ಸ್ಟೀಫನ್ ಹಾಕಿಂಗ್ ಎಂಬ ಅನಂತ ಸಾಧಕ

Update: 2018-03-14 18:56 GMT

ಸ್ಟೀಫನ್ ಹಾಕಿಂಗ್ 1942 ಜನ ವರಿ 4ರಂದು ಇಂಗ್ಲೆಂಡಿನ ಆಕ್ಸ್‌ಫರ್ಡ್ ನಗರದಲ್ಲಿ ಜನಿಸಿದರು. ( ಇನ್ನು ಮುಂದೆ ಹಾಕಿಂಗ್). ಅದು ಗೆಲಿಲಿಯೋ ತೀರಿಕೊಂಡ ದಿನಕ್ಕೆ ಸರಿಯಾಗಿ 300 ನೇ ವರ್ಷವಾಗಿತ್ತು. ಈತನ ತಂದೆ ಫ್ರಾಂಕ್ ಹಾಕಿಂಗ್ ಮತ್ತು ತಾಯಿ ಇಸೊಬೆಲ್ಲ. ಮಗು ಬುದ್ಧಿವಂತನಾದರೂ ಆರಂಭದಿಂದ ಒಂದಲ್ಲ ಒಂದು ಕಾಯಿಲೆ ತಗಲುತ್ತಲೇ ಇತ್ತು. ವಯಸ್ಸಿಗೆ ತಕ್ಕ ಬೆಳವಣಿಗೆ ಇರಲಿಲ್ಲ. ಯಾವಾಗಲೂ ಸಣಕಲಾಗಿ ಇರುತ್ತಿದ್ದುದರಿಂದ ದೊಗಳೆ ಬಟ್ಟೆಗಳನ್ನೇ ತೊಟ್ಟುಕೊಳ್ಳುತ್ತಿದ್ದ. ಬಾಲ್ಯದಿಂದಲೂ ಆತನಿಗೆ ರಿಲಿಜನ್, ದೇವರ ಬಗೆಗೆ ಆಸಕ್ತಿ ಇರಲಿಲ್ಲ. ಅಂತಹ ಚರ್ಚೆಗಳಲ್ಲಿ ಅವನು ಯಾವತ್ತೂ ಭಾಗಿಯಾಗುತ್ತಿರಲಿಲ್ಲ. ಯಾವುದನ್ನೂ ಕೂಡ ಪ್ರಯೋಗದ ಮೂಲಕವೇ ದೃಢಪಡಿಸಿಕೊಳ್ಳಬೇಕೆಂಬ ಛಲ ಹುಡುಗನದು. ಹಾಗಾಗಿ ಇಂದ್ರಿಯಾತೀತ ವಿಷಯಗಳ ಸತ್ಯಾಸತ್ಯವನ್ನು ತಿಳಿಯಲು ಪ್ರಯೋಗಗಳನ್ನು ಮಾಡುತ್ತಿದ್ದ. ಹದಿನಾಲ್ಕನೆಯ ವಯಸ್ಸಿನಲ್ಲಿಯೇ ತನ್ನ ಆಸಕ್ತಿಗೆ ತಕ್ಕಂತೆ ಗಣಿತವನ್ನೇ ಆಯ್ಕೆ ಮಾಡಿಕೊಂಡ ಹಾಕಿಂಗ್ ಉಳಿದವರು ಬೆರಗಾಗುವ ರೀತಿಯಲ್ಲಿ ಅದನ್ನು ಕರಗತ ಮಾಡಿಕೊಂಡ.

ಬಾಲ್ಯದ ಶಿಕ್ಷಣ ಮುಗಿದ ನಂತರ ಉನ್ನತ ಶಿಕ್ಷಣವನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಮಗನಿಗೆ ನೀಡಬೇಕೆಂಬುದು ತಂದೆ ತಾಯಿಗಳ ಇಚ್ಛೆಯಾಗಿತ್ತು. ಕೊನೆಗೂ ಹಾಕಿಂಗ್‌ಗೆ ಅವನ ಬೌದ್ಧಿಕ ಸಾಮರ್ಥ್ಯದಿಂದ ಸಹಜವಾಗಿಯೇ ಅಲ್ಲಿ ಪ್ರವೇಶ ಸಿಕ್ಕಿತ್ತು. ದಿನಗಳೆದಂತೆ ಹಾಕಿಂಗ್‌ನ ಪ್ರತಿಭೆ ಜನಜನಿತವಾಯಿತು. ಆ ಕುರಿತು ಆತನ ಸಹಪಾಠಿಗಳು ಹೀಗೆ ಹೇಳುತ್ತಾರಂತೆ:
ಒಮ್ಮೆ ಕಠಿಣ ಸಮಸ್ಯೆಗಳನ್ನು ಕೊಟ್ಟು, ನಮ್ಮ ಪ್ರಾಧ್ಯಪಕರು ಬಿಡಿಸಲು ಒಂದು ವಾರ ಕಾಲಾವಕಾಶವನ್ನು ನೀಡಿದರು. ಸ್ಟೀಫನ್ ಹಾಕಿಂಗ್ ಬಿಟ್ಟು ನಮಗಾರಿಗೂ ಅದನ್ನು ಬಿಡಿಸಲಾಗಲಿಲ್ಲ. ನಮ್ಮ ಗುರುಗಳು ಅವನನ್ನು ಬಹಳ ಕೊಂಡಾಡಿದರು. ತರಗತಿ ಮುಗಿದ ಮೇಲೆ ಅವನು ತನ್ನ ಉತ್ತರದ ಪತ್ರಿಕೆಗಳನ್ನು ಅಲ್ಲಿಯೇ ಬಿಟ್ಟು, ಹೊರಟ್ಟಿದ್ದ. ನಾವಾಗಿದ್ದರೆ ಅಂತಹದನ್ನು ನಮ್ಮ ಜೀವನಪರ್ಯಂತ ಕಾಪಾಡಿಕೊಳ್ಳುತ್ತಿದ್ದೆವು. ಅವನಿಗೆ ಎಲ್ಲವೂ ನೆನಪಿನಲ್ಲೇ ಇರುತ್ತಿತ್ತು. (ಬಿ. ಎಸ್. ಮಯೂರ, ಸ್ಟೀಫನ್ ಹಾಕಿಂಗ್ ಬದುಕು ಮತ್ತು ವಿಚಾರ.

ಹೀಗೆ ಬಾಲ್ಯದಲ್ಲಿಯೇ ಪ್ರತಿಭಾವಂತನಾದರೂ ಹುಡುಗ ದಿನದಿನಕ್ಕೆ ಕ್ಷೀಣವಾಗುತ್ತಲೇ ಇದ್ದ. ಆದರೂ ಆಕ್ಸ್‌ಫರ್ಡ್‌ನಲ್ಲಿ ವಿದ್ಯಾಭ್ಯಾಸವನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ ಹಾಕಿಂಗ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಹೋದ. ಆಕ್ಸ್‌ಫರ್ಡ್‌ನಲ್ಲಿದ್ದಾಗಲೇ ಆತನಿಗೆ ತೊಂದರೆಗಳು ಕಾಣಿಸಿಕೊಂಡು ಕಾಲಿಗೆ ಬೂಟು ತೊಡುವುದಕ್ಕೂ ಕಷ್ಟವಾಗುತ್ತಿತ್ತು. ನಿಶ್ಯಕ್ತಿ ಇದ್ದುದರಿಂದ ಅಕ್ಷರಗಳು ಸೊಟ್ಟಪಟ್ಟ ಆಗುತ್ತಿದ್ದವು. ಆತನ ಕೈ ನಿಯಂತ್ರಣದಲ್ಲಿಯೇ ಇರುತ್ತಿರಲಿಲ್ಲ. ಅಂತೂ ಕೆಂಬ್ರಿಡ್ಜ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಯಿತು. ಪ್ರೊ. ಡೆನ್ನಿಸ್ ಸ್ಟಿಯಾಮ್ ಆತನ ಮಾರ್ಗದರ್ಶಕರಾದರು. ಈ ನಡುವೆ 1962ರ ಕ್ರಿಸ್‌ಮಸ್ ರಜೆಗೆ ಹಾಕಿಂಗ್ ಊರಿಗೆ ಹೊರಟ. ಅವನ ಗೆಳೆಯರೆಲ್ಲರೂ ಸೇರಿದ್ದರು. ಈ ಸಂತೋಷ ಕೂಟದಲ್ಲಿ ಮನೆ ಮಂದಿಯಾಗಿ ಎಲ್ಲರಿಗೂ ಆತನ ದೈಹಿಕ ನ್ಯೂನತೆ ತಿಳಿದು ಬಂತು. ಆತನಿಗೆ ಸೀಸೆಯಿಂದ ಲೋಟಕ್ಕೆ ನೀರು ತುಂಬಿಸಿಕೊಳ್ಳಲು ಆಗುತ್ತಿರಲಿಲ್ಲ. ಈ ಸಂತೋಷಕೂಟಕ್ಕೆ ಅವನ ಬಾಲ್ಯದ ಗೆಳತಿ ಜೇನ್ ವಿಲ್ಡ್ ಕೂಡ ಬಂದಿದ್ದಳು. ಹಾಕಿಂಗ್‌ಗೆ ಯಾವುದೋ ಗಂಭೀರವಾದ ಕಾಯಿಲೆೆ ಬಂದಿರುವುದು ಅವಳ ಗಮನಕ್ಕೆ ಬಂದಿತು. ಮುಂದೆ ಹಾಕಿಂಗ್‌ಗೆ ಕಾಯಿಲೆೆಯ ತಪಾಸಣೆಗೆ ಹೋಗಲೇಬೇಕಾಯಿತು. ಆಗಲೇ ಆ ಭಯಾನಕ ಕಾಯಿಲೆಯ ಪರಿಚಯವಾದುದು. ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುವ ಈ ಭಯಂಕರ ಕಾಯಿಲೆಯ ಹೆಸರು ಅಮಿಟ್ರೋಫಿಕ್ ಲೆಟರಲ್ ಸೆಲಿರೋಸಿಸ್ ಎಂಬುದಾಗಿದೆ. ಸಂಕ್ಷಿಪ್ತವಾಗಿ ಎ.ಎಲ್.ಎಸ್. ಎಂದು ಕರೆಯುತ್ತಾರೆ. ಈ ಕಾಯಿಲೆೆ ತಗಲಿದ ವ್ಯಕ್ತಿಗೆ ಬೆನ್ನೆಲುಬಿನ ನರಗಳು ಕ್ಷೀಣಿಸತೊಡಗುತ್ತವೆ. ಅದು ಮುಂದುವರಿದಂತೆಲ್ಲ ಮೆದುಳಿನ ಸ್ವಯಂಸಂಚಾಲಕ ನರ ಕೇಂದ್ರಗಳೂ ಘಾಸಿಯಾಗುತ್ತವೆ. ಕ್ರಮೇಣ ಮಾಂಸಖಂಡಗಳು ನಿಷ್ಕ್ರಿಯವಾದರೂ ಉಳಿದಂತೆ ಮೆದುಳಿನ ಯಾವ ಭಾಗಕ್ಕೂ ಹಾನಿಯಾಗುವುದಿಲ್ಲ. ಚಿಂತನೆ ಮತ್ತು ಜ್ಞಾಪಕಶಕ್ತಿಗಳು ಚೆನ್ನಾಗಿಯೇ ಇರುತ್ತವೆ. ಅಂತಿಮವಾಗಿ ಗಂಟಲಿನ ಮಾಂಸಖಂಡಗಳು ನಿಷ್ಕ್ರಿಯವಾಗಿ ಒಂದೊಂದೇ ಚಲನಗಳು ಸ್ಥಗಿತವಾಗುತ್ತ ರೋಗಿ ಸಾಯುತ್ತಾನೆ. ಇಂತಹ ಭಯಂಕರ ಕಾಯಿಲೆೆಗೆ ಹಾಕಿಂಗ್ ತುತ್ತಾಗಿದ್ದ. ಇಷ್ಟಾದರೂ ಹಾಕಿಂಗ್‌ನ ಅಧ್ಯಯನ ಸಾಗಿತ್ತು.ಅವನ ಪ್ರತಿಭೆ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಜನಜನಿತವಾಗುವುದಕ್ಕೆ ತುಂಬ ದಿನ ಬೇಕಾಗಿರಲಿಲ್ಲ. ಈ ಕಾಲಕ್ಕೆ ಪ್ರತಿಷ್ಠಿತ ರಾಯಲ್ ಸೊಸೈಟಿಯಲ್ಲಿ ಪ್ರೊ. ಹಾಯ್ಲೆರ್ ಎಂಬ ಶ್ರೇಷ್ಠ ವಿಜ್ಞಾನಿಯ ಪ್ರಬಂಧ ಮಂಡನೆಯ ಸಂದರ್ಭದಲ್ಲಿ ಹಾಕಿಂಗ್ ಅವರ ಚಿಂತನೆಯನ್ನು ಪ್ರಶ್ನಿಸಿ, ಸುದ್ದಿ ಮಾಡಿದ್ದನು. ಈ ನಡುವೆ ಆತನ ಬಾಲ್ಯದ ಗೆಳತಿ ಜೇನ್ ಆಗಾಗ ಹಾಕಿಂಗ್‌ನನ್ನು ನೋಡಲು ಬರುತ್ತಿದ್ದಳು. ಜೇನ್ ಎಲ್ಲ ರೀತಿಯಿಂದಲೂ ಹಾಕಿಂಗ್‌ನನ್ನು ಕಾಪಾಡಿದಳು. ಇದೇ ವೇಳೆಯಲ್ಲಿ ಆತನ ಪಿ.ಎಚ್.ಡಿ ಅಧ್ಯಯನವೂ ಮುಂದುವರಿಯುತ್ತಿತ್ತಲ್ಲದೇ ಅದು ಸಾಂಗವಾಗಿ ನಡೆದು ಡಾ. ಹಾಕಿಂಗ್ ಆದನು. ಆ ಬಳಿಕ ರೇಸ್ ವಿಶ್ವವಿದ್ಯಾನಿಲಯದಲ್ಲಿ ಅವನು ಮುಂದಿನ ಅಧ್ಯಯನವನ್ನು ಶಿಷ್ಯವೇತನದೊಂದಿಗೆ ಮುಂದುವರಿಸಿದ. ಮುಂದೆ 1965 ಜುಲೈನಲ್ಲಿ ಹಾಕಿಂಗ್ ಮತ್ತು ಜೇನ್ ವಿಲ್ಡ್ ಅವರ ವಿವಾಹ ನಡೆಯಿತು. ಸ್ಟೀಫನ್ ಹಾಕಿಂಗ್‌ನನ್ನು ವೈದ್ಯರು ಅಲ್ಪಾಯುಷಿ ಎಂದು ಹೇಳಿರುವುದು ಜೇನ್‌ಗೆ ಗೊತ್ತಿದ್ದರೂ ಆಕೆ ಅವನ ಪ್ರತಿಭೆಗೆ ಮನಸೋತು ಈ ವಿವಾಹಕ್ಕೆ ಮುಂದಾಗಿದ್ದಳು. ಶಿಷ್ಯವೇತನದಿಂದಲೇ ಈ ದಂಪತಿ ಕುಟುಂಬ ವ್ಯವಹಾರವನ್ನು ನಿಭಾಯಿಸುತ್ತಿದ್ದರು.
ಹಾಕಿಂಗ್‌ನ ವ್ಯಾಧಿ ಮುಂದುವರಿಯುತ್ತಲೇ ಇತ್ತು. ಈಗ ಆತನಿಗೆ ಕೈಗೆ ಊರುಗೋಲು ಸಾಕಾಗುತ್ತಿರಲಿಲ್ಲ. ಕಂಕುಳಗಳಿಗೂ ಊರುಗೋಲುಗಳು ಬೇಕಾದವು. ಅಷ್ಟಾದರೂ ಆತ ಎದೆಗುಂದದೆ ವ್ಯಾಸಂಗ ಮುಂದುವರಿಸಿದ. ಈಗ ಹಾಕಿಂಗ್ ದಂಪತಿಯ ಸಂಸಾರ ತುಂಬು ಸಂಸಾರವಾಯಿತು. 1969ರಲ್ಲಿ ಮಗ ರಾಬರ್ಟ್ ಮತ್ತು 1970ರಲ್ಲಿ ಮಗಳು ಲೂಸಿ ಜನಿಸಿದರು. 1974ರಲ್ಲಿ ಹಾಕಿಂಗ್ ಪ್ರತಿಭೆಯನ್ನು ಗೌರವಿಸಿ ಪ್ರತಿಷ್ಠಿತ ರಾಯಲ್ ಸೊಸೈಟಿಯ ಸದಸ್ಯತ್ವವನ್ನು ನೀಡಲಾಯಿತು. ಆಗ ಆತನಿಗೆ 32 ವರ್ಷ. ಆದುದರಿಂದಲೇ ಈ ಗೌರವಕ್ಕೆ ಪಾತ್ರವಾದ ವಿಶ್ವದ ಮೊದಲ ವಿಜ್ಞಾನಿ ಆತನೆನಿಸಿದ. ಈ ವಯಸ್ಸಿಗೆ ಹಾಕಿಂಗ್ ಎಲ್ಲವೂ ಆಗಿದ್ದು, ಅಂತಾರಾಷ್ಟ್ರೀಯ ಭೌತವಿಜ್ಞಾನಿ ಮಾತ್ರವಲ್ಲ ವಿಶ್ವ ವಿಜ್ಞಾನಿಯೂ ಆಗಿದ್ದ. ಆದರೆ ಅಂತಹ ಮಹಾವಿಜ್ಞಾನಿ ಮಾತ್ರ ಗಾಲಿಕುರ್ಚಿಯಲ್ಲಿಯೇ ಸಂಚರಿಸುತ್ತಿದ್ದ. ಇದೆಲ್ಲದರ ನಡುವೆ 1979ರಲ್ಲಿ ಹಾಕಿಂಗ್‌ನ ಮೂರನೆಯ ಮಗ ತಿಮೊತಿಯ ಜನನವೂ ಆಯಿತು. ಇದರೊಂದಿಗೆ ಆತನ ಆರ್ಥಿಕ ಸಮಸ್ಯೆಯೂ ಬಿಗಡಾಯಿಸಿತು. ಗೆಳೆಯರು ವಿಜ್ಞಾನದ ಕುರಿತು ಜನಪ್ರಿಯ ಪುಸ್ತಕವೊಂದನ್ನು ಬರೆಯಲು ಸೂಚಿಸಿದರು. ಗೆಳೆಯರ ಒತ್ತಾಯದ ಮೇರೆಗೆ ಹಾಕಿಂಗ್ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕವನ್ನು ಬರೆದದ್ದು. ಈ ಪುಸ್ತಕದ ಆರು ಲಕ್ಷ ಪ್ರತಿಗಳು ಕೆಲವೇ ವರ್ಷಗಳಲ್ಲಿ ಖರ್ಚಾದವು ಎಂದ ಮೇಲೆ ಅದರ ಪ್ರಸಿದ್ಧಿಯನ್ನು ಬೇರೆ ಮಾತುಗಳಲ್ಲಿ ಹೇಳಬೇಕಾಗಿಲ್ಲವೆನಿಸುತ್ತದೆ.

 ಇದರ ನಡುವೆ ಈ ದಂಪತಿಯ ಸಂಸಾರದಲ್ಲಿ ಬಿರುಕು ಕೂಡ ಕಾಣಿಸಿತು. ಇಪ್ಪತ್ತೈದು ವರ್ಷಗಳ ದಾಂಪತ್ಯ ನಡೆಸಿದ ಈ ದಂಪತಿ ಈಗ ಬೇರಾಗುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಯಿತು. ಈಗಾಗಲೇ ಹಾಕಿಂಗ್ ಮಾತು ಕಳೆದುಕೊಂಡಿದ್ದರಿಂದ ಆತನ ಭಾವನೆಗಳು ಏನಿದ್ದವೋ ಯಾರಿಗೂ ಗೊತ್ತಿಲ್ಲ! ಆದರೂ ಈ ಮಹಾನ್ ವಿಜ್ಞಾನಿ ಅಧ್ಯಯನದಲ್ಲಿ ಎಡೆಬಿಡದೆ ನಿರತನಾದನು. ಆತನ ಖ್ಯಾತಿ ಈಗ ವಿಶ್ವವಿಖ್ಯಾತವಾಗಿತ್ತು. ಜನವರಿ 4, 2007ರಂದು ಅಂದರೆ ಆತನ ಹುಟ್ಟು ಹಬ್ಬದಂದು ಹಾಕಿಂಗ್ ಶೂನ್ಯ ಗುರುತ್ವ ವಲಯದಲ್ಲಿ ಹಾರಾಡಿ ಬಂದದ್ದು; ಭೂಮಿಯಲ್ಲಿ ನಡೆದಾಡಲೂ ಸಾಧ್ಯವಾಗದ ವ್ಯಕ್ತಿ ವಿಶ್ವ ಪರ್ಯಟನೆಯನ್ನೇ ಮಾಡಿದ್ದ! ಅಂದಹಾಗೆ ಹಾಕಿಂಗ್‌ಗೆ ಮಾತು ಬರುವುದಿಲ್ಲವಲ್ಲ ಎಲ್ಲವೂ ಕಂಪ್ಯೂಟರ್ ಮೂಲಕವೇ ನಡೆಯುತ್ತದೆ. ಆತನ ಕನ್ನಡಕಕ್ಕೆ ಜೋಡಿಸಿರುವ ಸಣ್ಣ ಇನ್‌ಫ್ರಾರೆಡ್ ಸ್ವಿಚ್‌ನಿಂದ ಕಂಪ್ಯೂಟರ್ ಕರ್ಸರ್ ನಿಯಂತ್ರಣವಾಗುತ್ತದೆ. ಅದರ ಮೂಲಕವೇ ಅವನ ಭಾವನೆ, ಬರವಣಿಗೆ ಎಲ್ಲವೂ ನಡೆಯುತ್ತದೆ. ಇದೀಗ ಹಾಕಿಂಗ್ ಕ್ರೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ನ್ಯೂಟನ್ಸ್ ಚೇಯರ್‌ನಲ್ಲಿ ಪ್ರಾಧ್ಯಾಪಕನಾಗಿ ನಿವೃತ್ತನಾಗಿದ್ದಾನೆ. ಅದು ಒಂದು ಕಾಲಕ್ಕೆ ನ್ಯೂಟನ್ಸ್ ಪ್ರಾಧ್ಯಾಪಕನಾಗಿದ್ದ ಹುದ್ದೆ ಎಂದರೆ ಹಾಕಿಂಗ್‌ನ ಪ್ರತಿಭೆಯ ಎತ್ತರ ಅರ್ಥವಾದೀತು. 1989ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಕೂಡ ಅವನಿಗೆ ದೊರೆಯಿತು. ಆಗಲೇ ಹೇಳಿದಂತೆ ವೈದ್ಯರು ಹಾಕಿಂಗ್ ಅಲ್ಪಾಯುಷಿ ಎಂದು ಹೇಳಿದ್ದರು. ಏಕೆಂದರೆ ಆತನಿಗೆ ತಗಲಿದ ರೋಗವೇ ಅಂಥದ್ದು. ಆದರೆ ಅದೆಲ್ಲವನ್ನು ಮೀರಿ ಇನ್ನೂ ಬದುಕಿದ್ದಾನೆ. ಇದು ಆತನ ಅಚಲ ಮನೋಸ್ಥೈರ್ಯದಿಂದ ಮಾತ್ರವೇ ಸಾಧ್ಯವಾದುದು. ಹಾಕಿಂಗ್ ಎಂದರೆ ಐನ್‌ಸ್ಟೈನ್‌ನ ಆನಂತರದ ಜಗತ್ತಿನ ಶ್ರೇಷ್ಠ ಬುದ್ಧಿವಂತನೆಂದೇ ಪ್ರಸಿದ್ಧಿ ಪಡೆದವನು. ನೊಬೆಲ್ ಪ್ರಶಸ್ತಿಯನ್ನು ಹೊರತುಪಡಿಸಿ, ಜಗತ್ತಿನ ಎಲ್ಲ ಉನ್ನತ ಪ್ರಶಸ್ತಿಗಳು ಆತನಿಗೆ ಸಂದಿವೆ. ಇದೀಗ ಅಗಲಿದ ದಂಪತಿ ಒಂದಾಗಿದ್ದಾರೆ ಎನ್ನುವ ಸಿಹಿ ಸುದ್ದಿಯೂ ಬಂದಿದೆ. ( ಇದು 2012ರಲ್ಲಿ ಬರೆದ ಲೇಖನ)

 ಕೃಪೆ: ಸ್ಟೀಫನ್ ಹಾಕಿಂಗ್ (ಎ ಬ್ರೀಫ್ ಹಿಸ್ಟರಿ ಆಫ್ ಟೈಮ್) ಒಂದು ಕೈಪಿಡಿ

Writer - ಡಾ. ಮಾಧವ ಪೆರಾಜೆ

contributor

Editor - ಡಾ. ಮಾಧವ ಪೆರಾಜೆ

contributor

Similar News

ಜಗದಗಲ
ಜಗ ದಗಲ