ಸೂರು ಒದಗಿಸುವಷ್ಟರಲ್ಲೇ ಮುಗಿಯಬಾರದು. ಕಸ ನಿರ್ವಹಣೆಯಲ್ಲೂ ಕಡ್ಡಾಯವಾಗಿ, ಮುಖ್ಯವಾಗಿ ನಗರಪಾಲಿಕೆಗಳಲ್ಲಿ ಮುತುವರ್ಜಿ ಬೇಕು. ಮಂಗಳೂರಿನಲ್ಲಿ ಈ ಹೊಣೆಯನ್ನು ವಹಿಸಿಕೊಟ್ಟ ಕಂಪೆನಿ ಕಾರ್ಮಿಕರಿಂದ ಆಗಿಂದಾಗ್ಗೆ ಕೆಲಸ ಸ್ಥಗಿತ, ಸಾಮಾನ್ಯ ತ್ಯಾಜ್ಯಗಳ ಹೊರತಾಗಿರುವ ವಸ್ತುಗಳನ್ನು ಸ್ವೀಕರಿಸದಿರುವುದು, ಬೇಡವಾದ ವಸ್ತುಗಳನ್ನು ರಾಶಿ ಹಾಕಲು, ಒಂದು ವ್ಯವಸ್ಥೆ ಇಲ್ಲದಿರುವುದು, ರಸ್ತೆ ಬದಿ ಸತ್ತು ಬಿದ್ದಿರುವ ಪ್ರಾಣಿ, ಪಕ್ಷಿಗಳನ್ನು ಎತ್ತಲು ತ್ಯಾಜ್ಯಗಾಡಿಗಳು ಗಮನ ಹರಿಸದಿರುವುದು ಎದ್ದು ಕಾಣುವ ದುರವಸ್ಥೆಗಳಾಗಿವೆ. ಪ್ರತ್ಯೇಕ ಕಸತೊಟ್ಟಿಗಳಾಗಲಿ ‘ರಿಂಗ್’ ಅಥವಾ ‘ಜಾಗ ವ್ಯವಸ್ಥೆ’ ಇಲ್ಲದಿರುವುದರಿಂದ ಖಾಲಿ ನಿವೇಶನಗಳೇ ಕಸತೊಟ್ಟಿಗಳಾಗಿ, ಕಸದ ಗಾಡಿಯವರು ಅವುಗಳನ್ನೆತ್ತದೆ ಪರಿಸರಕ್ಕೆ ಹಾನಿಯಾಗುತ್ತಿದ್ದರೂ ಕಾರ್ಪೊರೇಟರ್‌ಗಳು ಕಣ್ಮುಚ್ಚಿ ಕುಳಿತಿರುವುದನ್ನು ಕಾಣಬಹುದು. ತ್ಯಾಜ್ಯ ನಿರ್ವಹಣೆ ಹದಗೆಟ್ಟಿರುವಾಗ ನಗರ ಸ್ವಚ್ಛತೆ ಹೇಗೆ ಸಾಧ್ಯ? ರಸ್ತೆ ಬದಿಯಲ್ಲೇ ಮೂತ್ರ ಮಾಡುವವರಿಗೆ ದಂಡ ವಿಧಿಸಿದೆಯಾದರೂ ಜಾರಿಯಾಗದ ನಿಯಮವೆಂದರಿತವರು ರಸ್ತೆ ಬದಿಯನ್ನೇ ಬಳಸುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸ್ವಚ್ಛತೆ ಬಯಲಿನಿಂದ ನಗರಕ್ಕೆ ಬರಬೇಕು. ನಿಯಮ ಕಾರ್ಯರೂಪಕ್ಕೆ ಬರಬೇಕು. ಜನರಿಗೆ ಅರಿವು ಮೂಡಿಸಬೇಕು.
ಮಹಾನಗರ ಸಾರಿಗೆ ವ್ಯವಸ್ಥೆ ಮತ್ತು ರಸ್ತೆಗಳು ಜನಸಾಮಾನ್ಯರಿಗೊಂದು ಶಾಪದಂತಿದೆ. ಸಾರಿಗೆ ಇಲಾಖೆ ವಾಹನದಲ್ಲಿ ಶ್ರೀಮಂತರ ಬಗ್ಗೆ ವಹಿಸುವ ಕಾಳಜಿ ಕಾಲ್ನಡಿಗೆಯಿಂದ ಹೋಗುವ ಜನಸಾಮಾನ್ಯರ ಬಗ್ಗೆ ವಹಿಸುತ್ತಿಲ್ಲ. ನಗರ ಕೇಂದ್ರಗಳಲ್ಲೇ ಸರಿಯಾದ ಫುಟ್‌ಪಾತ್‌ಗಳಿಲ್ಲ. ಅಪಾಯಕಾರಿ ಫುಟ್‌ಪಾತ್‌ಗಳೇ ಹೆಚ್ಚು. ಕೆಲವೆಡೆ ಫುಟ್‌ಪಾತ್‌ಗಳಿದ್ದರೂ ಅವುಗಳ ಮೇಲೆ ವಾಹನಗಳೇ ನಿಂತಿರುತ್ತವೆೆ. ಅದನ್ನು ಯಾರೂ ಆಕ್ಷೇಪಿಸುವುದಿಲ್ಲ. ಕೆಲವೆಡೆ ರಸ್ತೆ ಅಗಲೀಕರಿಸಿ ಸುವ್ಯವಸ್ಥೆ ಮಾಡಿದ್ದರೂ ಆ ರಸ್ತೆಗಳಲ್ಲೇ ವಾಹನ ನಿಲುಗಡೆಗಳಿರುತ್ತವೆ. ಇದನ್ನು ಸಾರಿಗೆ ಇಲಾಖೆ ಆಕ್ಷೇಪಿಸುವುದಿಲ್ಲ. ‘‘ರಸ್ತೆ ಮಾಡುವುದು ಮತ್ತು ಕಡಿಯುವುದು’’ ವರ್ಷವಿಡೀ ಇರುವ ಯೋಜನೆ. ಇದರಿಂದಾಗುವ ನಷ್ಟದ ಹೊರೆ ಜನರಿಗೆ. ಲಾಭ ಗುತ್ತಿಗೆದಾರರಿಗೆ. ಇದು ರಸ್ತೆ ಯೋಜನೆಯ ವೈಫಲ್ಯವಲ್ಲವೇ? ಕಾಯ್ದೆಗಳಿದ್ದರೇನು? ಅದನ್ನು ಸುರಕ್ಷಿತವಾಗಿ ಜಾರಿಗೊಳಿಸುವ ಮನಸ್ಸು ಸರಕಾರಕ್ಕೆ, ಅಧಿಕಾರಿಗಳಿಗಿರಬೇಕು. ಗ್ರಾಹಕರೇ ಈ ದಿನವಾದರೂ ಯೋಚನೆ ಮಾಡಿರಿ.

Writer - ಪ್ರೊ. ಬಿ.ಎಂ.ಇಚ್ಲಂಗೋಡು

contributor

Editor - ಪ್ರೊ. ಬಿ.ಎಂ.ಇಚ್ಲಂಗೋಡು

contributor

Similar News

ಜಗದಗಲ
ಜಗ ದಗಲ