ಶ್ರೇಷ್ಠ ಭೌತ ವಿಜ್ಞಾನಿ ಹಾಕಿಂಗ್ ಗೆ ನೊಬೆಲ್ ಯಾಕೆ ಸಿಗಲಿಲ್ಲ?

Update: 2018-03-15 08:04 GMT

ಹೊಸದಿಲ್ಲಿ, ಮಾ.15: ಬ್ಲ್ಯಾಕ್ ಹೋಲ್ ಅಥವಾ ಕೃಷ್ಣ ರಂಧ್ರಗಳು ಶಾಶ್ವತವಲ್ಲ ಎಂದು ಹೇಳಿ ಕಾಸ್ಮೋಲಜಿ ಅಥವಾ ವಿಶ್ವವಿಜ್ಞಾನದ ವ್ಯಾಖ್ಯಾನವನ್ನೇ ಬದಲಾಯಿಸಿದ್ದ ಜಗದ್ವಿಖ್ಯಾತ ಭೌತಶಾಸ್ತ್ರಜ್ಞ, ಬುಧವಾರ ಇಹಲೋಕ ತ್ಯಜಿಸಿದ ಸ್ಟೀಫನ್ ಹಾಕಿಂಗ್ ವಿಜ್ಞಾನಕ್ಕೆ ನೀಡಿದ್ದ ಅಗಾಧ ಕೊಡುಗೆಯ ಹೊರತಾಗಿಯೂ ಭೌತಶಾಸ್ತ್ರದಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿಲ್ಲ. ಅವರು ವಿವರಿಸಿದ ಸಿದ್ಧಾಂತವನ್ನು ಗಮನಿಸಲು ಯಾ ಪರೀಕ್ಷಿಸಲು ಸಾಧ್ಯವಾಗಿಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ.

ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಅವರ ಸಿದ್ಧಾಂತವನ್ನು ಈಗ ಒಪ್ಪಲಾಗಿದೆಯಾದರೂ ಬ್ಲ್ಯಾಕ್ ಹೋಲ್ ಗಳು ನಶ್ವರವೆಂಬುದನ್ನು ಪರೀಕ್ಷಿಸುವ ದಾರಿಯೇ ಇಲ್ಲವಾಗಿದೆ ಎಂದು 'ದಿ ಸಾಯನ್ಸ್ ಆಫ್ ಲಿಬರ್ಟಿ' ಲೇಖಕ ತಿಮೋತಿ ಫೆರ್ರಿಸ್ ನ್ಯಾಷನಲ್ ಜಿಯೋಗ್ರಫಿಕ್ ನಲ್ಲಿನ ಲೇಖನವೊಂದರಲ್ಲಿ ಬರೆದಿದ್ದಾರೆ.

‘‘ಅವರ ಸಿದ್ಧಾಂತ ನಿಜವಾಗಿಯೂ ನಡೆದಿದ್ದನ್ನು ಗಮನಿಸಲಾಗಿದ್ದರೆ ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯುತ್ತಿತ್ತೇನೋ. ಆದರೆ ಮೊದಲ ನಕ್ಷತ್ರ ಗಾತ್ರದ ಬ್ಲ್ಯಾಕ್ ಹೋಲ್ ಸ್ಫೋಟಗೊಳ್ಳಲು ಆರಂಭಿಸುವ ತನಕ ಅಂದರೆ ಮುಂದಿನ ಲಕ್ಷಗಟ್ಟಲೆ ವರ್ಷಗಳ ತನಕ ಹಾಗಾಗಲಿಕ್ಕಿಲ್ಲ’’ ಎಂದು ಫೆರ್ರಿಸ್ ಹೇಳುತ್ತಾರೆ.

ನೊಬೆಲ್ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವ ಕ್ರಮವಿಲ್ಲ.

ಶಾಶ್ವತ ಎಂದು ನಂಬಲಾಗಿದ್ದ ಬ್ಲ್ಯಾಕ್ ಹೋಲ್ ಗಳು ತಮ್ಮ ಸತ್ವ ಕಳೆದುಕೊಂಡು ಕ್ರಮೇಣ ಆವಿಯಾಗಿ ಹೋಗಬಹುದೆಂದು1970ರಲ್ಲಿ ಹಾಕಿಂಗ್ ಅಂದುಕೊಂಡಿದ್ದರು. ಹಾಕಿಂಗ್ ಅವರ ಬ್ಲ್ಯಾಕ್ ಹೋಲ್ ಸಂಶೋಧನೆಯು ಸಾಪೇಕ್ಷತೆ (ರಿಲೇಟಿವಿಟಿ)ಯನ್ನು ಕ್ವಾಂಟಮ್ ಫಿಸಿಕ್ಸ್ ಜತೆ ಒಗ್ಗೂಡಿಸಿತ್ತು.

ನೊಬೆಲ್ ಪ್ರಶಸ್ತಿ ಪಡೆಯದೇ ಇದ್ದರೂ ಹಾಕಿಂಗ್ ಅವರ ಬಳಿ ಒಂದು ಡಜನಿಗಿಂತಲೂ ಅಧಿಕ ಗೌರವ ಪದವಿಗಳಿದ್ದವಲ್ಲದೆ, ಅವರಿಗೆ 1982ರಲ್ಲಿ 'ಕಮಾಂಡರ್ ಆಫ್ ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್' ಪ್ರಶಸ್ತಿಯೂ ದೊರಕಿತ್ತು. 1985ರಲ್ಲಿ ಅವರಿಗೆ ರಾಯಲ್ ಅಸ್ಟ್ರೋನಾಮಿಕಲ್ ಸೊಸೈಟಿಯ ಚಿನ್ನದ ಪದಕ ದೊರಕಿತ್ತು.

ಅವರು ರಾಯಲ್ ಸೊಸೈಟಿ ಫೆಲ್ಲೋ ಆಗಿದ್ದರಲ್ಲದೆ ಯುಎಸ್ ನ್ಯಾಷನಲ್ ಅಕಾಡಮಿ ಆಫ್ ಸಾಯನ್ಸ್ ಸದಸ್ಯರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News